ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಹೇರಿಕೆ ಬಗ್ಗೆ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ವರದಿ ಆಘಾತಕಾರಿ: ಎಚ್‌ಡಿಕೆ

Last Updated 10 ಅಕ್ಟೋಬರ್ 2022, 16:32 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.

ಕೇಂದ್ರ ಸರಕಾರ ತನ್ನ ಚಾಳಿ ಮುಂದುವರಿಸಿದೆ. ಇಡೀ ಭಾರತವನ್ನು ಹಿಡೆನ್ ಅಜೆಂಡಾ ಮೂಲಕ ಹಿಡಿದಿಟ್ಟುಕೊಳ್ಳುವ ಕಪಟ ಯತ್ನ ಮಾಡುತ್ತಿದೆ. ಅಮಿತ್ ಶಾ ನೇತೃತ್ವದ ಸಮಿತಿ, ಹಿಂದಿ ಹೇರಿಕೆ ಬಗ್ಗೆ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ವರದಿ ಆಘಾತಕಾರಿ ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ವಿನಾಶಕ್ಕೆ ದಾರಿ ಎಂದು #ಹಿಂದಿಹೇರಿಕೆನಿಲ್ಲಲಿ ಹ್ಯಾಷ್ ಟ್ಯಾಗ್ ಕೊಟ್ಟಿದ್ದಾರೆ.

ವರದಿಯ ಶಿಫಾರಸುಗಳನ್ನು ಓದಿ ನನಗೆ ದೊಡ್ಡ ಆಘಾತವೇ ಆಯಿತು. ಸರ್ವಾಧಿಕಾರಿ ಮನಃಸ್ಥಿತಿಯಿಂದ ಕನ್ನಡವೂ ಸೇರಿ ಪ್ರಾದೇಶಿಕ ಭಾಷೆಗಳನ್ನು ಹೊಸಕಿ ಹಾಕಿ ಇಡೀ ದೇಶದ ಮೇಲೆ ಹಿಂದಿ ಹೇರಿ ಬಹುತ್ವದ ಭಾರತವನ್ನು 'ಹಿಂದಿಸ್ತಾನ್ ' ಮಾಡುವ ಹುನ್ನಾರ ಇದರ ಹಿಂದಿದೆ. ವರದಿಯಲ್ಲಿರುವ ಅನೇಕ ಶಿಫಾರಸುಗಳು ಭಾರತೀಯ ಒಕ್ಕೂಟ ವ್ಯವಸ್ಥೆಯನ್ನು ಸೀಳಿ, ಛಿದ್ರ ಮಾಡುವಂತಿವೆ. ಒಂದು ದೇಶ, ಒಂದು ಧರ್ಮ, ಒಂದು ಭಾಷೆ ಎನ್ನುವ ವಿಚ್ಛಿದ್ರಕಾರಿ ನೀತಿಯ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ನಿರ್ನಾಮ ಮಾಡುವುದೇ ಅಮಿತ್ ಶಾ ಸಮಿತಿಯ ಅಮಿತೋದ್ದೇಶ ಎಂದು ಎಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಕಭಾಷೆಯ ಅಧಿಪತ್ಯವನ್ನು ಭಾರತ ಒಪ್ಪುವುದಿಲ್ಲ. ಬಹುತ್ವದಲ್ಲಿ ಏಕತೆಯ ಮೂಲಕ ಅಖಂಡವಾಗಿರುವ ಭಾರತವನ್ನು ಒಡೆದು ಆಳುವ ನೀತಿ ರಾಷ್ಟ್ರದ ಒಡಕಿಗೆ ಕಾರಣವೂ ಆಗಬಹುದು. ಕೇಂದ್ರ ಸರಕಾರ ಕೂಡಲೇ ಈ ವರದಿಯನ್ನು ಹಿಂಪಡೆದು, ಎಲ್ಲ ಭಾಷೆಗಳನ್ನೂ ಸಮಾನವಾಗಿ ನೋಡುವ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು. ಹಿಂದಿ ಪ್ರದೇಶಗಳಲ್ಲಿಯೂ ಹಿಂದಿ ಮಾತನಾಡುವವರ ಸಂಖ್ಯೆ ಕಡಿಮೆ ಇದೆ. ಹಿಂದಿಗಿಂತ ಇತರೆ ಭಾಷೆಗಳನ್ನು ಮಾತನಾಡುವ ಜನರೇ ದೇಶದಲ್ಲಿ ಹೆಚ್ಚಿದ್ದಾರೆ. ಸತ್ಯಸ್ಥಿತಿ ಹೀಗಿದ್ದರೂ ಬಿಜೆಪಿ ಹಿಂದಿ ಹೇರಿಕೆ ಮಾಡುತ್ತಿದೆ. ತ್ರಿಭಾಷಾ ಸೂತ್ರಕ್ಕೆ ತಿಲಾಂಜಲಿ ನೀಡುವ ಹುನ್ನಾರ ಇದು ಎಂದು ಆರೋಪಿಸಿದ್ದಾರೆ.

ಆರ್ಯ ಸಂಸ್ಕೃತಿಯ ತುಷ್ಟೀಕರಣವನ್ನು ಸಹಿಸುವ ಪ್ರಶ್ನೆ ಇಲ್ಲ.

ದಕ್ಷಿಣ ಭಾರತದಲ್ಲಿ ಆಟ ನಡೆಯುವುದಿಲ್ಲ ಎನ್ನುವ ಕಾರಣಕ್ಕೇ ಬಿಜೆಪಿ ಅಡ್ಡದಾರಿಯಲ್ಲಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಿತು. ಅದರ ಪರಿಣಾಮ ಹೆಜ್ಜೆಹೆಜ್ಜೆಗೂ ಕನ್ನಡಕ್ಕೆ ಕಂಟಕ ಎದುರಾಯಿತು. ಈಗ ಕನ್ನಡ ಸೇರಿ ತೆಲುಗು, ತಮಿಳು, ಮಲೆಯಾಳಂ, ಮರಾಠಿ, ಒರಿಯಾ ಸೇರಿ ಎಲ್ಲ ಅನ್ಯಭಾಷೆಗಳ ಅವಸಾನಕ್ಕೆ ಕೇಂದ್ರ ಸರಕಾರ ಮಹೂರ್ತ ಇಟ್ಟಿದೆ. ಯಾವುದೇ ಕಾರಣಕ್ಕೂ ಈ ವರದಿಯ ಶಿಫಾರಸುಗಳ ಜಾರಿಗೆ ಅವಕಾಶ ನೀಡಬಾರದು. ಎಲ್ಲ ರಾಜ್ಯಗಳೂ, ಅದರಲ್ಲೂ ದಕ್ಷಿಣದ ರಾಜ್ಯಗಳು ಒಗ್ಗಟ್ಟಾಗಿ ವಿರೋಧಿಸಬೇಕು. ಎಲ್ಲ ಭಾಷೆಗಳಲ್ಲಿ ಒಂದಷ್ಟೇ ಆಗಿರುವ ಹಿಂದಿ ಭಾಷೆಯ ಹೇರಿಕೆ ಎಂದರೆ, ಒಕ್ಕೂಟ ವ್ಯವಸ್ಥೆಗೆ ಹೆಡೆಮುರಿ ಕಟ್ಟುವ ದುಸ್ಸಾಹಸ ಎಂದೇ ಭಾವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಬಾಯಿಮಾತಿನಲ್ಲಿ ಸ್ಥಳೀಯ ಭಾಷೆಯ ಜಪ ಮಾಡುವ ಬಿಜೆಪಿ, ಆಂತರ್ಯದಲ್ಲಿ ಹಿಂದಿಯನ್ನೇ ಹೇರುತ್ತಿದೆ, ಇದು ಸತ್ಯ. ಕೂಡಲೇ ಕೇಂದ್ರದ ಸರಕಾರವು ಈ ವರದಿಯನ್ನು ವಾಪಸ್ ಪಡೆಯಬೇಕು. ಸರ್ವ ಭಾಷೆಗಳೂ ಸಮಾನ ಎನ್ನುವ ನೀತಿಗೆ ಬದ್ಧವಾಗಿರಬೇಕು. ಐಐಐಟಿ, ಐಐಎಂ, ಏಮ್ಸ್, ಕೇಂದ್ರೀಯ - ನವೋದಯ ವಿದ್ಯಾಲಯಗಳಲ್ಲಿ ಹಿಂದಿ ಅಥವಾ ಸ್ಥಳೀಯ ಭಾಷೆಯಲ್ಲಿ ಬೋಧನೆ ಮಾಡಿ ಎನ್ನುವ ವರದಿ, ಅದೇ ಸ್ಥಳೀಯ ಭಾಷೆಗಳ ಸಂಹಾರಕ್ಕೆ ಅನೇಕ ಆಯುಧಗಳನ್ನು ಒಳಗೊಳಗೇ ಸನ್ನದ್ಧಗೊಳಿಸಿದೆ. ಹೀಗಾಗಿ ಪ್ರಾದೇಶಿಕ ಭಾಷೆಗಳ ಬಗ್ಗೆ ಬಿಜೆಪಿ ಎಷ್ಟೇ ಬೊಬ್ಬೆ ಹಾಕಿದರೂ ನಂಬುವ ಸ್ಥಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ

ಸ್ಥಳೀಯ ಭಾಷೆಗಳ ಉದ್ಧಾರದ ನೆಪ ಹೇಳುತ್ತಾ ವಾಮಮಾರ್ಗದಲ್ಲಿ ಇಡೀ ದೇಶದ ಮೇಲೆ ಹಿಂದಿ ಹೇರಿಕೆ ಮಾಡುವುದೇ ಕೇಂದ್ರದ ದುರುದ್ದೇಶ ಎನ್ನುವುದು ಸ್ಪಷ್ಟ.
ಕನ್ನಡದ ಮೇಲೆ ಈವರೆಗೂ ಕೇಂದ್ರ ಸರಕಾರ ನಡೆಸಿರುವ ದಬ್ಬಾಳಿಕೆಯೇ ಇದಕ್ಕೆ ಸಾಕ್ಷಿ. ಬಹುಮತ ಇದೆ ಎನ್ನವ ಕಾರಣಕ್ಕೆ ಹಿಂದಿ ಹೇರಿಕೆ ರಾಜಕೀಯ ಮಾಡಿದರೆ ಭಾರತವು ಭಾಷಾ ದಳ್ಳುರಿಯಲ್ಲಿ ಬೇಯುವುದು ಖಚಿತ. ಭಾರತ ಎಂದರೆ ಹಿಂದು, ಹಿಂದಿ ಅಷ್ಟೇ ಅಲ್ಲ. ಭಾರತ ನಮ್ಮೆಲ್ಲರದು ಎಂದು ಒತ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT