ಸೋಮವಾರ, ಅಕ್ಟೋಬರ್ 18, 2021
22 °C

ಪುಟ್ಟರಂಗ ಶೆಟ್ಟರನ್ನು ಬೆದರಿಸಿದ್ದ ಎಚ್‌ಡಿಕೆ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಬೆಂಗಳೂರು: ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಹಿಂದುಳಿದ ವರ್ಗಗಳ ಆಯೋಗದ ಜಾತಿವಾರು ಜನಗಣತಿ ವರದಿಯನ್ನು ಬಿಡುಗಡೆ ಮಾಡದಂತೆ ಆಗ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದ ಪುಟ್ಟರಂಗ ಶೆಟ್ಟಿ ಅವರನ್ನು ಬೆದರಿಸಿದ್ದರು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಕೋವಿಡ್‌ನಿಂದ ಮೃತರಾದವರ ಕುಟುಂಬಗಳಿಗೆ ನೆರವು ಮತ್ತು ದಿನಸಿ ಕಿಟ್‌ ವಿತರಿಸಲು ಕರ್ನಾಟಕ ರಾಜ್ಯ ಮಡಿವಾಳರ ಸಂಘ ಯಶವಂತಪುರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿವಾರು ಜನಗಣತಿ) ಪೂರ್ಣಗೊಂಡಿರಲಿಲ್ಲ. ನಂತರ ಬಂದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಕ್ತಾಯವಾಯಿತು. ವರದಿ ಬಹಿರಂಗವಾಗದಂತೆ ಕುಮಾರಸ್ವಾಮಿ ತಡೆದರು’ ಎಂದರು.

ಜಾತಿವಾರು ಜನಗಣತಿಯ ವರದಿ ಸಿದ್ಧವಾಗಿರುವ ಕುರಿತು ಪುಟ್ಟರಂಗ ಶೆಟ್ಟಿ ಅವರು ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿದ್ದರು. ಆಗ, ಅಂದಿನ ಮುಖ್ಯಮಂತ್ರಿ ನೇರವಾಗಿ ವರದಿಯನ್ನು ವಿರೋಧಿಸಿದ್ದರು. ಕುಮಾರಸ್ವಾಮಿ ಅವರ ಬೆದರಿಕೆಗೆ ಹೆದರಿದ ಪುಟ್ಟರಂಗ ಶೆಟ್ಟಿ ವರದಿಯನ್ನು ಬಿಡುಗಡೆ ಮಾಡುವ ಗೋಜಿಗೆ ಹೋಗಲಿಲ್ಲ ಎಂದು ಹೇಳಿದರು.

‘ಸತ್ಯ ಹೇಳಿದರೆ ಕುಮಾರಸ್ವಾಮಿ ಅವರಿಗೆ ಕೋಪ ಬರುತ್ತದೆ. ಜಾತಿವಾರು ಜನಗಣತಿಯ ವರದಿಯನ್ನು ಸಿದ್ದರಾಮಯ್ಯ ಕುಳಿತು ಬರೆಸಿದ್ದಾರೆ ಎಂಬ ಆರೋಪ ಮಾಡುತ್ತಾರೆ. ಅದು ರಾಜ್ಯದಲ್ಲಿನ ಎಲ್ಲ ಜಾತಿ, ಧರ್ಮದ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಯ ವಾಸ್ತವ ಚಿತ್ರಣ ನೀಡುವ ವರದಿ. ಯಾರಿಗೂ ಅನ್ಯಾಯ ಮಾಡುವ ಉದ್ದೇಶ ವರದಿಯ ಹಿಂದಿಲ್ಲ. ಆದರೂ, ಅವರು ವರದಿಯನ್ನು ವಿರೋಧಿಸುತ್ತಾರೆ’ ಎಂದರು.

ತಮ್ಮ ಸರ್ಕಾರ ಇದ್ದಾಗ ರಾಜ್ಯದಲ್ಲಿ ಮಡಿವಾಳ ಸಮುದಾಯದ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಲಾಗಿತ್ತು. ಮುಂದೆ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆಗ ಮಡಿವಾಳ ಸಮುದಾಯಕ್ಕೆ ವಿಧಾನ ಪರಿಷತ್‌ ಸದಸ್ಯ ಸ್ಥಾನ ನೀಡಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ರಾಜ್ಯ ಮಡಿವಾಳರ ಸಂಘದ ಅಧ್ಯಕ್ಷ ನಂಜಪ್ಪ, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ. ರವಿಕುಮಾರ್‌, ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್‌. ಶಿವಣ್ಣ ಮಳವಳ್ಳಿ, ಕಾಂಗ್ರೆಸ್‌ ಮುಖಂಡ ರಾಜು ತಲ್ಲೂರು ಉಪಸ್ಥಿತರಿದ್ದರು.

‘ಸುಳ್ಳಿನ ಜಪವೇ ಸಿದ್ದಕಲೆ’

ಬೆಂಗಳೂರು: ‘ಸುಳ್ಳನ್ನು ಪದೇ ಪದೇ ಹೇಳುತ್ತಾ ಜನರನ್ನು ದಾರಿ ತಪ್ಪಿಸುವ ‘ಸಿದ್ದಕಲೆ’ ಅವರಿಗೆ ಚೆನ್ನಾಗಿ ಸಿದ್ದಿಸಿದೆ. ಸುಳ್ಳಿನ ಜಪ ಮಾಡುವುದೇ ಅವರಿಗೆ ನಿತ್ಯದ ಕಾಯಕ. ಇದು ಶಾಂತ ಸಮಾಜವನ್ನು ಒಡೆಯುವ ಹುನ್ನಾರ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಆಗ ಜಾತಿವಾರು ಜನಗಣತಿ ವರದಿಯ ಬಗ್ಗೆ ಅವರು ಪ್ರಸ್ತಾಪವನ್ನೇ ಮಾಡಲಿಲ್ಲ. ಚರ್ಚಿಸುವ ಧೈರ್ಯವನ್ನೂ ತೋರಲಿಲ್ಲ. ನನಗೇಕೆ ಕೋಪ ಬರುತ್ತದೆ’ ಎಂದು ಪ್ರಶ್ನಿಸಿದ್ದಾರೆ.

ವರದಿಗೆ ಕಾರ್ಯದರ್ಶಿಯ ಸಹಿಯೇ ಇರಲಿಲ್ಲ ಎಂದು ಆಯೋಗದ ಅಧ್ಯಕ್ಷರೇ ಸ್ವತಃ ಬಹಿರಂಗಪಡಿಸಿದ್ದಾರೆ. ಈಗ ಪ್ರತಿಪಕ್ಷ ನಾಯಕರಾಗಿರುವ ರಾಜಕೀಯ ಪಂಡಿತರಿಗೆ ಹೇಳಿಕೆ ನೀಡುವ ಮುನ್ನ ಆ ಬಗ್ಗೆ ಕನಿಷ್ಠ ಸಾಮಾನ್ಯ ಪ್ರಜ್ಞೆ ಇರಬೇಕಾಗಿತ್ತು. ವರದಿಯ ಬಗ್ಗೆ ಇಷ್ಟೆಲ್ಲ ಪ್ರೀತಿ, ಕಾಳಜಿ ಇರುವವರು ವಿಧಾನಮಂಡಲ ಅಧಿವೇಶನದಲ್ಲಿ ಏಕೆ ಪ್ರಸ್ತಾಪಿಸಲಿಲ್ಲ ಎಂದು ಕೇಳಿದ್ದಾರೆ.

ತಮ್ಮ ಪಕ್ಷದಲ್ಲೇ ಬೀಳುತ್ತಿರುವ ಒಳ ಏಟುಗಳ ಹೊಡೆತ ತಾಳಲಾಗದೆ, ಅದನ್ನು ಮುಚ್ಚಿಟ್ಟುಕೊಳ್ಳಲು ಬಹಿರಂಗವಾಗಿ ಬೊಬ್ಬೆ ಹೊಡೆಯುವುದು ಹತಾಶೆ ಮತ್ತು ರಾಜಕೀಯ ಅವಕಾಶವಾದಿತನ. ಇಂತಹ ಪ್ರಮುಖ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಬೇಕಿತ್ತು, ಸಚಿವರಿಗೆ ಅಲ್ಲ. ಸುದೀರ್ಘ ರಾಜಕೀಯ ಅನುಭವ, ಸಂಸದೀಯ ಚರಿತ್ರೆ ಇದ್ದರಷ್ಟೆ ಸಾಲದು. ಸಾಮಾನ್ಯ ಜ್ಞಾನವೂ ಇರಲಿ. ಪದೇ ಪದೇ ‘ಸಿದ್ಧಹಸ್ತಿಕೆ’ ತೋರುವ ಪ್ರಯತ್ನ ಬೇಡ ಎಂದು ಟೀಕಿಸಿದ್ದಾರೆ.

‘ಯಾರೋ ಕಟ್ಟಿದ ಹುತ್ತಕ್ಕೆ ಹೊಕ್ಕು ರಾಜಕೀಯ ಮರುಜನ್ಮ ಪಡೆದು ಉಂಡ ಮನೆಗೆ ಕನ್ನ ಕೊರೆಯುವ ಮುನ್ನ ನಿಮ್ಮ ಹೇಳಿಕೆಗಳ ಬಗ್ಗೆ ಎಚ್ಚರವಿರಲಿ. ಸಮಾಜದ ಶಾಂತಿಗೆ ಕೊಳ್ಳಿ ಇಡುವ ದುಸ್ಸಾಹಸಕ್ಕೆ ಕೈ ಹಾಕಿದರೆ ಜನರೇ ಉತ್ತರ ಕೊಡುತ್ತಾರೆ. ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ವಿಕೃತ ಆನಂದ ಅನುಭವಿಸುವುದು ಹೇಯ. ಮುಗ್ಧ ಜನರಲ್ಲಿ ರಾಜಕೀಯ ವಿಷ ಬೀಜ ಬಿತ್ತುವುದು ರಾಜಕೀಯ ನಿಕೃಷ್ಟತೆಯ ಪರಮಾವಧಿ’ ಎಂದು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು