ಭಾನುವಾರ, ಮೇ 22, 2022
25 °C
ಮುಖ್ಯಮಂತ್ರಿ ಗೃಹ ಕಚೇರಿ ಎದುರು ಧರಣಿಗೆ ಮುಂದಾದ

ಸರ್ಕಾರ ಪಾಪರ್‌ ಆಗಿದ್ರೆ ನಾನೇ ಸಂಬಳ ಕೊಡ್ತೇನೆ: ಶಾಸಕ ಎಚ್‌.ಡಿ. ರೇವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹಾಸನ ಜಿಲ್ಲೆ ಹೊಳೆನರಸೀಪುರ ಸರ್ಕಾರಿ ಕಾಲೇಜಿಗೆ ಎರಡು ಸ್ನಾತಕೋತ್ತರ ಕೋರ್ಸ್‌ಗಳಿಗೆ ಅನುಮತಿ ನೀಡುವ ವಿಷಯದಲ್ಲಿ ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಮಧ್ಯೆ ಮಂಗಳವಾರ ವಾಕ್ಸಮರ ನಡೆದಿದೆ.

ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿನಲ್ಲಿ ಮನೋವಿಜ್ಞಾನ ಮತ್ತು ಫುಡ್‌ ಅಂಡ್‌ ನ್ಯೂಟ್ರಿಷಿಯನ್‌ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಬೇಕೆಂಬ ಬೇಡಿಕೆ ಈಡೇರಿಸಬೇಕು ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಲು ಶಾಸಕ ಎಚ್‌.ಡಿ.ರೇವಣ್ಣ ಅವರು ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ಗೆ ಬಂದಿದ್ದರು. ಬೇಡಿಕೆ ಈಡೇರಿಸದೇ ಇದ್ದರೆ ಧರಣಿ ಮಾಡುತ್ತೇನೆ ಎಂದೂ ಬೆದರಿಕೆ ಒಡ್ಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ರೇವಣ್ಣ, ‘ಎಚ್‌.ಡಿ.ಕುಮಾರಸ್ವಾಮಿ ಸರ್ಕಾರ ಅವಧಿಯಲ್ಲಿ ಕೊಟ್ಟಿದ್ದನ್ನು ಸಚಿವ ಅಶ್ವತ್ಥನಾರಾಯಣ ರದ್ದು ಮಾಡಿದ್ದಾರೆ. ನಮಗೆ ಕೊಟ್ಟಿರುವ ಅನುದಾನವನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿದೆ. ಬಡವರ ಮಕ್ಕಳು ಓದುವ ಕಾಲೇಜುಗಳಿಗೆ ಏಕೆ ರಾಜಕೀಯ’ಎಂದು ಪ್ರಶ್ನಿಸಿದರು.

‘ಸಚಿವರು ಉದ್ದೇಶಪೂರ್ವಕವಾಗಿಯೇ ತಿರಸ್ಕರಿಸಿದ್ದಾರೆ. ಸರ್ಕಾರ ಪಾಪರ್‌ ಬಿದ್ದಿದ್ದರೆ ನಾನೇ ಟೀಚರ್‌ಗಳಿಗೆ ಸಂಬಳ ಕೊಡುತ್ತೇನೆ. ಬೇಕಿದ್ದರೆ ಛಾಪಾ ಕಾಗದದ ಮೇಲೂ ಬರೆದುಕೊಡಲು ಸಿದ್ಧನಿದ್ದೇನೆ’ ಎಂದು ರೇವಣ್ಣ ಸವಾಲು ಹಾಕಿದರು.

‘ಇವರಿಗೆ ಖಾಸಗಿ ಕಾಲೇಜುಗಳಿಗೆ ಅನುಮತಿ ಕೊಡಲು ಆಗುತ್ತದೆ. ಆದರೆ, ಸರ್ಕಾರಿ ಕಾಲೇಜಿಗೆ ಕೊಡಲು ಆಗಲ್ಲ. ಕೆಲವರಿಗೆ ₹300 ರಿಂದ ₹400 ಕೋಟಿ ನಿಯಮ ಮೀರಿ ಅನುದಾನ ಕೊಟ್ಟಿದ್ದಾರೆ’ ಎಂದು ಅವರು ಗುಡುಗಿದರು.

‘ಇವೆರಡೂ ಕೋರ್ಸ್‌ಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಗತ್ಯವಿದೆ. ಈ ಕೋರ್ಸ್‌ಗಳ ಬೋಧನೆಗೆ ಉಪನ್ಯಾಸಕರಿಗೆ ನೀಡಬೇಕಾಗುವ ವೇತನ ವೆಚ್ಚವನ್ನು ತಾತ್ಕಾಲಿಕವಾಗಿ ಸಿಡಿಸಿ ಸಮಿತಿ ಅಥವಾ ಸ್ವಂತ ಖರ್ಚಿನಲ್ಲಿ ಭರಿಸುತ್ತೇನೆ‘ ಎಂದೂ ರೇವಣ್ಣ ಹೇಳಿದರು.

ಹೊಳೆನರಸೀಪುರದಲ್ಲಿ ಎಷ್ಟು ಕಾಲೇಜುಗಳಿವೆ?

ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ 8 ಸರ್ಕಾರಿ ಪ್ರಥಮ ದರ್ಜೆ, 6 ಸ್ನಾತಕೋತ್ತರ, 3 ಪಾಲಿಟೆಕ್ನಿಕ್‌, 1 ಸರ್ಕಾರಿ ಎಂಜಿನಿಯರಿಂಗ್‌ ಮತ್ತು 5 ಐಟಿಐ ಕಾಲೇಜುಗಳಿವೆ ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದರು.

ಕಳೆದ ಐದು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿರುವ ಪ್ರಥಮ ದರ್ಜೆ ಕಾಲೇಜುಗಳಿಗೆ ₹65.40 ಕೋಟಿ ಮತ್ತು ಸಾಧನ ಸಲಕರಣೆಗಳ ಖರೀದಿಗೆ ₹93.26 ಲಕ್ಷ ನೀಡಲಾಗಿದೆ. ಅಲ್ಲದೆ ಎಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳಿಗೆ ₹84 ಕೋಟಿ ಹಾಗೂ ಸಾಧನ ಸಲಕರಣೆಗಳಿಗೆಂದು ₹1.80 ಕೋಟಿ ಕೊಡಲಾಗಿದೆ ಅಂದ ಮೇಲೆ ರಾಜಕೀಯ ಅಥವಾ ತಾರತಮ್ಯದ ಮಾತು ಎಲ್ಲಿಂದ ಬಂತು ಎಂದು ಅವರು ಪ್ರಶ್ನಿಸಿದರು.

***
ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ಕಡೆಗೆ ಆದ್ಯತೆ ಕೊಡಬೇಕೇ ವಿನಾ ವೈಯಕ್ತಿಕ ಪ್ರತಿಷ್ಠೆಯಿಂದ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ. ಈ ವಿಚಾರವಾಗಿ ರೇವಣ್ಣ ಧರಣಿಗೆ ಮುಂದಾಗಿದ್ದು ಸರಿಯಲ್ಲ

ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು