ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರಾಗಲು ವಿಶ್ವನಾಥ್ ಅರ್ಹರಲ್ಲ: ಹೈಕೋರ್ಟ್‌

Last Updated 30 ನವೆಂಬರ್ 2020, 21:03 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಎಚ್‌.ವಿಶ್ವನಾಥ್ ಅವರು ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಂಡಿದ್ದರೂ ಅವರ ಅನರ್ಹತೆ ಮುಂದುವರಿದಿದೆ. ಹೀಗಾಗಿ ಅವರು ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳಲು ಅರ್ಹರಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

‘ನಾಮನಿರ್ದೇಶನವು ಚುನಾವಣೆಯಲ್ಲಿ ಗೆದ್ದಂತೆ ಆಗುವುದಿಲ್ಲ. ಅವರಿಗೆ ಮಂತ್ರಿ ಸ್ಥಾನ ನೀಡುವ ನಿರ್ಧಾರ ತೆಗೆದುಕೊಳ್ಳುವಾಗ ಮುಖ್ಯಮಂತ್ರಿ ಮತ್ತು ರಾಜ್ಯಪಾಲರು ಈ ಅಂಶ ಗಮನದಲ್ಲಿ ಇಟ್ಟುಕೊಳ್ಳಬೇಕು’ ಎಂದು ಪೀಠ ಪ್ರತಿಪಾದಿಸಿದೆ.

ವಿಶ್ವನಾಥ್, ಆರ್‌.ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

‘ಆರ್‌.ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರು ವಿಧಾನಸಭೆಯಿಂದ ಪರಿಷತ್ತಿಗೆ ನಡೆದ ಚುನಾವಣೆ ಮೂಲಕ ಆಯ್ಕೆಯಾಗಿರುವ ಕಾರಣ ಅವರಿಬ್ಬರ ಅನರ್ಹತೆ ಮುಂದುವರಿದಂತೆ ಕಾಣುವುದಿಲ್ಲ. ಹೀಗಾಗಿ, ಅವರು ಸಚಿವರಾಗುವ ಸಾಧ್ಯತೆ ಇದ್ದರೂ ಮಧ್ಯಂತರ ತಡೆಯನ್ನು ಸದ್ಯಕ್ಕೆ ನೀಡುವುದಿಲ್ಲ’ ಎಂದು ಪೀಠ ಸ್ಪಷ್ಟಪಡಿಸಿತು.

‘ವಿಶ್ವನಾಥ್ ಅವರು ನಾಮನಿರ್ದೇಶನಗೊಂಡಿರುವ ಕಾರಣ ಸಂವಿಧಾನದ 164(1–ಬಿ) ಮತ್ತು 361–ಬಿ ಪ್ರಕಾರ ಅನರ್ಹತೆ ಮುಂದುವರಿದಿದೆ. ಕರ್ನಾಟಕ ವಿಧಾನಸಭೆಯ ಅವಧಿ ಮುಗಿಯುವ ತನಕ ಅದು ಇರಲಿದೆ. ಅಷ್ಟರಲ್ಲಿ ಅವರು ಶಾಸಕರಾಗಿ ಚುನಾಯಿತರಾದರೆ ಈ ಅನರ್ಹತೆ ಮುಂದುವರಿಯುವುದಿಲ್ಲ’ ಎಂದು ಹೇಳಿತು.

‘ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಇಬ್ಬರೂ ಸಂವಿಧಾನದಡಿಯಲ್ಲಿ ಅಧಿಕಾರ ನಿರ್ವಹಿಸುತ್ತಿದ್ದಾರೆ. ವಿಶ್ವನಾಥ್ ಅವರನ್ನು ಸಚಿವರನ್ನಾಗಿ ನೇಮಕ ಮಾಡುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಅವರು ವಿವೇಚನೆ ಮಾಡುತ್ತಾರೆ’ ಎಂದು ಪೀಠ ತಿಳಿಸಿತು.

ವಿಶ್ವನಾಥ್ ಅವರು ವಿಧಾನ ಪರಿಷತ್ತಿನ ಕಾರ್ಯ ಕಲಾಪಗಳಲ್ಲಿ ಭಾಗವಹಿಸದಂತೆ ಮಧ್ಯಂತರ ಆದೇಶ ನೀಡಲು ಅರ್ಜಿದಾರರ ಪರ ವಕೀಲರು ಕೋರಿದರು.

‘ಸದ್ಯಕ್ಕೆ ಈ ಮಧ್ಯಂತರ ಆದೇಶವು ಸಚಿವರಾಗಿ ಆಯ್ಕೆಯಾಗುವ ಸಾಧ್ಯತೆಗೆ ಮಾತ್ರ ಅನ್ವಯವಾಗುತ್ತದೆ. ನಾಮನಿರ್ದೇಶನಕ್ಕೆ ಸಂಬಂಧಿಸಿ ಅಲ್ಲ’ ಎಂದು ಪೀಠ ಮೌಖಿಕವಾಗಿ ಹೇಳಿತು.

ವಿಶ್ವನಾಥ್ ಅವರು ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ವಿಧಾನಸಭೆ ಸ್ಪೀಕರ್ ಆಗಿದ್ದ ಕೆ.ಆರ್. ರಮೇಶ್‌ಕುಮಾರ್ ಅವರು ಅನರ್ಹಗೊಳಿಸಿದ 17 ಶಾಸಕರಲ್ಲಿ ವಿಶ್ವನಾಥ್‌ ಕೂಡ ಒಬ್ಬರು. 2019ರ ಡಿಸೆಂಬರ್‌ನಲ್ಲಿ ನಡೆದ ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ವಿಶ್ವನಾಥ್ ಸೋಲನುಭವಿಸಿದ್ದರು. ಇತ್ತೀಚೆಗೆ ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT