ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಷ್ಟು ದಿನ ಸುಳ್ಳು ಹೇಳಿಕೊಂಡು ಓಡಾಡುತ್ತೀರಾ: ಸಿಂಹ ಅವರಿಗೆ ವಿಶ್ವನಾಥ್ ಪ್ರಶ್ನೆ

‘ದಶಪಥ ಯೋಜನೆ: ಸಂಸದರ ಕೊಡುಗೆ ಅಲ್ಲ’
Last Updated 22 ಆಗಸ್ಟ್ 2021, 7:47 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು– ಬೆಂಗಳೂರು ದಶಪಥ ಯೋಜನೆ ನಿಮ್ಮದಲ್ಲ. ಯಾವಾಗಲೋ ಜಾರಿಯಾದ ಯೋಜನೆಯನ್ನು ನನ್ನದು ಎಂದರೆ ಹೇಗೆ?’ ಎಂದು ವಿಧಾನಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಅವರು ತಮ್ಮದೇ ಪಕ್ಷದ ಸಂಸದ ಪ್ರತಾಪ ಸಿಂಹ ಅವರನ್ನು ಕುಟುಕಿದರು.

ಮೈಸೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಾನು ಸಂಸದನಾಗಿದ್ದ ಅವಧಿಯಲ್ಲಿ ಈ ಯೋಜನೆಗೆ ಡಿಪಿಆರ್‌ ತಯಾರಾಗಿತ್ತು. ಆ ವೇಳೆ ನಾನು ಹಾಗೂ ಸಂಸದರಾಗಿದ್ದ ಆರ್‌.ಧ್ರುವನಾರಾಯಣ, ರಮ್ಯಾ ಮತ್ತು ಡಿ.ಕೆ.ಸುರೇಶ್‌ ಇದಕ್ಕೆ ಸಂಬಂಧಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದೆವು. ಅಂದು ತಯಾರಾಗಿದ್ದ ಯೋಜನೆ ಇಂದು ಕಾರ್ಯರೂಪಕ್ಕೆ ಬಂದಿದೆ. ನೀನು ಈಗ ಬಂದು ಎಲ್ಲವನ್ನೂ ನಾನೇ ಮಾಡಿದ್ದು ಅಂದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಹಿಂದಿನ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ಶ್ರಮವೂ ಇದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಪಾತ್ರವೂ ಇದೆ. 2013ರಲ್ಲೇ ಈ ಯೋಜನೆ ಚಾಲ್ತಿಗೆ ಬಂದಿತ್ತು. ಬೇರೆಯವರು ಹೆತ್ತು, ಹೊತ್ತು ಬೆಳೆಸಿದ ಮಗುವೊಂದು ಶಾಲೆಗೆ ಹೋಗುವಾಗ, ಆ ಮಗು ನನ್ನದು ಎಂದರೆ ಹೇಗೆ?’ ಎಂದು ಲೇವಡಿ ಮಾಡಿದರು.

‘ದಶಪಥ ರಸ್ತೆ ವಿಚಾರದಲ್ಲಿ ಮಂಡ್ಯದ ಸಂಸದೆ ಸುಮಲತಾ ಹೇಳಿದ್ದು ಸರಿಯಾಗಿಯೇ ಇದೆ. 10–12 ವರ್ಷಗಳಷ್ಟು ಹಿಂದಿನ ಯೋಜನೆ ಇದಾಗಿದ್ದು, ನಾನೇ ಮಾಡಿದ್ದೇನೆ ಎಂದು ಎಷ್ಟು ದಿನ ಸುಳ್ಳು ಹೇಳುತ್ತೀರಾ? ನೀವು ಏನಾದರೂ ಹೊಸ ಯೋಜನೆ ತಂದಿದ್ದರೆ ಜನರಿಗೆ ತಿಳಿಸಿ’ ಎಂದರು.

ರಾಜಕೀಯ ಸಭೆಗಳು ಬೇಡ: ‘ಕೋವಿಡ್‌ ಆತಂಕ ದೂರವಾಗಿಲ್ಲ. ಇಂತಹ ಸಮಯದಲ್ಲಿ ರಾಜಕೀಯ ಸಭೆ, ಸಮಾರಂಭ ಆಯೋಜಿಸುವುದು ಸರಿಯಲ್ಲ. ಜನರನ್ನು ಗುಂಪು ಸೇರಿಸುವ ಕಾರ್ಯಕ್ರಮಗಳನ್ನು ರಾಜಕೀಯ ಪಕ್ಷಗಳು ಆಯೋಜಿಸಬಾರದು’ ಎಂದು ತಮ್ಮದೇ ಪಕ್ಷದ ಜನಾಶೀರ್ವಾದ ಯಾತ್ರೆಯ ವಿರುದ್ಧ ಅಸಮಾಧಾನ ಹೊರಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT