ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡಪದ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆ: ಬೊಮ್ಮಾಯಿ ಘೋಷಣೆ

Last Updated 1 ಫೆಬ್ರುವರಿ 2023, 13:14 IST
ಅಕ್ಷರ ಗಾತ್ರ

ವಿಜಯಪುರ: ಹಡಪದ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿಯಲ್ಲಿ ಬುಧವಾರ ಹಡಪದ ಅಪ್ಪಣ್ಣ ಸಮುದಾಯ ಭವನ ಉದ್ಘಾಟನೆ, ನೂತನ ಕಟ್ಟಡಗಳ ಅಡಿಗಲ್ಲು ಸಮಾರಂಭ ಹಾಗೂ ಹಡಪದ ಸಮಾಜದ ರಾಜ್ಯಮಟ್ಟದ ಜನ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಹಡಪದ ಸಮಾಜದ ಕುಲ ಶಾಸ್ತ್ರೀಯ ಅಧ್ಯಯನ ಆದಷ್ಟು ಬೇಗ ಪೂರ್ಣಗೊಳಿಸಿ, ಸಮಾಜಕ್ಕೆ ನ್ಯಾಯ ಒದಗಿಸಲಾಗುವುದು ಎಂದರು.

ಶಿವಶರಣ ಹಡಪದ ಅಪ್ಪಣ್ಣ ಜನ್ಮ ಸ್ಥಳ ಮಸಬಿನಾಳ ಹಾಗೂ ಶಿವಶರಣೆ ಹಡಪದ ಲಿಂಗಮ್ಮ ಜನ್ಮ ಸ್ಥಳ ದೇಗಿನಾಳವನ್ನು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಲು ಪ್ರಾಧಿಕಾರದ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಹಡಪದ ಸಮಾಜದ ಮಠದ ಅಭಿವೃದ್ಧಿ ಕಾರ್ಯಕ್ಕೆ ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ₹ 1 ಕೋಟಿ ಕೊಟ್ಟಿದ್ದಾರೆ. ನಾನು ₹ 3 ಕೋಟಿ ಅನುದಾನ ಕೊಟ್ಟಿದ್ದೇನೆ.‌ ಇನ್ನೂ ಹೆಚ್ಚಿನ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರವುಕಾಯಕ ಯೋಜನೆ ಅಡಿ ಕುಂಬಾರ, ಚಮ್ಮಾರ, ಸಮಗಾರ, ಹಡಪದ ಮತ್ತಿತರ ಸಮಾಜಗಳ ಕುಲ ಕಸುಬು ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದರು.

ವಿಜಯನಗರ ಸಾಮ್ರಾಜ್ಯದ ರಾಜರ ಕಾಲದಲ್ಲಿ ಯುದ್ಧ ನಡೆದ ತಂಗಡಗಿ, ರಕ್ಕಸಗಿ, ತಾಳಿಕೋಟೆ ಯುದ್ಧ ಸ್ಥಳವನ್ನು ಸಂರಕ್ಷಿಸಲು ಮತ್ತು ಅಭಿವೃದ್ಧಿಗೆ ಬಜೆಟ್ ನಲ್ಲಿ ಅನುದಾನ ಒದಗಿಸಲಾಗುವುದು ಎಂದರು.

12ನೇ ಶತಮಾನದಲ್ಲಿ ಬಸವಣ್ಣನಿಗೆ ಹಡಪದ ಅಪ್ಪಣ್ಣ ನಂಬಿಕಸ್ಥ, ಆತ್ಮೀಯರಾಗಿದ್ದರು. ಅಪ್ಪಣ್ಣನಿಲ್ಲದೇ ಬಸವಣ್ಣನವರು ಯಾವುದೇ ತೀರ್ಮಾನ ತೆಗೆದುಕೊಳ್ಳುತ್ತಿರಲಿಲ್ಲ ಎಂದರು.

ತಂಗಡಗಿ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಶ್ರೀಗಳು ಬಹಳ ಮುಗ್ದರು. ಸಮಾಜದ ಬಗ್ಗೆ ಕಳಕಳಿ ಇರುವವರು, ಸಮಾಜಕ್ಕೆ ನ್ಯಾಯ ಕೊಡಿಸಲು ಇದುವರೆಗೆ ಅನೇಕ ಮುಖ್ಯಮಂತ್ರಿ, ಸಚಿವರನ್ನು ಭೇಟಿಯಾದರೂ ನ್ಯಾಯ ಸಿಗಲಿಲ್ಲ ಎಂದರು.

ಸಮಾಜದ ಬೆಂಬಲ, ಆಶೀರ್ವಾದ ಸರ್ಕಾರದ ಮೇಲೆ ಇರಲಿ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಒಳ್ಳೆಯ ದಿನ ಬರಲಿವೆ ಎಂದರು.
ಕೆಲವು ಹಿತಾಸಕ್ತಿಗಳು ತಮ್ಮ ಅಸ್ಥಿತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಹಡಪದ ಸಮಾಜ ಸಂಘಟನೆಯಾಗಲು ಬಿಡಲಿಲ್ಲ. ಈಗ ರಾಜ್ಯದಲ್ಲಿ ಮುಕ್ತ ವಾತಾವರಣ ಸಿಕ್ಕಿದೆ.ಈಗ ಸಂಘಟನೆಯಾಗುತ್ತಿರುವುದು ಉತ್ತಮ ಬೆಳವಣಿಗೆ ನಿಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದರು.

ಬಸವಣ್ಣನಿಗೆ ಹೋಲಿಸಬೇಡಿ: ಹಡಪದ ಸಮಾಜದ ಮುಖಂಡರು ತಮ್ಮನ್ನು ಎರಡನೇ ಬಸವಣ್ಣ ಎಂದು ಕರೆದಿರುವುದಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದರು.

'ಎರಡನೇ ಬಸವಣ್ಣ' ಎಂದು ಯಾರೂ ನನ್ನನ್ನು ಕರೆಯಬೇಡಿ. ಬಸವಣ್ಣನವರ ಕಾಲಿನ ದೂಳಿಗೂ ನಾನು ಸಮನಿಲ್ಲ. ಆ ರೀತಿ ಯಾರೂ ಸಂಬೋಧಿಸಬಾರದು ಎಂದರು.

ಹೊಗಳಿಕೆ ಎಂದರೆ ನನಗೆ ಭಯ. ಟೀಕೆ, ತೆಗಳಿಕೆಯನ್ನು ಮೆಟ್ಟಿಲು ಮಾಡಿಕೊಂಡು ಯಶಸ್ಸು ಸಾಧಿಸುವುದು ನನಗೆ ಗೊತ್ತಿದೆ. ಭೂಮಿ ಮೇಲೆ ಇದ್ದೇನೆ, ಇರಲು ಬಿಡಿ ಎಂದರು.

ಜಲ‌ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನ ನೇತೃತ್ವದಲ್ಲಿ ಶಿವ ಶರಣರು ಲಿಂಗಾಯತ ಹೊಸ ಧರ್ಮ ಹುಟ್ಟು ಹಾಕಿದರು, ಜಾತಿಯತೆ ತೊಡೆದುಹಾಕಲು ಪ್ರಯತ್ನಿಸಿದರು. ಶರಣರ ಕಾಯಕ, ದಾಸೋಹ ತತ್ವ 900 ವರ್ಷವಾದರೂ ಜಾರಿಗೆ ತಾರದೇ ಬಸವ ತತ್ವಕ್ಕೆ ಅವಮಾನ ಮಾಡಿದ್ದೇವೆ ಎಂದರು.

ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಹಡಪದ ಅಪ್ಪಣ್ಣ ಸಮಾಜ ಬಸವಣ್ಣ ತತ್ವ, ಸಿದ್ದಾಂತವನ್ನು ಅಳವಡಿಸಿಕೊಂಡಿರುವ ಸಮಾಜವಾಗಿದೆ ಎಂದರು.

ಶರಣ ಹಡಪದ ಅಪ್ಪಣ್ಣನವರು ಬಸವಣ್ಣನವರ ಪರಮ ಭಕ್ತ, ಸ್ನೇಹಿತರಾಗಿರುವಂತೆ ಈ ಸಮಾಜ ಇಂದು ನಮ್ಮೊಂದಿಗೆ ನಿಂತಿದೆ ಎಂದರು. ರಾಜ್ಯ ಸರ್ಕಾರ ಕಾಯಕ ಯೋಜನೆ ತರುವ ಮೂಲಕ ನ್ಯಾಯ ಒದಗಿಸಿದೆ ಎಂದರು. ಹಡಪದ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆ ಆಗಬೇಕು ಎಂದು ಅವರು ಮನವಿ ಮಾಡಿದರು.

ತಂಗಡಗಿ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನಮಠದ ಅನ್ನದಾನ ಭಾರತಿ ಅಪ್ಪಣ್ಣ ಮಹಾ ಸ್ವಾಮೀಜಿ ಮಾತನಾಡಿ, ಹಡಪದ ಸಮಾಜ ಹೀನಾಯ ಸ್ಥಿತಿಯಲ್ಲಿ ಇದೆ, ತುಳಿತಕ್ಕೆ ಒಳಗಾಗಿದ್ದೇವೆ. ಕಾರಣ ಹಡಪದ ಸಮಾಜದ ಕುಲ ಶಾಸ್ತ್ರೀಯ ಅಧ್ಯಯನ ಆಗಬೇಕು. ಪ್ರವರ್ಗ 3ಬಿ ಮತ್ತು 2 ಎ ದಲ್ಲಿರುವ ಹಡಪದ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು ಎಂದು ಮನವಿ ಮಾಡಿದರು.
ಮಸಬಿನಾಳ, ದೇಗಿನಾಳವನ್ನು ಕೂಡಲಸಂಗಮ ಪ್ರಾಧಿಕಾರಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದರು.

ತಂಗಡಗಿಯಲ್ಲಿ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ₹ 25 ಕೋಟಿ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್, ಜಿ.ಪಂ.ಸಿಇಒ ರಾಹುಲ್ ಶಿಂಧೆ, ಸಮಾಜದ ಮುಖಂಡರಾದ ಸಿದ್ದಪ್ಪ ಹಡಪದ, ಸಂತೋಷ ಹಡಪದ, ಎಚ್.ಡಿ.ವೈದ್ಯ, ನಾಗರಾಜ ಸರ್ಜಾಪುರ, ಚಿದಾನಂದ ಬಸರಕೋಡ, ಈರಣ್ಣ ಸಣ್ಣೂರ, ಬಸವರಾಜ ಬೆಳಗಾವಿ, ದೇವು ಮುಂಡರಗಿ, ಮಹಾಂತೇಶ ಬಳ್ಳಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT