ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯ ಬಲವರ್ಧನೆ: ತಜ್ಞರ ಸಮಿತಿಗೆ ಒತ್ತಾಯ

Last Updated 11 ಡಿಸೆಂಬರ್ 2021, 4:44 IST
ಅಕ್ಷರ ಗಾತ್ರ

ಬೆಂಗಳೂರು: ಹಂಪಿ ಕನ್ನಡ ವಿಶ್ವವಿದ್ಯಾಲಯ ಬಲಪಡಿಸಲು ಸರ್ಕಾರ ತಜ್ಞರ ಸಮಿತಿ ರಚಿಸಬೇಕು ಎಂದು ‘ಕನ್ನಡ ವಿಶ್ವವಿದ್ಯಾಲಯ ಉಳಿವಿಗಾಗಿ ಕ್ರಿಯಾ ಸಮಿತಿ’ ಒತ್ತಾಯಿಸಿದೆ.

ನಗರದಲ್ಲಿ ಶುಕ್ರವಾರ ಕ್ರಿಯಾ ಸಮಿತಿ ಆಯೋಜಿಸಿದ್ದ ಸಭೆಯಲ್ಲಿ ಚಿಂತಕರು ಮತ್ತು ಸಾಹಿತಿಗಳು, ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಮತ್ತು ಶೈಕ್ಷಣಿಕ ಗುಣಮಟ್ಟ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯದ ಘನತೆಯನ್ನು ಉಳಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕಾಗಿದೆ. ವಿಶ್ವವಿದ್ಯಾಲಯದ ಆಶಯಕ್ಕೆ ಯಾವುದೇ ರೀತಿ ಧಕ್ಕೆಯಾಗದಂತೆ ತಕ್ಷಣವೇ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ, ವಿಶ್ವವಿದ್ಯಾಲಯದ ಬಗ್ಗೆ ಹಲವಾರು ಆರೋಪಗಳು ಮಾಧ್ಯಮಗಳಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದರೂ ಸರ್ಕಾರ ಮೌನವಹಿಸಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಎದುರಿಸುತ್ತಿರುವ ಫೆಲೋಶಿಪ್‌ ಸಮಸ್ಯೆ, ಪಿಂಚಣಿ ಮತ್ತು ನೌಕರರ ಬಾಕಿ ಸಂಬಳವನ್ನು ತಕ್ಷಣವೇ ನೀಡಬೇಕು ಹಾಗೂ ವಿಶ್ವವಿದ್ಯಾಲಯದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ಆಡಳಿತದಲ್ಲಿ ಬಿಗಿ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಜಾನಪದ ಮತ್ತು ಕನ್ನಡ ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚು ಅನುದಾನ ಬಿಡುಗಡೆಗೊಳಿಸಬೇಕು ಹಾಗೂ ಈ ಕೂಡಲೇ ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಈ ಎಲ್ಲ ನಿರ್ಣಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿ.16ರಂದು ಬೆಂಗಳೂರಿನಲ್ಲಿ ಸಾಹಿತಿಗಳು, ವಿವಿಧ ಸಂಘಟನೆಗಳ ಕಾರ್ಯಕರ್ತರು, ಪ್ರಾಧ್ಯಾಪಕರು ಮತ್ತು ಬೋಧಕೇತರ ಸಂಘಗಳ ಪದಾಧಿಕಾರಿಗಳು ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಡಾ. ಚಂದ್ರ ಪೂಜಾರಿ, ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ್‌, ಪ್ರೊ. ಎಸ್‌.ಜಿ. ಸಿದ್ದರಾಮಯ್ಯ, ಬಿ.ಟಿ. ಲಲಿತಾ ನಾಯಕ್‌, ಡಾ. ವಸುಂಧರಾ ಭೂಪತಿ, ಡಾ. ರುದ್ರಪ್ಪ ಹನಗವಾಡಿ, ಡಾ.ಕೆ. ಷರೀಫಾ, ಎಸ್‌ಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಅಮರೇಶ್‌, ದಲಿತ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಗೋಪಾಲ ಕೃಷ್ಣ ಭಾಗವಹಿಸಿದ್ದರು.

*

ಕನ್ನಡ ವಿ.ವಿ.ಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ವಿಶ್ವವಿದ್ಯಾಲಯ ದಾರಿ ತಪ್ಪುತ್ತಿದೆ. ಸರ್ಕಾರವೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ.
-ಡಾ. ಬಂಜಗೆರೆ ಜಯಪ್ರಕಾಶ್‌, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT