ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಕಾರ್ಖಾನೆ ಮಾಲೀಕನಿಗೆ ಹಂಪಿ ಕನ್ನಡ ವಿ.ವಿ. ನಾಡೋಜ ಗೌರವ

ಏ. 9ರಂದು ಹಂಪಿ ಕನ್ನಡ ವಿ.ವಿ. ನುಡಿಹಬ್ಬ
Last Updated 6 ಏಪ್ರಿಲ್ 2021, 20:35 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಜಮಖಂಡಿಯ ‘ಪ್ರಭುಲಿಂಗೇಶ್ವರ ಶುಗರ್ಸ್‌’ ಕಾರ್ಖಾನೆಯ ಮಾಲೀಕ ರಾದ ಜಗದೀಶ ಎಸ್. ಗುಡಗುಂಟಿ ಹಾಗೂ ಉಡುಪಿಯ ನೇತ್ರ ತಜ್ಞರಾದ ಡಾ.ಕೆ. ಕೃಷ್ಣಪ್ರಸಾದ್‌ ಅವರನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಲಾಗಿದೆ.

ಜಗದೀಶ ಅವರು ವಿಜಯಪುರ ಜಿಲ್ಲೆ ಹೊನವಾಡ ಗ್ರಾಮದವರು. ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಅವರು ಈ ಹಿಂದೆ ಜಮಖಂಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ಟಿಕೆಟ್‌ಗೆ ಪ್ರಯತ್ನಿಸಿದ್ದರು.ಕೃಷ್ಣಪ್ರಸಾದ್‌ ಅವರು ಅನೇಕ ಉಚಿತ ಶಿಬಿರಗಳನ್ನು ಸಂಘಟಿಸಿ, ಕಣ್ಣು ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.

‘ಜಗದೀಶ ಅವರು ಅನೇಕ ಸಕ್ಕರೆ ಕಾರ್ಖಾನೆಗಳನ್ನು ಪುನರುತ್ಥಾನ ಮಾಡಿ, ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕೃಷ್ಣಪ್ರಸಾದ್‌ ಅವರು ಬುಡಕಟ್ಟು ಜನ ವಾಸಿಸುವ ಪ್ರದೇಶಗಳು ಸೇರಿದಂತೆ ಹಲವೆಡೆ ಶಿಬಿರಗಳನ್ನು ನಡೆಸಿ ಸಾವಿರಾರು ಜನರಿಗೆ ದೃಷ್ಟಿ ಭಾಗ್ಯ ಕಲ್ಪಿಸಿದ್ದಾರೆ. ನಾಡೋಜ ಸಮಿತಿಯು ಮೂವರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಿತು. ಈ ಪೈಕಿ ರಾಜ್ಯಪಾಲರು ಇಬ್ಬರ ಹೆಸರಿಗೆ ಅಂಕಿತ ಹಾಕಿದ್ದಾರೆ. ಕನ್ನಡ ನಾಡು, ನುಡಿಗೆ ಸಂಬಂಧಿಸಿದಂತೆ ಯಾರಿಗೆ ಬೇಕಾದರೂ ನಾಡೋಜ ಕೊಡಬಹುದು. ಈ ಹಿಂದೆಯೂ ಸಾಹಿತ್ಯ ಹೊರತುಪಡಿಸಿ ಅನ್ಯ ಕ್ಷೇತ್ರದವರಿಗೆ ನಾಡೋಜ ನೀಡಿರುವ ಸಾಕಷ್ಟು ನಿದರ್ಶನಗಳಿವೆ’ ಎಂದು ಕುಲಪತಿ ಪ್ರೊ. ಸ.ಚಿ. ರಮೇಶ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಏ.9ರಂದು ಸಂಜೆ 5.30ಕ್ಕೆ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ನುಡಿಹಬ್ಬದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ನಾಡೋಜ ಪ್ರದಾನ ಮಾಡುವರು. ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಹತ್ತು ಜನರಿಗೆ ಡಿ.ಲಿಟ್‌ ಪದವಿ ಸೇರಿದಂತೆ ಎಂ.ಎ. ಪಿಎಚ್‌.ಡಿ., ಡಿಪ್ಲೊಮಾ ಕೋರ್ಸ್‌ ಮುಗಿಸಿರುವ ಒಟ್ಟು 365 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪದ್ಮಾ ಶೇಖರ್ ಘಟಿಕೋತ್ಸವ ಭಾಷಣ ಮಾಡುವರು. ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಸ.ಚಿ.ರಮೇಶ ಉಪಸ್ಥಿತರಿರುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT