ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂತರಿಕ ಬೇಗುದಿ ನಡುವೆ ‘ನುಡಿಹಬ್ಬ’

ಭ್ರಷ್ಟಾಚಾರ ಆರೋಪದಿಂದ ನಲುಗಿರುವ ಹಂಪಿ ಕನ್ನಡ ವಿ.ವಿ; ಪರಸ್ಪರ ಅಪನಂಬಿಕೆಯಲ್ಲಿ ಕೆಲಸ
Last Updated 12 ಏಪ್ರಿಲ್ 2022, 8:13 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಆಂತರಿಕ ಬೇಗುದಿ ನಡುವೆ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯವು 30ನೇ ‘ನುಡಿಹಬ್ಬ’ ಆಚರಣೆಗೆ ಸಿದ್ಧವಾಗಿದೆ.

ಮಂಗಳವಾರ (ಏ.12) ಸಂಜೆ 5.30ಕ್ಕೆ ವಿ.ವಿ. ನವರಂಗ ಬಯಲು ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಸಿದ್ಧತೆ ಪೂರ್ಣಗೊಂಡಿದೆ. ನಾಡೋಜ, ಡಿ.ಲಿಟ್‌ ಹಾಗೂ ಪಿಎಚ್‌.ಡಿ. ಪದವಿ ಪಡೆಯುವವರು ಸಂಭ್ರಮದಲ್ಲಿದ್ದಾರೆ. ಆದರೆ, ವಿ.ವಿ. ಆಡಳಿತ ಹಾಗೂ ಸಿಬ್ಬಂದಿಯಲ್ಲಿ ಆ ಸಂಭ್ರಮ ಕಂಡು ಬರುತ್ತಿಲ್ಲ.

ಎರಡು ದಿನಗಳ ಹಿಂದೆ ವಿ.ವಿ. ಕುಲಪತಿ ಪ್ರೊ.ಸ.ಚಿ. ರಮೇಶ ಅವರು ಕರೆದಿದ್ದ ಸಭೆಯೇ ಅದಕ್ಕೆ ಸಾಕ್ಷಿ. ಸಭೆಯಿಂದ ಹೆಚ್ಚಿನ ಸಿಬ್ಬಂದಿ, ವಿದ್ಯಾರ್ಥಿಗಳು ದೂರ ಉಳಿದಿದ್ದರು. ಇದು ಸಹಜವಾಗಿಯೇ ಆಡಳಿತದ ಚಿಂತೆ ಹೆಚ್ಚಿಸಿದೆ.

ರಾಜ್ಯಪಾಲರು, ಉನ್ನತ ಶಿಕ್ಷಣ ಸಚಿವರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿರುವ ಕಾರ್ಯಕ್ರಮವನ್ನು ಯಾವುದೇ ಗೊಂದಲವಿಲ್ಲದೆ ಸುಸೂತ್ರವಾಗಿ ಮುಗಿಸಿ ಕೈತೊಳೆದುಕೊಳ್ಳಬೇಕೆಂಬ ಉಮೇದಿನಲ್ಲಿ ವಿ.ವಿ. ಆಡಳಿತ ಇದೆ. ಆದರೆ, ಇನ್ನೊಂದೆಡೆ ವಿ.ವಿ.ಯ ಕೆಲ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ರಾಜ್ಯಪಾಲರನ್ನು ಭೇಟಿಯಾಗಿ ಅವರ ಗೋಳು ತೋಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.

ಬೋಧಕ ಹುದ್ದೆಗಳ ನೇಮಕಾತಿ, ಪ್ರೊಬೇಷನರಿ ಅವಧಿ ಘೋಷಣೆಗೆ ಲಂಚ, ಮೀಸಲಾತಿ ನಿಯಮ ಉಲ್ಲಂಘನೆ, ವಿವಿಧ ಕಾಮಗಾರಿಗಳಲ್ಲಿ ಹಣದ ದುರ್ಬಳಕೆ, ವಿದ್ಯಾರ್ಥಿಗಳಿಗೆ ಫೆಲೋಶಿಪ್‌ ನೀಡದಿರುವುದು, ಸಿಬ್ಬಂದಿ ವಿರುದ್ಧದ ಸೇಡಿನ ಕ್ರಮದ ಆರೋಪ ಸೇರಿದಂತೆ ಹಲವು ವಿಚಾರಗಳಲ್ಲಿ ವಿ.ವಿ. ಆಡಳಿತ ಹಾಗೂ ಸಿಬ್ಬಂದಿ ನಡುವೆ ಹಲವು ತಿಂಗಳಿಂದ ಆಂತರಿಕ ಸಂಘರ್ಷ ನಡೆಯುತ್ತಿದೆ. ಈಗಲೂ ಕೆಲ ಸಿಬ್ಬಂದಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವರು ನ್ಯಾಯಾಲಯದ ಮೆಟ್ಟಿಲು ಕೂಡ ಏರಿದ್ದಾರೆ. ವಿ.ವಿ.ಯಲ್ಲಿನ ಭ್ರಷ್ಟಾಚಾರದ ಸದ್ದು ರಾಜ್ಯದಾದ್ಯಂತ ಕೇಳಿಸಿತ್ತು. ಮೇಲ್ನೋಟಕ್ಕೆ ಎಲ್ಲವೂ ಸರಿಯೆಂಬಂತೆ ಕಾಣುತ್ತಿದ್ದರೂ ಒಳಗೆ ಯಾವುದೂ ಸರಿ ಕಾಣುತ್ತಿಲ್ಲ. ಇಂತಹ ಸಂದರ್ಭದಲ್ಲಿ ‘ನುಡಿಹಬ್ಬ’ ನಡೆಯುತ್ತಿದೆ.

‘ವಿಶ್ವವಿದ್ಯಾಲಯ ಎಂದರೆ ಅದೊಂದು ಮನೆ. ಮನೆಯ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಆದರೆ, ಆ ಕೆಲಸವಾಗುತ್ತಿಲ್ಲ. ನಮ್ಮ ಹಕ್ಕುಗಳಿಗಾಗಿ ಪ್ರಶ್ನಿಸಿದರೆ ಸೇಡಿನ ಕ್ರಮ ಕೈಗೊಳ್ಳಲಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ನುಡಿಹಬ್ಬದ ಸಂಭ್ರಮ ಎಲ್ಲಿರುತ್ತದೆ?’ ಎಂದು ಹೆಸರು ಹೇಳಲಿಚ್ಛಿಸದ ವಿ.ವಿ. ಹಿರಿಯ ಸಿಬ್ಬಂದಿ ತಿಳಿಸಿದರು.

3 ವರ್ಷಗಳಿಂದ ಇಲ್ಲ ಫೆಲೋಶಿಪ್

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ/ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಮೂರು ವರ್ಷಗಳಿಂದ ಫೆಲೋಶಿಪ್‌ ನೀಡಿಲ್ಲ. ತಾತ್ಕಾಲಿಕ ಬೋಧಕ ಸಿಬ್ಬಂದಿಗೆ 13 ತಿಂಗಳಿಂದ ಬೋಧಕೇತರ ಸಿಬ್ಬಂದಿಗೆ9 ತಿಂಗಳಿಂದ ವೇತನ ಸಿಕ್ಕಿಲ್ಲ. ಈ ಸಂಬಂಧ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೋಮವಾರ ಕುಲಪತಿಯವರನ್ನು ಭೇಟಿಯಾಗಿ ಕೋರಿದರೂ ಪ್ರಯೋಜನವಾಗಿಲ್ಲ.

‘ಸರ್ಕಾರದಿಂದ ಫೆಲೋಶಿಪ್‌ ಹಣ ಬಿಡುಗಡೆಯಾಗಿದೆ. ಆದರೆ, ಕುಲಪತಿ ಹಣ ಬಂದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ಕುರಿತು ರಾಜ್ಯಪಾಲರಿಗೆ ದೂರು ಕೊಡಲು ನಿರ್ಧರಿಸಲಾಗಿದೆ’ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಈ ಕುರಿತು ವಿ.ವಿ. ಕುಲಪತಿ, ಕುಲಸಚಿವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT