ಬುಧವಾರ, ಮಾರ್ಚ್ 29, 2023
30 °C

ಪೆಟ್ರೋಲ್‌ ಡೀಸೆಲ್‌ ಬೆಲೆ ಭಾರೀ ಇಳಿಕೆ ಹಾನಗಲ್‌ ಫಲಿತಾಂಶದ ಫಲ: ಡಿಕೆ ಶಿವಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಬೆಂಗಳೂರು: 'ಹಾನಗಲ್‌ ಉಪ ಚುನಾವಣೆ ಫಲಿತಾಂಶದ ಫಲವಾಗಿ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇನ್ನೂ ಬೆಲೆ ಇಳಿಕೆಯಾಗಬೇಕಾದ ಪದಾರ್ಥಗಳು ಬಹಳಷ್ಟಿವೆ. ಗ್ಯಾಸ್, ಅಡುಗೆ ಎಣ್ಣೆ, ದಿನಸಿ ಇತ್ಯಾದಿ. ಜನರು ಬಿಜೆಪಿಗೆ ತಕ್ಕ ಉತ್ತರ ಕೊಡುವ ದಿನಗಳು ಹತ್ತಿರ ಬರ್ತಿವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಟ್ವೀಟ್‌ ಮಾಡಿದ್ದಾರೆ.

ಹಾನಗಲ್‌ ಉಪ ಚುನಾವಣೆ ಫಲಿತಾಂಶದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಶಿವಕುಮಾರ್‌, ಹಾನಗಲ್‌ ಕ್ಷೇತ್ರದ ಗೆಲುವು ನನ್ನ ಗೆಲುವಲ್ಲ, ಇದು ಮತದಾರರ ಗೆಲುವು, ಪಕ್ಷದ ಕಾರ್ಯಕರ್ತರ ಗೆಲುವು, ದುರಾಡಳಿತದ ವಿರುದ್ಧದ ಮತದಾರರ ತೀರ್ಪು ಎಂದು ವ್ಯಾಖ್ಯಾನಿಸಿದ್ದಾರೆ.

ಜನರ ಮಧ್ಯೆ ಇರುವವರು, ಸ್ಪಂದಿಸುವವರು, ಕಷ್ಟಕಾಲದಲ್ಲಿ ನೆರವಾಗುವವರಿಗೆ ಮತದಾರರು ಆಶೀರ್ವಾದ ಮಾಡಿದ್ದಾರೆ. ಕೋವಿಡ್‌ ಸಂಕಷ್ಟದ ಸಮಯದಲ್ಲಿ ಬಿಜೆಪಿ ಸರ್ಕಾರ ನಡೆದುಕೊಂಡ ರೀತಿ, ಜನವಿರೋಧಿ, ದುರಾಡಳಿತದ ವಿರುದ್ಧ ಮತದಾರರು ತೀರ್ಪು ನೀಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಬಿಜೆಪಿ ಸರ್ಕಾರ ಎಷ್ಟೇ ಒತ್ತಡ ಹಾಕಿದರೂ, ಆಮಿಷ ಒಡ್ಡಿದರೂ ಹಾನಗಲ್ ಕ್ಷೇತ್ರದ ಮತದಾರರು ದಿಟ್ಟ ತೀರ್ಮಾನ ತೆಗೆದುಕೊಂಡರು. ಕ್ಷೇತ್ರದ ಮತದಾರರು, ಕಾರ್ಯಕರ್ತರು, ಜಿಲ್ಲಾ ಮಟ್ಟದ ನಾಯಕರು, ತಳಮಟ್ಟದಲ್ಲಿ ಕೆಲಸ ಮಾಡಿದ ರಾಜ್ಯ ನಾಯಕರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ. ಕಾಂಗ್ರೆಸ್ ಮುಳುಗಿದ ಹಡಗು, ಇಬ್ಭಾಗ ಆಗಿದೆ ಎಂದು ವ್ಯಾಖ್ಯಾನ ಮಾಡಿದ್ದವರಿಗೆ ಈ ಉಪ ಚುನಾವಣೆಗಳ ಫಲಿತಾಂಶ ಸ್ಪಷ್ಟ ಸಂದೇಶ ನೀಡಿದೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು