ಶುಕ್ರವಾರ, ಸೆಪ್ಟೆಂಬರ್ 24, 2021
23 °C

‘ಎಸ್‌ಸಿಪಿ–ಟಿಎಸ್‌ಪಿ ಹಣ ವಾಪಸ್ ಪಡೆಯಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಿವಿಧ ಇಲಾಖೆಗಳಲ್ಲಿರುವ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಗಳ (ಟಿಎಸ್‌ಪಿ) ಕೋಟ್ಯಂತರ ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆ ವಾಪಸ್‌ ಪಡೆಯಬೇಕು. ಆ ಹಣದಿಂದ ಸಮುದಾಯದ ಜನರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ಎಚ್.ಆಂಜನೇಯ ಒತ್ತಾಯಿಸಿದ್ದಾರೆ.

‘ರಾಜ್ಯದ ಬಹುತೇಕ ಸಚಿವರು ದಕ್ಷವಾಗಿ ಕಾರ್ಯನಿರ್ವಹಿಸದ ಕಾರಣ ವಿವಿಧ ಇಲಾಖೆಗಳಲ್ಲಿನ ಪರಿಶಿಷ್ಟ ಸಮುದಾಯಗಳಿಗೆ ಮೀಸಲಾದ ಹಣ ಸದ್ಬಳಕೆ ಆಗಿಲ್ಲ. ಇದಕ್ಕೆ ಅನುದಾನದ ಕೊರತೆ, ಲಾಕ್‌ಡೌನ್‌ ಎಂಬ ಉತ್ತರ ನೀಡುವುದು ಸಮಂಜಸವಲ್ಲ’ ಎಂದು ಹೇಳಿದ್ದಾರೆ.

‘ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿರುವ ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳ ಹಣವನ್ನು ಸಮಾಜ ಕಲ್ಯಾಣ ಇಲಾಖೆ ವಾಪಸ್ ಪಡೆಯಬೇಕು. ಇದರಿಂದ ಪರಿಶಿಷ್ಟ ಸಮುದಾಯದ ಜನರಿಗೆ ರಸ್ತೆ, ವಸತಿ, ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ, ಹಾಸ್ಟೆಲ್‌ ಮತ್ತು ನಿರುದ್ಯೋಗಿಗಳಿಗೆ ಸ್ವಯಂ ಉದ್ಯೊಗ ಕೈಗೊಳ್ಳಲು ಸಾಲ, ಸಹಾಯಧನ ಸೌಲಭ್ಯ ಕಲ್ಪಿಸಬಹುದು’ ಎಂದು ಸಲಹೆ ನೀಡಿದ್ದಾರೆ.

‘ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪರಿಶಿಷ್ಟ ಜಾತಿಯ ಜನರು ವಸತಿ ನಿರ್ಮಿಸಿಕೊಳ್ಳಲು ₹5 ಲಕ್ಷ ನೆರವು ನೀಡುವ ಯೋಜನೆ ಘೋಷಿಸಿರುವುದು ಸ್ವಾಗತಾರ್ಹ. ಇದನ್ನು ಇತರ ವರ್ಗದ ಜನರಿಗೂ ವಿಸ್ತರಿಸಬೇಕು’ ಎಂದು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು