ಗುರುವಾರ , ಮೇ 26, 2022
30 °C
ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಆರೋಪ

ಮುಷ್ಕರದ ನಂತರ ಹೆಚ್ಚಿನ ಕಿರುಕುಳ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ಇತ್ತೀಚೆಗೆ ನಡೆಸಿದ್ದ ಮುಷ್ಕರದ ನಂತರ ಅವರ ಮೇಲೆ ಹಿಂದೆಂದಿಗಿಂತಲೂ ಹೆಚ್ಚು ದಬ್ಬಾಳಿಕೆ ನಡೆಸಲಾಗುತ್ತಿದೆ. ಸಕಾಲದಲ್ಲಿ ವೇತನ ನೀಡದೆ ಸತಾಯಿಸಲಾಗುತ್ತಿದ್ದು, ರಜೆ ಹಾಕುವಂತೆ ಒತ್ತಡ ಹೇರಲಾಗುತ್ತಿದೆ’ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಸೋಮವಾರ ಆರೋಪಿಸಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯುನ ಕೆ.ಪ್ರಕಾಶ್‌ ‘ನೌಕರರು ಕೆಲಸಕ್ಕೆ ಹಾಜರಾಗಲು ಮೇಲಧಿಕಾರಿಗಳಿಗೆ ಲಂಚ ನೀಡಬೇಕಾದ ಪ‍ರಿಸ್ಥಿತಿ ಈಗ ಉದ್ಭವವಾಗಿದೆ. ನಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದ ಸರ್ಕಾರ ಈಗ ಮಾತು ತಪ್ಪಿದೆ. ಡಿಸೆಂಬರ್‌ ಮತ್ತು ಜನವರಿ ತಿಂಗಳಲ್ಲಿ ಅರ್ಧ ಸಂಬಳವನ್ನಷ್ಟೇ ಪಾವತಿಸಲಾಗಿದೆ. ನೌಕರರು ಕರ್ತವ್ಯಕ್ಕೆ ಹಾಜರಾದರೆ ಅವರನ್ನು ಮಧ್ಯಾಹ್ನದವರೆಗೂ ಕಾಯಿಸಿ ಬಳಿಕ ರಜೆ ಹಾಕಿ ಮನೆಗೆ ಹೋಗುವಂತೆ ಹೇಳುತ್ತಿದ್ದಾರೆ’ ಎಂದು ದೂರಿದರು.

‘ಸರ್ಕಾರವು ನಿಗದಿತ ಸಮಯಕ್ಕೆ ವೇತನ ಪಾವತಿಸಬೇಕು. ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು. ಯಾವ ಷರತ್ತುಗಳೂ ಇಲ್ಲದೆ ವಾರದ ರಜೆ ನೀಡಬೇಕು. ಮಹಿಳೆಯರಿಗೆ ಮೊದಲ ಮತ್ತು ಸಾಮಾನ್ಯ ಪಾಳಿಯಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡಬೇಕು’ ಎಂದು ಅವರು ಒತ್ತಾಯಿಸಿದರು.

‘ಸರ್ಕಾರವು ಖಾಸಗಿಯವರ ಸಹಭಾಗಿತ್ವದಲ್ಲಿ 300 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆ ಮಾಡಲು ಮುಂದಾಗಿರುವುದು ಸರಿಯಲ್ಲ. ಇದು ಅಪಾಯಕಾರಿ ಬೆಳವಣಿಗೆ. ಈ ನಿರ್ಧಾರವನ್ನು ಹಿಂಪಡೆದು ನಿಗಮಗಳ ಅಡಿಯಲ್ಲೇ ಅವು ಕಾರ್ಯಾಚರಣೆ ನಡೆಸುವಂತೆ ಕ್ರಮ ಕೈಗೊಳ್ಳಬೇಕು’ ಎಂದರು.

‘ಆಡಳಿತ ವರ್ಗವು ಕಾರ್ಮಿಕರ ಸಮಸ್ಯೆಯ ಬಗ್ಗೆ ಚರ್ಚಿಸಲು ಮುಂದೆ ಬರುತ್ತಿಲ್ಲ. ಸರ್ಕಾರದ ಈ ನೀತಿ ಹಾಗೂ ಮೇಲಧಿಕಾರಿಗಳ ದೌರ್ಜನ್ಯ ಖಂಡಿಸಿ ಇದೇ 10ರಂದು ಬಿಎಂಟಿಸಿ ಕೇಂದ್ರ ಕಚೇರಿಯ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲು ತೀರ್ಮಾನಿಸಿದ್ದೇವೆ’ ಎಂದು ಸಿಐಟಿಯು ಅಧ್ಯಕ್ಷ ಎಚ್‌.ಡಿ.ರೇವಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು