ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಹೇಳಿಕೆಗೆ ಹಸನಸಾಬ್‌ ವಿರೋಧ

ಅಭ್ಯರ್ಥಿಯಾಗಿ ಅಮರೇಗೌಡ ಬಯ್ಯಾಪುರ ಹೆಸರು ಘೋಷಣೆ ವಿಚಾರ
Last Updated 21 ನವೆಂಬರ್ 2022, 15:13 IST
ಅಕ್ಷರ ಗಾತ್ರ

ಕುಷ್ಟಗಿ (ಕೊಪ್ಪಳ ಜಿಲ್ಲೆ): ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸುವ ಕಾಂಗ್ರೆಸ್‌ ಪಕ್ಷದ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆ ನಡೆದಿರುವಾಗಲೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿರುವುದು ಇಲ್ಲಿಯ ಕಾಂಗ್ರೆಸ್‌ ವಲಯದಲ್ಲಿನ ಅಸಮಾಧಾನಕ್ಕೆ ಕಾರಣವಾಗಿದೆ.

ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾನುವಾರ ಕೊಪ್ಪಳಕ್ಕೆ ಬಂದಿದ್ದ ಸಿದ್ದರಾಮಯ್ಯ ಜಿಲ್ಲೆಯ ಇತರೆ ಕ್ಷೇತ್ರಗಳ ಜೊತೆಗೆ ಇಲ್ಲಿಯ ಹಾಲಿ ಶಾಸಕ ಅಮರೇಗೌಡ ಬಯ್ಯಾಪುರ ಅವರನ್ನೂ ಕುಷ್ಟಗಿ ಕ್ಷೇತ್ರದ ಅಭ್ಯರ್ಥಿ ಎಂದೆ ಘೋಷಿಸಿದ್ದರು.

ಆಕಾಂಕ್ಷಿಗಳಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆ ಕೊನೆಗೊಂಡದ್ದು ನ.21ರ ಸಂಜೆಗೆ. ಕೆಪಿಸಿಸಿ ಉಪಾಧ್ಯಕ್ಷರೂ ಆಗಿರುವ ಇಲ್ಲಿಯ ಮಾಜಿ ಶಾಸಕ ಹಸನಸಾಬ್‌ ದೋಟಿಹಾಳ ಈ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಬ್ಬ ಆಕಾಂಕ್ಷಿ ಕೆಬಿಜೆಎನ್‌ಎಲ್‌ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ ಚಿಣಿ ಅವರೂ ಮೊದಲೇ ಅರ್ಜಿ ಸಲ್ಲಿಸಿದ್ದಾರೆ.

ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಹಸನಸಾಬ್ ದೋಟಿಹಾಳ, ಅರ್ಜಿ ಸ್ವೀಕಾರ ಅವಧಿ ಸೋಮವಾರ ಕೊನೆಗೊಂಡಿದೆ. ಅರ್ಜಿಗಳ ಪರಿಶೀಲನೆ ಪ್ರಕ್ರಿಯೆಗೆ ಪಕ್ಷದ ಸಭೆಯೇ ನಡೆದಿಲ್ಲ. ಹೀಗಿದ್ದರೂ ಸಿದ್ದರಾಮಯ್ಯ ಅಭ್ಯರ್ಥಿಗಳನ್ನು ಘೋಷಿಸಿರುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಅಭ್ಯರ್ಥಿಗಳ ಘೋಷಣೆ ಮಾಡುವಂತಿದ್ದರೆ ಕೆಪಿಸಿಸಿ ಹಿಂತಿರುಗಿಸಲಾಗದ ₹2 ಲಕ್ಷ ಠೇವಣಿ ಪಡೆದು ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸುವುದು ಯಾವ ಪುರುಷಾರ್ಥಕ್ಕೆ ಎಂದು ಅಸಮಾಧಾನ ಹೊರಹಾಕಿದರು.

ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಶಿಸ್ತು ಇದೆ. ಕೆಪಿಸಿಸಿಯಲ್ಲಿ ನಿರ್ಧಾರವಾದವರ ಹೆಸರುಗಳು ಎಐಸಿಸಿ ಮಟ್ಟದಲ್ಲಿ ಕೊನೆಗಳಿಗೆಯಲ್ಲಿ ಬದಲಾದ ಬಹಳಷ್ಟು ಉದಾಹರಣೆಗಳಿವೆ. 2008ರಲ್ಲಿ ಕೆಪಿಸಿಸಿ ಸಿದ್ಧಪಡಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇತ್ತಾದರೂ ನಂತರ ಬದಲಾಗಿ ಅಮರೇಗೌಡ ಬಯ್ಯಾಪುರ ಅವರಿಗೆ ಟಿಕೆಟ್ ನೀಡಲಾಯಿತು. ಹೀಗಿರುವಾಗ ನಾಯಕರಾದವರೇ ಈ ರೀತಿ ಹೇಳಿಕೆ ನೀಡುತ್ತಾರೆಂದರೆ ಅಚ್ಚರಿಯಾಗುತ್ತದೆ. ಅಷ್ಟೇ ಅಲ್ಲ ಪಕ್ಷದಲ್ಲಿನ ಗೊಂದಲಕ್ಕೂ ಕಾರಣವಾಗಬಹುದು. ಅಭ್ಯರ್ಥಿ ಹೆಸರು ಘೋಷಿಸಲು ಸಿದ್ದರಾಮಯ್ಯ ಯಾರು ಎಂದೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಪ್ರಶ್ನಿಸಿದ್ದಾರೆ? ಎಂದರು.

ಯಾರಿಗಾದರೂ ಟಿಕೆಟ್‌ ಸಿಗಲಿ ಹೈಕಮಾಂಡ್‌ ನಿರ್ಧಾರವನ್ನು ಎಲ್ಲರೂ ಒಪ್ಪಬೇಕಾಗುತ್ತದೆ ಎಂದರು.

ಸಿದ್ದರಾಮಯ್ಯ ಹೇಳಿದ್ದು ಸರಿ: ಬಯ್ಯಾಪುರ

ಸಿದ್ದರಾಮಯ್ಯ ಅವರ ಹೇಳಿಕೆ ಮತ್ತು ಪಕ್ಷದಲ್ಲಿ ಕೇಳಿಬಂದಿರುವ ಅಪಸ್ವರಕ್ಕೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಶಾಸಕ ಅಮರೇಗೌಡ ಬಯ್ಯಾಪುರ, 'ಸಿದ್ದರಾಮಯ್ಯ ಹೇಳಿದ್ದರಲ್ಲಿ ತಪ್ಪೇನಿಲ್ಲ, ಅವರೂ ಹಿರಿಯರು. ಮೇಲಾಗಿ ಹಾಲಿ ಶಾಸಕರನ್ನು ಬದಲಿಸಿ ಬೇರೆಯವರಿಗೆ ಟಿಕೆಟ್‌ ಕೊಡಲು ಸಾಧ್ಯವೆ ಇದು ಓಪನ್‌ ಸಿಕ್ರೆಟ್‌. ಔಪಚಾರಿಕವಾಗಿ ಅರ್ಜಿ ಸ್ವೀಕರಿಸುವ ಪದ್ಧತಿ ಮೊದಲಿನಿಂದಲೂ ಇದ್ದು ಗೆಲ್ಲುವ ಕುದುರೆಗಳನ್ನು ಹೈಕಮಾಂಡ್ ಗಮನಿಸುತ್ತದೆ. ಟಿಕೆಟ್‌ಗಾಗಿ ನಾನೂ ಅರ್ಜಿ ಸಲ್ಲಿಸಿದ್ದೇನೆ. ಠೇವಣಿ ಹಣ ಪಕ್ಷದ ವಂತಿಕೆಗೆ ಸೇರುತ್ತದೆ' ಎಂದು ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಈ ವಿಷಯದಲ್ಲಿ ಯಾರಲ್ಲಿಯೂ ಗೊಂದಲ ಇಲ್ಲ ಬಹಳಷ್ಟು ಜನರು, ಅಭಿಮಾನಿಗಳು ಸೇರಿದ ಸ್ಥಳದಲ್ಲಿ ಹುಮ್ಮಸ್ಸಿನಲ್ಲಿ ಸಿದ್ದರಾಮಯ್ಯ ಸತ್ಯವನ್ನೇ ಹೇಳಿರಬಹುದು. ಒಂದೊಮ್ಮೆ ಕೊನೆಗಳಿಗೆಯಲ್ಲಿ ಅಭ್ಯರ್ಥಿಗಳ ಹೆಸರುಗಳು ಬದಲಾದರೂ ಆಗಬಹುದು ಅದು ಅಚ್ಚರಿಯ ವಿಷಯವಲ್ಲ. ಆದರೆ ಹಸನಸಾಬ್‌ ಅವರ ಹೇಳಿಕೆ ವೈಯಕ್ತಿಕವಾದುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT