ಸೋಮವಾರ, ಸೆಪ್ಟೆಂಬರ್ 27, 2021
21 °C
‘ಸಂಚಲನ ಸೃಷ್ಟಿಸಿದ ಪ್ರೀತಂ ಗೌಡರ ‘ಹೊಂದಾಣಿಕೆ ರಾಜಕಾರಣ’ ಹೇಳಿಕೆ

ಜೆಡಿಎಸ್ ವಿರುದ್ಧ ಪ್ರೀತಂ ಏಕಾಂಗಿ ಹೋರಾಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ನಿವಾಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ
ನೀಡಿದ್ದನ್ನೇ ಕಾರಣವಾಗಿಟ್ಟುಕೊಂಡು ‘ಹೊಂದಾಣಿಕೆ ರಾಜಕಾರಣ’ ಎಂಬ ಸ್ಥಳೀಯ ಶಾಸಕ ಪ್ರೀತಂ ಗೌಡ ನೀಡಿದ ಹೇಳಿಕೆ ರಾಜಕೀಯ ಪಡಸಾಲೆಯಲ್ಲಿ ಸದ್ದು ಮಾಡುತ್ತಿದೆ.

ಹೈಕಮಾಂಡ್‌ ಸೂಚನೆ ಮೇರೆಗೆ ಗೌಡರ ಮನೆಗೆ ಸಿ.ಎಂ ಭೇಟಿ ನೀಡಿದ್ದು ಎಂಬ ಮಾತುಗಳು ಬಿಜೆಪಿ ವಲಯದಲ್ಲೇ ಹರಿದಾಡುತ್ತಿರುವುದು ಜಿಲ್ಲಾ ರಾಜ ಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. 

ಸಿ.ಎಂ ವಿರುದ್ಧ ಪ್ರೀತಂ ಅವರ ಬಹಿರಂಗ ಅಸಮಾಧಾನ ರಾಜಕೀಯ ವಲಯದಲ್ಲಿ ವಾಕ್ಸಮರಕ್ಕೆ ಕಾರಣ ವಾಗಿದೆ. ಈ ಬೆಳವಣಿಗೆ ಗಮನಿಸಿದ ಸಿ.ಎಂ, ಬೆಂಗಳೂರಿಗೆ ಕರೆಯಿಸಿಕೊಂಡು ಪ್ರೀತಂ ಗೌಡಗೆ ಕಿವಿಮಾತು ಹೇಳಿದ್ದಾರೆ.

ಈ ಎಲ್ಲ ಬೆಳವಣಿಗೆ ನಡುವೆ ಸಚಿವ ವಿ.ಸೋಮಣ್ಣ ಮತ್ತು ಪ್ರೀತಂ ನಡುವೆ ವಾಕ್ಸಮರ ನಡೆದಿದೆ. ‘ಒಂದು
ಸಾರಿ ಗೆದ್ದ ತಕ್ಷಣ ದೇವರಲ್ಲ. ನಾನು ಸಚಿವ ಆಗಿದ್ದಾಗ ಪ್ರೀತಂ ಗೌಡ ಹುಟ್ಟಿರಲಿಲ್ಲ. ದೇವೇಗೌಡರ ಕುಟುಂಬಕ್ಕೆ
50 ವರ್ಷ ರಾಜಕೀಯ ಇತಿಹಾಸವಿದೆ. ಇದರಲ್ಲಿ ರಾಜಕಾರಣ ಏನು ಇಲ್ಲ’ ಎಂದು ಸೋಮಣ್ಣ ಹೇಳಿದ್ದರು.

ಈ ಹೇಳಿಕೆ ಹೊರಬಿದ್ದ ಬೆನ್ನಲ್ಲೆ ‘ಶಾಸಕನಾದ ತನಗೆ ಗೌರವಿಲ್ಲದ ರೀತಿ ಮಾತನಾಡುವುದನ್ನು ಸಹಿಸುವು ದಿಲ್ಲ. ಗೌರವ ಕೊಟ್ಟು, ಗೌರವ ಪಡೆದುಕೊಳ್ಳ ಬೇಕು’ ಎಂದು ಪ್ರೀತಂ ಕಿಡಿ ಕಾರಿದರು. ‌

ಬೊಮ್ಮಾಯಿ ಕರೆಸಿಕೊಂಡು ಬುದ್ದಿಮಾತು ಹೇಳಿದರೂ ಪ್ರೀತಂ ಗೌಡ ತಮ್ಮ ಹಳೆಯ ನಿಲುವಿಗೆ  ಅಂಟಿ ಕೊಂಡಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರವಿರ ಬಹುದು ಎಂದೇ ಅರ್ಥೈಸಲಾಗಿದೆ.  ಮೇಲ್ನೋಟಕ್ಕೆ ಪ್ರೀತಂ, ದೇವೇಗೌಡರನ್ನು ಟೀಕಿಸುವ ಭರದಲ್ಲಿ ಬಿಜೆಪಿ ನಾಯಕರಿಗೆ ಕೋಪ ತರಿಸಿದ್ದಾರೆ.  ವಿವಾದವನ್ನು ಮೈಮೇಲೆ ಳೆದುಕೊಂಡಿ ದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಪಕ್ಷದೊಳಗೆ ಅವರ ಪ್ರಾಧಾನ್ಯತೆ ಕುಗ್ಗಲಿದೆ ಎಂಬೆಲ್ಲ ಮಾತುಗಳು ಕೇಳಿ ಬಂದಿವೆ.

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಹಾಸನ ಕ್ಷೇತದಿಂದ ಗೆದ್ದಿರುವ ಬಿಜೆಪಿ ಏಕೈಕ ಶಾಸಕ ಪ್ರೀತಂ ಗೌಡ ಅವರು ಮೂರು ವರ್ಷಗಳಿಂದ ಜೆಡಿಎಸ್‌ನೊಂದಿಗೆ ರಾಜಕೀಯ ಸೆಣಸಾಟ ನಡೆಸುತ್ತಲೇ ಬಂದಿದ್ದಾರೆ. 

ಹಾಸನದಲ್ಲಿ ಎಚ್‌.ಡಿ.ರೇವಣ್ಣ ಅವರ ಕನಸಿನ ಅಭಿವೃದ್ಧಿ ಯೋಜನೆ ಗಳ ಪರಿಷ್ಕರಣೆ ಮತ್ತು ಕೆಲವು ಯೋಜನೆಗಳನ್ನು ತಡೆಯುವ ಮಟ್ಟಕ್ಕೂ ಹೋದರು. ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಅಸಹಾಯಕರಾಗಿದ್ದರು. ಅಧಿಕಾರಿಗಳ ಮೇಲೂ ಹಿಡಿತ ಸಾಧಿಸುತ್ತಿದ್ದ ಅವರ ಬೆಳವಣಿಗೆ ಜೆಡಿಎಸ್‌ ಮುಖಂಡರಿಗೆ ಸಹಿಸಲು ಆಗಲಿಲ್ಲ.

ಬಿಎಸ್‌ವೈ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಅತ್ಯಾಪ್ತರ ತಂಡದಲ್ಲಿದ್ದ ಪ್ರೀತಂ, ಕೆ.ಆರ್‌. ಪೇಟೆ, ಶಿರಾ, ಮಸ್ಕಿ ಚುನಾವಣೆಗಳಲ್ಲಿ ಪ್ರಚಾರದಲ್ಲಿ ಮುಂಚೂಣಿ ನಾಯಕರಾಗಿ ಮಿಂಚಿದ್ದರು. ಎರಡು ಕ್ಷೇತ್ರಗಳ ಗೆಲುವು ವಿಜಯೇಂದ್ರ ಅವರೊಂದಿಗಿನ ಬಾಂಧವ್ಯವನ್ನೂ ಗಟ್ಟಿಗೊಳಿಸಿತ್ತು.

ರಾಜಕೀಯ ಬೆಳವಣಿಗೆಗಳಲ್ಲಿ ಬಿಎಸ್‌ವೈ ಕೆಳಗಿಳಿದು ಬೊಮ್ಮಾಯಿ ಸಿ.ಎಂ ಆದರು. ಹೀಗಿ ದ್ದರೂ ಬಿಎಸ್‌ವೈ ಪರವಾಗಿ ಬಹಿರಂಗ ವಾಗಿಯೇ ಮಾತನಾಡಿದ ಪ್ರೀತಂ, ಅವರ ಕುಟುಂಬಕ್ಕೆ ತಮ್ಮ ನಿಷ್ಠೆ ವ್ಯಕ್ತಪಡಿಸಿದ್ದರು.

ಸಾಕಷ್ಟು ಲಾಬಿ, ಒತ್ತಡದ ನಡುವೆಯೂ ಮಂತ್ರಿಗಿರಿ ದಕ್ಕಿಸಿ ಕೊಳ್ಳುವಲ್ಲಿ ವಿಫಲರಾದರು. ಇದಕ್ಕೆ ಹಲವಾರು ಕಾರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಬಿಜೆಪಿಯಲ್ಲಿ ಈ  ಬೆಳವಣಿಗೆಗಳು ಹಾಸನ ರಾಜಕಾರಣದಲ್ಲಿ ಪ್ರೀತಂ ಜೆಡಿಎಸ್ ವಿರುದ್ಧ ಏಕಾಂಗಿ ಹೋರಾಡುವಂತಾಗಿದೆ. ಬದಲಾದ ರಾಜಕೀಯ ಪರಿಸ್ಥಿತಿಗೆ ಹೊಂದಿಕೊಳ್ಳು ವುದು ಪ್ರೀತಂ ಗೌಡಗೆ ಕಷ್ಟವಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು