ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ ದೇಶ, ಧರ್ಮದ ಬಗ್ಗೆ ಗೌರವ ಇರಲಿ: ಅಜಯ್‌ಕುಮಾರ್ ಸಿಂಗ್ ಸಲಹೆ

‌ಅಜಯ್‌ಕುಮಾರ್ ಸಿಂಗ್ ಸಲಹೆ: ಜಿ.ಎಂ.ಹೆಗಡೆಗೆ ವಿ.ಕೃ.ಗೋಕಾಕ್ ಪ್ರಶಸ್ತಿ ಪ್ರದಾನ
Last Updated 9 ಸೆಪ್ಟೆಂಬರ್ 2022, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ದೇಶ, ಭಾಷೆ,ಧರ್ಮ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಹೆಮ್ಮೆ ಇರಬೇಕು. ಗರ್ವ ಇದ್ದರೂ ತಪ್ಪಿಲ್ಲ. ಆದರೆ, ಇನ್ನೊಬ್ಬರ ದೇಶ, ಭಾಷೆ, ಧರ್ಮ ಸಂಸ್ಕೃತಿಯನ್ನೂ ಗೌರವಿಸುವುದು ಮುಖ್ಯ’ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಅಜಯ್‌ಕುಮಾರ್ ಸಿಂಗ್ ಹೇಳಿದರು.

ಭಾರತೀಯ ವಿದ್ಯಾಭವನ ಮತ್ತು ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧಾರವಾಡದ ನಿವೃತ್ತ ಪ್ರಾಧ್ಯಾಪಕ ಜಿ.ಎಂ.ಹೆಗಡೆ ಅವರಿಗೆ ವಿ.ಕೃ. ಗೋಕಾಕ್ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಪರಧರ್ಮ ಸಹಿಷ್ಣುತೆ ಸಾಧ್ಯವಾಗುವುದು ಸಹೃದಯತೆಯಿಂದ ಮಾತ್ರ. ಯಾವ ಮನುಷ್ಯನೂ ಸಂಪೂರ್ಣ ಸ್ವತಂತ್ರವಾಗಿ ಬದುಕಲು ಸಾಧ್ಯವಿಲ್ಲ. ಒಬ್ಬರ ಮೇಲೊಬ್ಬರು ಅವಲಂಬಿತರಾಗಿಯೇ ಜೀವನ ನಡೆಸಬೇಕಿದೆ. ಅದನ್ನು ಅರ್ಥ ಮಾಡಿಕೊಂಡರೆ ಎಲ್ಲರನ್ನೂ ಒಳಗೊಂಡು ಸಹಬಾಳ್ವೆ ನಡೆಸಲು ಸಾಧ್ಯ’ ಎಂದು ಪ್ರತಿಪಾದಿಸಿದರು.

ಪ್ರಶಸ್ತಿ ಸ್ವೀಕರಿಸಿದ ಜಿ.ಎಂ.ಹೆಗಡೆ ಮಾತನಾಡಿ, ‘ವಿ.ಕೃ.ಗೋಕಾಕ್ ಅವರು ಕನ್ನಡಿಗರ ಪ್ರಾತಃಸ್ಮರಣೀಯರಾಗಿದ್ದರು. ಅವರ ಭಾಷಣ ಕೇಳಲು ವಿದ್ಯಾರ್ಥಿಗಳು ಹಾತೊರೆಯುತ್ತಿದ್ದರು. ಅವರ ಹೆಸರಿನಲ್ಲಿ ನೀಡಿರುವ ಪ್ರಶಸ್ತಿ ನನ್ನ ಜವಾಬ್ದಾರಿ ಹೆಚ್ಚಿಸಿದೆ’ ಎಂದರು.

ಧಾರವಾಡದ ಹಿರೇಮಗಳೂರು ಈಶ್ವರನ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಶಿಧರ್ ತೋಡ್ಕರ ಅವರು ಅಭಿನಂದನಾ ನುಡಿಗಳನ್ನಾಡಿ, ‘ಸಾಹಿತ್ಯ ಕ್ಷೇತ್ರದಲ್ಲಿ ಜಿ.ಎಂ.ಹೆಗಡೆ ಅವರದ್ದು ಸವ್ಯಸಾಚಿ ವ್ಯಕ್ತಿತ್ವ. ಸದ್ದಿಲ್ಲದೆ ಅವರು ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡುತ್ತಿದ್ದಾರೆ’ ಎಂದು ಬಣ್ಣಿಸಿದರು.

ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಅನಿಲ್ ಗೋಕಾಕ್ ಮಾತನಾಡಿ, ‘‌ಶಿಕ್ಷಣ ಎಂದರೆ ವ್ಯಕ್ತಿಯ ಘನತೆ ಮತ್ತು ಅವರಲ್ಲಿ ಮಾನವೀಯ ಮೌಲ್ಯ ಹೆಚ್ಚಿಸುವ ಉಪಕರಣ ಆಗಬೇಕು. ಆದರೆ, ಇದನ್ನು ಸಾಧಿಸುವಲ್ಲಿ ಇಂದಿನ ಶಿಕ್ಷಣ ಪದ್ಧತಿ ಸಂಪೂರ್ಣ ವಿಫಲವಾಗಿದೆ. ವಿಶ್ವಮಾನವ ಪರಿಕಲ್ಪನೆ ಮತ್ತು ವಿವಿಧತೆಯಲ್ಲಿ ಅಡಗಿರುವ ಏಕತೆಯನ್ನು ಅರಿಯುವ ಸಾಮರ್ಥ್ಯ ಮಕ್ಕಳಿಗೆ ಇಲ್ಲವಾಗಿದೆ. ಆದ್ದರಿಂದ ದೇಶದಲ್ಲಿ ಸಾಮರಸ್ಯ ಸಾಧಿಸಲು ಸಾಧ್ಯವಾಗುತ್ತಿಲ್ಲ, ಆ ನಿಟ್ಟಿನ ಪ್ರಯತ್ನವೂ ಸಾಕಷ್ಟು ಪ್ರಮಾಣದಲ್ಲಿ ಆಗುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT