ಶನಿವಾರ, ಆಗಸ್ಟ್ 13, 2022
24 °C

ಡ್ರಗ್ಸ್‌ ಜಾಲದಲ್ಲಿ ಹವಾಲಾ: ತನಿಖೆಗೆ ಇ.ಡಿ ತಯಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡ್ರಗ್ಸ್ ಜಾಲದ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಆರಂಭಿಸಿದ್ದು, ಇ.ಡಿ ಅಧಿಕಾರಿಗಳು ಸಿಸಿಬಿ ಕಚೇರಿಗೆ ಗುರುವಾರ ಭೇಟಿ ನೀಡಿ ಆರೋಪಿ ವಿರೇನ್ ಖನ್ನಾ ವಹಿವಾಟಿನ ಕುರಿತು ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.

ಖನ್ನಾ ವಿದೇಶದಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದು, ಅಲ್ಲಿನ ಡ್ರಗ್ಸ್ ದಂಧೆಕೋರರ ಜತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪ ಇದೆ. ಈ ಸಂದರ್ಭದಲ್ಲಿ ವಿದೇಶಿಗರೊಂದಿಗೆ ಹಣದ ವಹಿವಾಟು ನಡೆಸಿದ್ದಾರೆ ಮತ್ತು ಹವಾಲಾ ವ್ಯವಹಾರ ನಡೆದಿದೆ ಎಂದು ಶಂಕಿಸಲಾಗಿದೆ.

‘ಇ.ಡಿ ಅಧಿಕಾರಿಗಳು ಗುರುವಾರ ಬೆಳಿಗ್ಗೆ 10.30ರ ಸುಮಾರಿನಲ್ಲಿ ಸಿಸಿಬಿ ಕಚೇರಿಗೆ ಬಂದಿದ್ದು, ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮಧ್ಯಾಹ್ನದ ತನಕ ಚರ್ಚೆ ನಡೆಸಿದ್ದಾರೆ. ಖನ್ನಾ, ರಾಗಿಣಿ ಮತ್ತು ಸಂಜನಾ ಮನೆಯಲ್ಲಿ ವಶಪಡಿಸಿಕೊಂಡ ದಾಖಲೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪ್ರಕರಣ ದಾಖಲಿಸಲು ಬೇಕಿರುವಷ್ಟು ದಾಖಲೆಗಳನ್ನು ಅವರು ಪಡೆದುಕೊಂಡಿದ್ದಾರೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಡ್ರಗ್ಸ್‌: ಕಾನೂನು ಇನ್ನಷ್ಟು ಬಿಗಿ’

ಬೆಂಗಳೂರು: ‘ರಾಜ್ಯದಲ್ಲಿ ಡ್ರಗ್ಸ್‌ ನಿಯಂತ್ರಣ ದೃಷ್ಟಿಯಿಂದ ಕಾನೂನು ಇನ್ನಷ್ಟು ಬಿಗಿಗೊಳಿಸಲು ನಿರ್ಧರಿಸಲಾಗಿದೆ. ಈ ಕುರಿತು ಕಾನೂನು ತಜ್ಞರ ಜೊತೆ ಮತ್ತು ರಾಷ್ಟ್ರೀಯ ಕಾನೂನು ಶಾಲೆಯ ಮುಖ್ಯಸ್ಥರ ಜೊತೆ ಈಗಾಗಲೇ ಮಾತನಾಡಿದ್ದೇನೆ. ಕಾನೂನು ಸಚಿವರ ಜೊತೆಗೂ ಚರ್ಚೆ ಮಾಡುತ್ತೇನೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಡಗ್ಸ್ ಜಾಲ ಪತ್ತೆ ಹಚ್ಚುವ ನಿಟ್ಟಿನಲ್ಲಿ ಕೇಂದ್ರ ಅಪರಾಧ ದಳ (ಸಿಸಿಬಿ) ಅಧಿಕಾರಿಗಳು ಬಹಳ ವೃತ್ತಿಪರವಾಗಿ, ಕ್ರಮಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ತನಿಖೆಯ ಜಾಡು ಹಿಡಿದು, ಎಷ್ಟೆ ದೊಡ್ಡವರಿರಲಿ ವಿಚಾರಣೆ ಮಾಡುವುದು ಶತಸಿದ್ಧ’ ಎಂದೂ ಅವರು ಹೇಳಿದರು.‌

ಆಂಧ್ರದಿಂದ ಗಾಂಜಾ ಪೂರೈಕೆ: 5 ಜನರ ಬಂಧನ

ದಾವಣಗೆರೆ: ಆಂಧ್ರ ಪ್ರದೇಶದಿಂದ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಚನ್ನಗಿರಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತರಿಂದ 5 ಕೆ.ಜಿ 250 ಗ್ರಾಂ ಗಾಂಜಾ ಹಾಗೂ ಗಾಂಜಾ ಮಾರಾಟಕ್ಕೆ ಬಳಸುತ್ತಿದ್ದ ಒಂದು ಇನೊವಾ ಕಾರು ಸೇರಿ ₹ 10.26 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಚನ್ನಗಿರಿ ತಾಲ್ಲೂಕಿನ ಶಫೀರ್ ಖಾನ್‌, ಜಬೀವುಲ್ಲಾ, ಫತ್ಹಾಖಾನ್‌, ಶಿವಮೊಗ್ಗ ಜಿಲ್ಲೆ ಆಯನೂರಿನ ತೌಸಿಫ್‌ ಖಾನ್‌, ದಾವಣಗೆರೆ ತಿಮ್ಮಪ್ಪನ ಕ್ಯಾಂಪ್‌ನ ಚಂದ್ರಶೇಖರ್‌ ಬಂಧಿತರು. ಗಾಂಜಾ ಅಕ್ರಮ ಮಾರಾಟಕ್ಕೆ ಆಂಧ್ರಪ್ರದೇಶದ ಸಂಪರ್ಕ ಇರುವುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ‘ಆರೋಪಿಗಳಲ್ಲಿ ಒಬ್ಬನ ಸಂಬಂಧಿ ಆಂಧ್ರದ ವಿಜಯವಾಡ ಜಿಲ್ಲೆಯ ರಾಜಮಂಡ್ರಿ ತಾಲ್ಲೂಕಿನವರು. ಅಲ್ಲಿಂದ ಗಾಂಜಾ ತಂದು ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಾರುತ್ತಿದ್ದರು.ಇತರೆ ಜಿಲ್ಲೆಗಳಿಗೂ ಗಾಂಜಾ ಪೂರೈಸುತ್ತಿದ್ದನ್ನು ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ. ಸೇವನೆಗೆ ಯೋಗ್ಯವಾದ ಸಂಸ್ಕರಿತ ಗಾಂಜಾವನ್ನು ವಿದ್ಯಾರ್ಥಿಗಳು ಸೇರಿದಂತೆ ಇತರರಿಗೆ ಮಾರಾಟ ಮಾಡುತ್ತಿದ್ದರು. ಹೆಚ್ಚಿನ ತನಿಖೆಗೆ ತಂಡ ರಚಿಸಲಾಗಿದೆ’ ಎಂದು ತಿಳಿಸಿದರು.

ಬೆಂಗಳೂರು ತೊರೆದ ಫೈಜಲ್‌?

ನಟಿ ಸಂಜನಾ ಬಂಧನವಾಗುತ್ತಿದ್ದಂತೆ, ಅವರ ಆಪ್ತ ಎನ್ನಲಾದ ಉದ್ಯಮಿ ಫೈಜಲ್ ನಾಪತ್ತೆಯಾಗಿದ್ದಾನೆ. ಆತನ ಮನೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, ಹುಡುಕಾಟ ನಡೆಸುತ್ತಿದ್ದಾರೆ.

‘ಫೈಜಲ್, ಶ್ರೀಲಂಕಾ ಸೇರಿದಂತೆ ಹಲವೆಡೆ ಕ್ಯಾಸಿನೊ ನಡೆಸುತ್ತಿದ್ದಾನೆ. ಸದ್ಯ ಆತ ಬೆಂಗಳೂರು ತೊರೆದು ಶ್ರೀಲಂಕಾಗೆ ಹೋಗಿ ತಲೆಮರೆಸಿಕೊಂಡಿರುವ ಮಾಹಿತಿ ಇದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ. 

ಪರೀಕ್ಷೆಗೆ ಆಕ್ಷೇಪಿಸಿದ್ದ ಸಂಜನಾ

‘ಪರೀಕ್ಷೆಗೆ ಒಳಪಡಬೇಕೋ ಬೇಡವೋ ಎಂಬುದು ನನ್ನ ಹಕ್ಕು. ಡ್ರಗ್ಸ್ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಅಷ್ಟಾದರೂ ಬಂಧಿಸಿದ್ದೀರಾ. ಈಗ ನನ್ನ ಅನುಮತಿ ಇಲ್ಲದೇ ಪರೀಕ್ಷೆಗೂ ಒಳಪಡಿಸುತ್ತಿದ್ದಾರೆ’ ಎಂದು ಸಂಜನಾ, ಸಿಸಿಬಿ ಪೊಲೀಸರನ್ನು ಪ್ರಶ್ನಿಸಿದರು.

ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದಾಗ ಸಂಜನಾ, ಪರೀಕ್ಷಾ ಕೊಠಡಿಗೆ ಹೋಗಲು ಹಿಂದೇಟು ಹಾಕಿದರು. ತಮ್ಮ ವಕೀಲರನ್ನು ಸ್ಥಳಕ್ಕೆ ಕರೆಯಿಸುವಂತೆ ಪಟ್ಟು ಹಿಡಿದರು. ಸ್ಥಳಕ್ಕೆ ಬಂದ ವಕೀಲರಿಗೆ ಪೊಲೀಸರು ನ್ಯಾಯಾಲಯದ ಆದೇಶ ಪ್ರತಿ ತೋರಿಸಿದರು. ಬಳಿಕವೇ ಸಂಜನಾ, ಪರೀಕ್ಷೆ ಮಾಡಿಸಿಕೊಂಡರು.‌

ಡ್ರಗ್ಸ್‌ ಮಾಫಿಯಾದಲ್ಲಿ ರಾಜಕಾರಣಿ ಮಕ್ಕಳಿದ್ದರೂ ತನಿಖೆ

ದಾವಣಗೆರೆ: ‘ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿಗಳ ಮಕ್ಕಳ ಹೆಸರು ಕೇಳಿಬರುತ್ತಿರುವುದು ಎಲ್ಲರಿಗೂ ಗೊತ್ತಿದೆ. ಈ ವಿಚಾರದಲ್ಲಿ ತನಿಖೆ ನಡೆಸಲು ಪೊಲೀಸರಿಗೆ ನಮ್ಮ ಸರ್ಕಾರ ನೀಡಿರುವಷ್ಟು ಸ್ವಾತಂತ್ರ್ಯವನ್ನು ಈ ಹಿಂದಿನ ಯಾವ ಸರ್ಕಾರಗಳೂ ನೀಡಿರಲಿಲ್ಲ’ ಎಂದು ಪೌರಾಡಳಿತ ಸಚಿವ ನಾರಾಯಣ ಗೌಡ ಹೇಳಿದರು.

‘ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕಲು ಕೇಂದ್ರ ಮತ್ತು ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿವೆ. ಈ ಮಾಫಿಯಾದಲ್ಲಿ ರಾಜಕಾರಣಿ ಸಹಿತ ಯಾರೇ ಇದ್ದರೂ ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಡ್ರಗ್ಸ್: ದೇಶದ್ರೋಹ ಪ್ರಕರಣ ದಾಖಲಿಸಿ

ಚಿತ್ರದುರ್ಗ: ‘ಡ್ರಗ್ಸ್‌ ಮಾಫಿಯಾದಲ್ಲಿ ತೊಡಗಿರುವ ದುಷ್ಕರ್ಮಿಗಳು ಯಾರೇ ಆಗಿದ್ದರೂ ದೇಶದ್ರೋಹಿಗಳೇ ಹೌದು. ಅಂಥವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಒತ್ತಾಯಿಸಿದರು.

ಡ್ರಗ್ಸ್ ವಿರುದ್ಧ ಎಬಿವಿಪಿ ಆಯೋಜಿಸಿದ್ದ ಸಹಿ ಸಂಗ್ರಹ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿದ ಅವರು, ‘ಡ್ರಗ್ಸ್ ದಂಧೆ, ಗಡಿಗಳನ್ನು ಮೀರಿ ವಿಶ್ವವನ್ನೇ ವ್ಯಾಪಿಸಿದೆ. ದೇಶ ಮತ್ತು ರಾಜ್ಯದೊಳಗೆ ಒಳಸಂಚಿನಿಂದ ನುಸುಳಿರುವುದನ್ನು ಗಮನಿಸಿದರೆ ದೊಡ್ಡ ಜಾಲವೇ ಇದ್ದು, ತಪ್ಪಿತಸ್ಥರನ್ನು ಕಾರ್ಯಾಂಗ ಮತ್ತು ನ್ಯಾಯಾಂಗವು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಆಗ್ರಹಿಸಿದರು.

‘ಯುವಸಮೂಹವನ್ನು ಮಾದಕ ವ್ಯಸನಿಗಳನ್ನಾಗಿ ಮಾಡಿ, ಅವರನ್ನು ಪ್ರಚೋದಿಸಿ, ದೇಶದ್ರೋಹದ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಇಂತಹ ದಂಧೆಯಲ್ಲಿರುವ ಸಂಘಟನೆ–ಗುಂಪಿನವರು ಎಷ್ಟೇ ಪ್ರಭಾವಿಗಳಾದರೂ ಅವರಿಗೆ ಸರ್ಕಾರ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು