ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಹೋರಾಟಕ್ಕೆ ಕಾಂಗ್ರೆಸ್‌, ಬಿಜೆಪಿಯಿಂದ ಸಿಗದ ಬೆಂಬಲ: ದೇವೇಗೌಡ ಬೇಸರ

ಕೆಆರ್‌ಎಸ್‌ನಲ್ಲಿ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಜನತಾ ಜಲಧಾರೆ ಯಾತ್ರೆಗೆ ಚಾಲನೆ
Last Updated 16 ಏಪ್ರಿಲ್ 2022, 13:55 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ (ಮಂಡ್ಯ): ‘ಕುಡಿಯುವ ನೀರಿಗಾಗಿ ಸಂಸತ್‌ನಲ್ಲಿ ನನ್ನದು ಏಕಾಂಗಿ ಹೋರಾಟವಾಗಿತ್ತು. ನನ್ನ ಜೊತೆ ಸಂಸತ್‌ಗೆ ಆಯ್ಕೆಯಾಗಿ ಬಂದಿದ್ದ ನಮ್ಮ ರಾಜ್ಯದ ಕಾಂಗ್ರೆಸ್‌, ಬಿಜೆಪಿ ಸದಸ್ಯರಾರೂ ನನ್ನ ಹೋರಾಟಕ್ಕೆ ಬೆಂಬಲ ನೀಡಲಿಲ್ಲ, ಆ ನೋವು ನನನ್ನು ಈಗಲೂ ಕಾಡುತ್ತಿದೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು.

ಕೆಆರ್‌ಎಸ್‌ನಲ್ಲಿ ಶನಿವಾರ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಜನತಾ ಜಲಧಾರೆ ಯಾತ್ರೆಗೆ ಚಾಲನೆ ನೀಡಿ ನಂತರ ಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

‘ಬಿಜೆಪಿ ಸರ್ಕಾರವಿದ್ದಾಗ ಕುಡಿಯುವ ನೀರಿನ ವಿಚಾರದಲ್ಲಿ ನನ್ನ ಹೋರಾಟಕ್ಕೆ ಕೈಜೋಡಿಸುವಂತೆ ಅನಂತಕುಮಾರ್‌ ಅವರನ್ನು ಕೇಳಿಕೊಂಡಿದ್ದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ, ಎಸ್‌.ಎಂ.ಕೃಷ್ಣ, ಕೆ.ಎಚ್‌.ಮುನಿಯಪ್ಪ, ವೀರಪ್ಪ ಮೊಯಿಲಿ ಸಚಿವರಾಗಿದ್ದರು. ಅವರು ಕೂಡ ನನ್ನ ಹೋರಾಟಕ್ಕೆ ಬೆಂಬಲ ಕೊಡಲಿಲ್ಲ. ಆದರೂ ಸಂಸತ್ತಿನಲ್ಲಿ ನಾನೊಬ್ಬನೇ ತಮಿಳುನಾಡಿನ 47 ಸಂಸದರ ಸದ್ದಡಗಿಸಿದೆ’ ಎಂದರು.

‘ಅಂತರರಾಜ್ಯ ನೀರಿನ ಪ್ರಕರಣಕ್ಕೆ ನ್ಯಾಯಾಧೀಕರಣ ರಚನೆ ಮಾಡಿದ ಮೇಲೆ ಎಲ್ಲೂ ಮಧ್ಯಂತರ ತೀರ್ಪು ಕೊಟ್ಟ ಉದಾಹರಣೆಗಳಿಲ್ಲ. ಆದರೆ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಒತ್ತಡಕ್ಕೆ ಮಣಿದು ಮಧ್ಯಂತರ ತೀರ್ಪು ಕೊಡಿಸಲಾಯಿತು. ಅದು ನಮ್ಮ ರಾಜ್ಯಕ್ಕೆ ದೊಡ್ಡ ಅನ್ಯಾಯವಾಯಿತು. ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್‌, ನೀರಾವರಿ ಸಚಿವ ಶರ್ಮಾ ಕೂಡ ನಮ್ಮ ನೆರವಿಗೆ ಬರಲಿಲ್ಲ. ಆದರೂ ನಾನು ಏಕಾಂಗಿಯಾಗಿ ಹೋರಾಟ ನಡೆಸಿದೆ. ಆ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯನ್ನೂ ಹಾಕಿಸಿದ್ದೆ’ ಎಂದರು.

‘ಮೇಕೆದಾಟು ಯೋಜನೆ ಇಂದು ನೆನ್ನೆಯದಲ್ಲ, ನಾನು ಪ್ರಧಾನಿಯಾಗಿದ್ದಾಗಲೇ ₹ 650 ಕೋಟಿಯ ಅಂದಾಜು ಪಟ್ಟಿ ಸಿದ್ಧಪಡಿಸಿದ್ದೆ. ಆದರೆ ಕರುಣಾನಿಧಿ ಆ ಯೋಜನೆಯನ್ನು ಮಂಡಿಸಲು ಅವಕಾಶ ಕೊಡಲಿಲ್ಲ. ನಮಗೆ ಮಿತ್ರಪಕ್ಷವಾಗಿದ್ದ ಕಾರಣ ಅನಿವಾರ್ಯವಾಗಿ ಕೈಬಿಡಬೇಕಾಯಿತು. ಈಗ ಆ ಯೋಜನಾ ವೆಚ್ಚ ₹ 2 ಸಾವಿರ ಕೋಟಿಗೆ ಹೆಚ್ಚಾಗಿದೆ’ ಎಂದರು.

‘ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮೇಕೆದಾಟು ಯೋಜನೆಗೆ ಡಿಪಿಆರ್‌ ಆಗಿದೆ. ಕಾಂಗ್ರೆಸ್‌ ಮುಖಂಡರು ಯೋಜನೆಗಾಗಿ ಪಾದಯಾತ್ರೆ ನಾಟಕ ಮಾಡಿದ್ದಾರೆ. ಜನತಾ ಜಲಧಾರೆ ಯಾತ್ರೆ ಕೇವಲ ಕಾವೇರಿಗಾಗಿ ಮಾತ್ರವಲ್ಲ, ಕೃಷ್ಣ, ಮಹದಾಯಿ ಯೋಜನೆಗಳ ಜಾರಿಗಾಗಿ ಆಯೋಜನೆ ಮಾಡಲಾಗಿದೆ. ಇದು ಚುನಾವಣೆ ದೃಷ್ಟಿಯಿಂದ ಮಾಡುತ್ತಿಲ್ಲ’ ಎಂದರು.

‘ಮುಂದಿನ ತಿಂಗಳು ನನಗೆ 90 ವರ್ಷ ವಯಸ್ಸಾಗುತ್ತಿದೆ. ಈ ಶರೀರ ಇರುವವರೆಗೂ ನನ್ನ ರಾಜ್ಯದ ಜನರ ಹಕ್ಕಿಗಾಗಿ ಹೋರಾಟ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT