ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡದಲ್ಲಿ ಮುಸ್ಲಿಂ ಅಂಗಡಿಗಳ ಮೇಲೆ ದಾಳಿ: ಕಿರಾತಕ ಕೃತ್ಯ ಎಂದ ಎಚ್‌ಡಿಕೆ 

Last Updated 10 ಏಪ್ರಿಲ್ 2022, 1:36 IST
ಅಕ್ಷರ ಗಾತ್ರ

ಬೆಂಗಳೂರು: ಧಾರವಾಡ ಜಿಲ್ಲೆಯ ಅಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಕಿಡಿಗೇಡಿಗಳು ಮುಸ್ಲಿಮರ ಅಂಗಡಿಗಳ ಮೇಲೆ ದಾಳಿ ನಡೆಸಿ, ಅಪಾರ ಪ್ರಮಾಣದ ಕಲ್ಲಂಗಡಿಯನ್ನು ರಸ್ತೆಗೆಸೆದು ಹಾಳು ಮಾಡಿದ ಘಟನೆಯನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಅವರು ಖಂಡಿಸಿದ್ದಾರೆ. ಇದು ಪರಮ ಹೇಯ, ಕಿರಾತಕ ಕೃತ್ಯ ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹಂಚಿಕೊಂಡಿರುವ ಎಚ್‌ಡಿಕೆ, 'ರಾಮಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಉಗ್ರರಿಗಿಂತ ಕೀಳಾಗಿ ವರ್ತಿಸಿದ್ದಾರೆ. ಇವರ ವಿರುದ್ಧ ಉಗ್ರ ಕ್ರಮ ಜರುಗಿಸಬೇಕು' ಎಂದು ಒತ್ತಾಯ ಮಾಡಿದ್ದಾರೆ.

'ಧಾರವಾಡದ ನುಗ್ಗೆಕೇರಿ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ರಾಮಭಕ್ತರ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮುಸ್ಲಿಮರ ಅಂಗಡಿಗಳನ್ನು ನಾಶಪಡಿಸಿ, ಅವರು ಮಾರಾಟಕ್ಕೆ ಇಟ್ಟಿದ್ದ ಕಲ್ಲಂಗಡಿ ಹಣ್ಣುಗಳನ್ನು ಹಾಳು ಮಾಡಿರುವುದು ಹೇಯಮತ್ತು ಪರಮ ಕಿರಾತಕ ಕೃತ್ಯ' ಎಂದು ಹೇಳಿದ್ದಾರೆ.

'ಕಾಶ್ಮೀರದಲ್ಲಿ ರಕ್ತದೋಕುಳಿ ಹರಿಸುವ ಭಯಾತ್ಪಾದಕರಿಗೂ, ಶಾಂತಿ-ಸೌಹಾರ್ದತೆಗೆ ಕಿಚ್ಚಿಡುತ್ತಿರುವ ಈ ಕಿರಾತಕರಿಗೂ ವ್ಯತ್ಯಾಸವೇ ಇಲ್ಲ. ತಿನ್ನುವ ಅನ್ನಕ್ಕೆ ಮಣ್ಣುಹಾಕಿ ಬದುಕಿಗೆ ಬೆಂಕಿ ಇಡುವ ಇಂಥ ಪ್ರವೃತ್ತಿ ಅನಾಗರಿಕ-ಅಸಹ್ಯ. ಕರ್ನಾಟಕವನ್ನು ಈ ದುಷ್ಟರು, ಶಿಲಾಯುಗದತ್ತ ಕೊಂಡೊಯ್ಯುತ್ತಿದ್ಧಾರೆಎನ್ನುವುದರಲ್ಲಿ ಅನುಮಾನವೇ ಇಲ್ಲ' ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

'ಈ ರಕ್ಕಸರು ಕಲ್ಲಂಗಡಿಯನ್ನು ರಸ್ತೆಗೆಸೆದು ನಾಶ ಮಾಡಿದ ಪರಿಯನ್ನು ಗಮಿನಿಸಿದರೆ ಸಾಕು; ಇವರ ರಾಕ್ಷಸ ಪ್ರವೃತ್ತಿ ಉಗ್ರರಿಗಿಂತ ಕಮ್ಮಿಯೇನಲ್ಲ. ಅನ್ನವನ್ನೇ ಹಾಳುಗೆಡವಿದ ಈ ನೀಚರಿಗೆ ತಕ್ಕ ಪಾಠ ಕಲಿಸಲೇಬೇಕು. ಇವರ ವಿರುದ್ಧಸರ್ಕಾರ ಕೂಡಲೇ ಭಯೋತ್ಪಾದನೆ ವಿರೋಧಿ ಕಾಯ್ದೆ ಅಡಿ ಕೇಸು ದಾಖಲಿಸಬೇಕು' ಎಂದು ಆಗ್ರಹಿಸಿದ್ದಾರೆ.

'ಸರ್ವ ಜನಾಂಗದ ತೋಟಕ್ಕೆ ಸಮಾಧಿ ಕಟ್ಟುವ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತಿದೆಯೇ ಎಂಬ ಸಂಶಯ ನನ್ನದು. ʼಮೌನಂ ಸಮ್ಮತಿ ಲಕ್ಷಣಂʼ ಎನ್ನುವಂತೆ ಸಿಎಂ ಬಸವರಾಜ ಬೊಮ್ಮಾಯಿ, ಬಾಯಿಗೆ ಬೀಗ ಹಾಕಿಕೊಂಡು; ʼಸತ್ತ ಸರಕಾರಕ್ಕೆ ನಾನೇ ಸಾಹುಕಾರʼ ಎನ್ನುವಂತೆ ಬೆಂಕಿ ನಡುವೆ ಪಿಟೀಲು ಬಾರಿಸುತ್ತಿದ್ದ ನೀರೋ ದೊರೆಯನ್ನು ಮೀರಿಸುತ್ತಿದ್ದಾರೆ' ಎಂದು ವ್ಯಂಗ್ಯವಾಡಿದ್ದಾರೆ.

'ಅನ್ನಕ್ಕೆ ಮಣ್ಣು ಹಾಕುವುದು ಯಾವ ಧರ್ಮ? ಬದುಕಿಗೆ ಬೆಂಕಿ ಇಡುವುದು ಯಾವ ಧರ್ಮ? ಮನುಷ್ಯತ್ವಕ್ಕೆ ಸಮಾಧಿ ಕಟ್ಟುವುದು ಯಾವ ಧರ್ಮ? ಮಾನವೀಯತೆಯ ಸಾಕಾರಮೂರ್ತಿ ಶ್ರೀರಾಮಚಂದ್ರನಿಂದ ಇವರು ಕಲಿತದ್ದು ಯಾವ ಧರ್ಮ? ಸೇವೆಯನ್ನೇ ಧರ್ಮವೆಂದು ನಂಬಿದ ಶ್ರೀ ಆಂಜನೇಯನಿಂದ ಇವರು ಕಲಿತ ಆದರ್ಶ ಧರ್ಮ ಇದೇನಾ?' ಎಂದು ಅವರು ಪ್ರಶ್ನೆ ಮಾಡಿದ್ದಾರೆ.

'ನನ್ನ ಪ್ರಕಾರ ಇವರು ಹಿಂದೂಗಳೇ ಅಲ್ಲ, ಮನಷ್ಯರೂ ಅಲ್ಲ. ಧರ್ಮಾಂದತೆಯ ಮತ್ತಿನಲ್ಲಿ ತೇಲುತ್ತಿರುವ ಕ್ರೂರ ಮೃಗಗಳು. ಅಂಗಡಿಗಳನ್ನು ನಾಶಪಡಿಸಿ, ಕಲ್ಲಂಗಡಿಯನ್ನು ಹಾಳುಗೆಡವಿದ ಎಲ್ಲ ಕಿರಾತಕರ ವಿರುದ್ಧ ಸರಕಾರ ಕೂಡಲೇ ಕ್ರಿಮಿನಲ್ ಕೇಸು ದಾಖಲಿಸಬೇಕು, ರಾಜ್ಯದಿಂದಲೇ ಗಡೀಪಾರು ಮಾಡಬೇಕು. ಇದು ನನ್ನ ಆಗ್ರಹ' ಎಂದು ಕುಮಾರಸ್ವಾಮಿ ಟ್ವೀಟ್‌ನಲ್ಲಿ ಬರೆದಿದ್ದಾರೆ.

'ದುಷ್ಕರ್ಮಿಗಳು ನಡೆಸಿದ ಈ ಪೈಶಾಚಿಕ ಕೃತ್ಯದ ಬಗ್ಗೆ ಕಲ್ಲಂಗಡಿ ಕಳೆದುಕೊಂಡ ನಬಿಸಾಬಿ ಹಾಗೂ ದೇಗುಲದ ಮುಖ್ಯಸ್ಥರು ನೀಡಿರುವ ಈ ಹೇಳಿಕೆಗಳನ್ನುಸರ್ಕಾರ ಗಂಭಿರವಾಗಿ ಪರಿಗಣಿಸಬೇಕು'ಎಂದು ಅವರುಸರ್ಕಾರವನ್ನುಒತ್ತಾಯ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT