ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಉಪನ್ಯಾಸಕರನ್ನು ಮನೆಗೆ ಅಟ್ಟುವುದು ಯಾವ ಸೀಮೆಯ ಆಡಳಿತ: ಎಚ್‌ಡಿಕೆ ಪ್ರಶ್ನೆ

Last Updated 3 ಫೆಬ್ರುವರಿ 2022, 17:24 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಕ್ಕೆ ಒಳ್ಳೆಯದು ಮಾಡಿ ಎಂದು ಅಲವತ್ತುಕೊಂಡರೆ, ಏಕಾಏಕಿ ಅರ್ಧಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನು ಮನೆಗೆ ಅಟ್ಟುವುದು ಯಾವ ಸೀಮೆಯ ಆಡಳಿತ? ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಅತಿಥಿ ಉಪನ್ಯಾಸಕರ ನೇಮಕಾತಿ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ‘ಸರ್ಕಾರಕ್ಕೆ 6 ತಿಂಗಳು ತುಂಬಿದ ಮೇಲೆ ಸಾಧನೆಗಳ ಪುಸ್ತಕವೂ ಹೊರಬಂತು, ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಅದ್ಧೂರಿ ಕಾರ್ಯಕ್ರಮವೂ ನಡೆಯಿತು. ಬಣ್ಣಬಣ್ಣದ ಜಾಹೀರಾತುಗಳ ಮೂಲಕ ಮಾಡದ ಕೆಲಸಗಳ ಬಗ್ಗೆ ಕೊಚ್ಚಿಕೊಂಡಿದ್ದೂ ಆಯಿತು. ಸ್ವ-ಗುಣಗಾನ ಇನ್ನೂ ನಿಂತಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಭಾರತವು ವಿಶ್ವಗುರು ಆಗಬೇಕು ಎನ್ನುತ್ತೀರಿ, ರಾಷ್ಟ್ರೀಯ ಶಿಕ್ಷಣದ ಮೂಲಕ ದೇಶವನ್ನು ಜ್ಞಾನಕಾಶಿ ಮಾಡುತ್ತೇವೆ ಎಂದು ಹೇಳುತ್ತೀರಿ. ಕರ್ನಾಟಕವು ಭಾರತದ ಶೈಕ್ಷಣಿಕ ರಾಜಧಾನಿ ಆಗಬೇಕು ಎನ್ನುತ್ತೀರಿ. 9,881 ಅತಿಥಿ ಉಪನ್ಯಾಸಕರನ್ನು ಕಿತ್ತೊಗೆಯುವ ಮೂಲಕ ಇದನ್ನು ಸಾಧನೆ ಮಾಡಲಾಗುತ್ತದೆಯೇ?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ದೇಶ ಕಟ್ಟುವುದರಲ್ಲಿ ಶಿಕ್ಷಣವೇ ನಿರ್ಣಾಯಕ. ಆ ಶಿಕ್ಷಣ ವ್ಯವಸ್ಥೆಗೆ ಗುರುವೇ ನಾಯಕ. ಆದರೆ ಇಂದು ಕಲಿಸುವ ಗುರುವು ದಿಕ್ಕಿಲ್ಲದೆ ಬೀದಿಯಲ್ಲಿ ನಿಂತಿದ್ದಾನೆ. ಸರಕಾರ ಹೇಳುವುದು ಒಂದು, ಮಾಡುವುದು ಇನ್ನೊಂದು’ ಎಂದು ಗುಡುಗಿದ್ದಾರೆ.

‘ಸರ್ಕಾರಿ ಉನ್ನತ ಶಿಕ್ಷಣ ವ್ಯವಸ್ಥೆಯ ಕತ್ತು ಹಿಸುಕಿ, ವ್ಯವಸ್ಥಿತವಾಗಿ ಖಾಸಗಿ ವಲಯವನ್ನು ಬಲಪಡಿಸುವ, ಮಕ್ಕಳು-ಪೋಷಕರನ್ನು ಖಾಸಗಿಯವರ ಗುಲಾಮರನ್ನಾಗಿಸುವ ಹುನ್ನಾರ ಇದರ ಹಿಂದೆ ಇದೆಯಾ? ಎನ್ನುವ ಅನುಮಾನ ಬರುತ್ತಿದೆ’ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

‘ಅತಿಥಿ ಉಪನ್ಯಾಸಕರ ಆಯ್ಕೆಯಲ್ಲಿ ಶೈಕ್ಷಣಿಕ ಅರ್ಹತೆ, ಹಿರಿತನ ಆಧರಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಹಾಗಾದರೆ, ಇವೆರಡೂ ಅರ್ಹತೆಗಳು ಇಲ್ಲದಿದ್ದವರನ್ನು ಇಷ್ಟು ದಿನ ಅತ್ಯಂತ ಕನಿಷ್ಠ ಸಂಬಳಕ್ಕೆ ದುಡಿಸಿಕೊಂಡಿದ್ದು ಯಾಕೆ? ಅದಕ್ಕೆ ಕಾನೂನಿನಲ್ಲಿ ಅವಕಾಶ ಇತ್ತಾ?’ ಎಂದು ಪ್ರಶ್ನಿಸಿದ್ದಾರೆ.

‘ಆರು ತಿಂಗಳಲ್ಲಿ ಅಭಿವೃದ್ಧಿ ಹರಿಕಾರರಾಗುವುದು ಎಂದರೆ ಇದೇನಾ? ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಎಂದರೆ ನಿರುದ್ಯೋಗ ಸೃಷ್ಟಿಯಾ? ಸರ್ಕಾರ ಇರುವುದು ಸಬೂಬು ಹೇಳುವುದಕ್ಕಲ್ಲ, ಕಾರಣ ಹೇಳಿ ಪಲಾಯನ ಮಾಡುವುದಕ್ಕಲ್ಲ. ನ್ಯಾಯ ಕೊಡುವ ಬಗ್ಗೆ ಕ್ರಮ ವಹಿಸಬೇಕು. ಕೂಡಲೇ ಮುಖ್ಯಮಂತ್ರಿ ಬಸವರಾಜ ಅವರು ಈ ಬಿಕ್ಕಟ್ಟನ್ನು ಬಗೆಹರಿಸಬೇಕು’ ಮನವಿ ಮಾಡಿದ್ದಾರೆ.

‘ಅತಿಥಿ ಉಪನ್ಯಾಸಕರ ನೇಮಕ: ಹಿರಿತನ, ಅರ್ಹತೆಗೆ ಆದ್ಯತೆ’

‘ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸುಮಾರು 14 ಸಾವಿರ ಮಂದಿ ಕಾರ್ಯನಿರ್ವಹಿಸುತ್ತಿದ್ದು, 2021-22ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಈ ಪೈಕಿ 10,600 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ವಾಸ್ತವ ಹೀಗಿರುವಾಗ, 9,881 ಮಂದಿ ಕೆಲಸ ಕಳೆದುಕೊಳ್ಳುವ ಪ್ರಶ್ನೆ ಎಲ್ಲಿ ಉದ್ಭವವಾಗುತ್ತದೆ?’ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್ ಪ್ರಶ್ನಿಸಿದ್ದಾರೆ.

‘ಪ್ರಜಾವಾಣಿ’ಯ ಪ್ರಕಟವಾದ ವರದಿಗೆ ಪ್ರತಿಕ್ರಿಯಿಸಿರುವ ಅವರು, ‘ಸೇವಾಹಿರಿತನ, ವಯಸ್ಸು ಮತ್ತು ಯುಜಿಸಿ ನಿಗದಿತ ಅರ್ಹತೆ ಈ ಮೂರನ್ನು ಪರಿಗಣಿಸಿ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುತ್ತಿದೆ. ಜತೆಗೆ ನಿಯಮಾನುಸಾರ ಅರ್ಹರ ಪಟ್ಟಿ ಸಿದ್ಧಪಡಿಸಲಾಗಿದೆ. ಹೀಗಾಗಿ 14 ಸಾವಿರ ಮಂದಿಯ ಪೈಕಿ ಕೇವಲ 3,400 ಮಂದಿ ಮಾತ್ರ ಆಯ್ಕೆ ಆಗುತ್ತಿಲ್ಲ. ಆದರೆ, ಅವರಲ್ಲಿ ಕೂಡ ಹೆಚ್ಚಿನವರು ಅತ್ಯಂತ ಕಡಿಮೆ ಅನುಭವ ಹೊಂದಿದವರಾಗಿದ್ದಾರೆ’ ಎಂದು ವಿವರಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT