ಶುಕ್ರವಾರ, ಅಕ್ಟೋಬರ್ 22, 2021
20 °C

ರಸ್ತೆ ಗುಂಡಿ ಮುಚ್ಚಲು ಇಟ್ಟಿದ್ದ 20 ಸಾವಿರ ಕೋಟಿ ಎಲ್ಲಿ ಹೋಯಿತು?: ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಜನ ಸಾಯುತ್ತಿದ್ದಾರೆ. ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು 20 ಸಾವಿರ ಕೋಟಿ ಹಣ ಖರ್ಚು ಮಾಡಿದ್ದೇವೆ ಎಂದು ಸದನದಲ್ಲಿ ಮುಖ್ಯಮಂತ್ರಿ ಹೇಳಿದ್ದರು. ಆ ಹಣ ಎಲ್ಲಿ ಹೋಯಿತು? ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಬಿಡದಿಯಲ್ಲಿ ಸೋಮವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ಒಂದೇ ಮಳೆ ನಗರದಲ್ಲಿ ದೊಡ್ಡ ಅನಾಹುತ ಉಂಟು ಮಾಡಿದೆ. ರಸ್ತೆಗಳ ಮೇಲೆ ನೀರು ನದಿಯಂತೆ ಹರಿದಿದೆ. ನಿರ್ವಹಣೆ ಕಳಪೆಯಾಗಿದೆ. ಹಾಗಾದ್ರೆ ರಸ್ತೆಗಳಿಗೆ ತೆಗೆದಿಟ್ಟ ಹಣ ಎಲ್ಲಿ ಹೋಯಿತು? ಅಷ್ಟು ಹಣವನ್ನು ಯಾವುದಕ್ಕೆ ಬಳಕೆ ಮಾಡಿಕೊಂಡರು. ಅಷ್ಟು ಹಣ ವೆಚ್ಚ ಆಗಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದಿದೆ. ಅದಕ್ಕೆ ಮುಖ್ಯಮಂತ್ರಿ ಪ್ರತಿಕ್ರಿಯೆ ಕೊಟ್ಟಿದ್ದರು. ಇದಕ್ಕೆ ಜನರಿಗೆ ಉತ್ತರ ಬೇಕಿದೆ ಎಂದು ಅವರು ಕೇಳಿದರು.

ಭಾನುವಾರವಷ್ಟೇ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ನೂರಾರು ಕೋಟಿ ವೆಚ್ಚದ ಯೋಜನೆಗಳಿಗೆ ಮುಖ್ಯಮಂತ್ರಿ, ಸಚಿವರು ಚಾಲನೆ ನೀಡಿದ್ದರು. ಆದರೆ ಸಂಜೆ ಮಳೆ ಬಂದು ಆ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯನ್ನು ಬೆತ್ತಲು ಮಾಡಿತು. ಮನೆಗಳಿಗೆ ನೀರು ನುಗ್ಗಿ ಜನ ಇಡೀ ರಾತ್ರಿ ಜಾಗರಣೆ ಮಾಡಿದರು. ಮಳೆ ನೀರಿನಲ್ಲಿ ಹಸು, ಕುರಿಗಳು ಕೊಚ್ಚಿಕೊಂಡು ಹೋಗಿವೆ. ಇವರು ಯಾವ ರೀತಿಯ ಅಭಿವೃದ್ಧಿಯನ್ನು ಮಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ತನಿಖೆಗೆ ಒತ್ತಾಯ: ರಾಜರಾಜೇಶ್ವರಿ ನಗರ ಕ್ಷೇತ್ರ ಪ್ರಗತಿಗೆ ಹಲವಾರು ವರ್ಷಗಳಿಂದ ಕೋಟ್ಯಂತರ ರೂಪಾಯಿ ಹಣ ಹರಿದು ಬಂದಿದೆ. ಈ ಹಣ ಎಲ್ಲಿ ಹೋಯಿತು? ನಿರಂತರವಾಗಿ ಈ ಕ್ಷೇತ್ರಕ್ಕೆ ಹರಿದ ಹಣದ ಹೊಳೆ ಎತ್ತ ಹರಿಯಿತು? ಈ ಹಣವೂ ಸೇರಿ ಗುಂಡಿಗಳಿಗೆ ಖರ್ಚಾಗಿದೆ ಎಂದು ಸಿ.ಎಂ ಹೇಳಿದ್ದ 20 ಸಾವಿರ ಕೋಟಿ ಹಣ ಏನಾಯಿತು ಎಂಬ  ಬಗ್ಗೆ ತನಿಖೆ ಆಗಲಿ ಎಂದು ಒತ್ತಾಯ ಮಾಡಿದರು.

ನಾನು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು ಉಸ್ತುವಾರಿ ಕಾಂಗ್ರೆಸ್ ಕೈಲಿ ಇತ್ತು. ನಾನು ನಗರದ ಬಗ್ಗೆ ಒಂದು ಸಭೆ ಮಾಡಬೇಕಾದರೂ ಕಾಂಗ್ರೆಸ್ ನಾಯಕರ ಅಪ್ಪಣೆ ಬೇಕಾಗಿತ್ತು. ಆದರೆ ಅವರು ಒಪ್ಪುತ್ತಿರಲಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಷ್ಟು ದಿನ ಬೆಂಗಳೂರು ಪ್ರಗತಿ ಪರಿಶೀಲನೆ ಸಭೆ ಮಾಡುವ ಹಾಗಿರಲಿಲ್ಲ. ಇದು ಸತ್ಯ ಸಂಗತಿ ಎಂದು ವಿವರಿಸಿದರು.

ಪ್ರಚಾರ ಪ್ರಿಯ ಸರ್ಕಾರ: ರಾಜ್ಯ ಸರ್ಕಾರ ಪ್ರಚಾರದಲ್ಲಿ ಮುಳುಗಿದೆ. ಜಾಹೀರಾತುಗಳ ಮೂಲಕ ಸ್ವ ಪ್ರಶಂಸೆಯಲ್ಲಿ ಮುಳುಗಿದೆ. ಮೋದಿ, ಬೊಮ್ಮಾಯಿ ಇಬ್ಬರೂ ನವ ಭಾರತಕ್ಕಾಗಿ ನವ ಕರ್ನಾಟಕವೆಂದು ಪ್ರಚಾರ ಪಡೆಯುತ್ತಿದ್ದಾರೆ. ಬೊಮ್ಮಾಯಿ ಅವರು ಮೋದಿ ಅವರಂತೆ ಡ್ರೆಸ್ ಮಾಡಿಕೊಂಡು ಫೋಟೋ ಶೂಟ್ ಮಾಡಿಸಿಕೊಂಡು ಬಸ್ ನಿಲ್ದಾಣಗಳ ಮೇಲೆ ಜಾಹೀರಾತುಗಳಲ್ಲಿ ಪೋಸು ಕೊಡುತ್ತಿದ್ದಾರೆ. ಇವರು ಏನು ಮಾಡಲು ಹೊರಟಿದ್ದಾರೆ? ನವ ಕರ್ನಾಟಕ ಏನು ಅನ್ನೋದು ನನಗೇ ಇನ್ನೂ ಅರ್ಥವಾಗಿಲ್ಲ. ಇವರಾದರೂ ನಮಗೆ ಹೇಳಲಿ ಎಂದು ತರಾಟೆಗೆ ತೆಗೆದುಕೊಂಡರು.

ಉತ್ತರ ಪ್ರದೇಶ ಘಟನೆ ಅಕ್ಷಮ್ಯ: ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕೇಂದ್ರದ ಮಂತ್ರಿಯ ಪುತ್ರ ವಾಹನ ಹತ್ತಿಸಿದ್ದಾರೆ. ಇದು ಹೇಯ ಮತ್ತು ಅಕ್ಷಮ್ಯ. ನಂತರ ನಡೆದ ಪ್ರತಿಭಟನೆಯಲ್ಲಿ ಇನ್ನಷ್ಟು ರೈತರು ಮೃತಪಟ್ಟಿದ್ದಾರೆ. ಇದೇನಾ ನವ ಭಾರತ? ಹಿಂದುತ್ವದ ಹೆಸರಿನಲ್ಲಿ ದೇಶವನ್ನು ಒಡೆಯಲು ಹೊರಟಿರುವ ಬಿಜೆಪಿ ನವಭಾರತ ಕಟ್ಟುತ್ತಿರುವುದು ಹೀಗೆ ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು