ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಮತ ಫಸಲಿನ ರಾಜಕಾರಣ, ಒಳ್ಳೆಯ ರಾಜಕೀಯದ ಬೆಳೆ: ಎಚ್‌ಡಿಕೆ ಟೀಕೆ

Last Updated 28 ಜುಲೈ 2022, 13:29 IST
ಅಕ್ಷರ ಗಾತ್ರ

ಮೈಸೂರು: ‘ಮತ ಫಸಲಿನ ರಾಜಕಾರಣವಿದು. ಇಂತಹ ಘಟನೆ ಬಿಜೆಪಿಯವರಿಗೆ ಒಳ್ಳೆಯ ರಾಜಕೀಯದ ಬೆಳೆ. ಅಧಿಕಾರಕ್ಕಾಗಿ ಜನರಲ್ಲಿ ವಿಶ್ವಾಸದ ಕೊರತೆ ಮೂಡಿಸುತ್ತಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿ, ‘ಎಲ್ಲಾ ಸಮಾಜದ ಧಾರ್ಮಿಕ ಮುಖಂಡರ ಸಭೆ ನಡೆಸುವಂತೆ ಸಲಹೆ ನೀಡಿದ್ದೆ. ಆದರೆ, ಸರ್ಕಾರ ಮೌನಕ್ಕೆ ಶರಣಾಗಿತ್ತು. ಶಾಂತಿ ನೆಲೆಸಲು ಗಮನ ಕೊಡುವಂತೆ ಹಿಂದೆಯೇ ಹೇಳಿದ್ದೆ. ನನ್ನ ಮಾತನ್ನು ಕೇಳಲಿಲ್ಲ’ ಎಂದು ಟೀಕಿಸಿದರು.

‘ವಾರದಲ್ಲಿ ಒಂದೇ ಭಾಗದಲ್ಲಿ ಕೋಮು ಸಂಘರ್ಷದಿಂದ ಎರಡು ಹತ್ಯೆ ಪ್ರಕರಣಗಳು ನಡೆದಿವೆ. ಪ್ರವೀಣ್‌ ಕುಟುಂಬದವರ ಪರಿಸ್ಥಿತಿಯನ್ನು ನೋಡಲಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ, ಬಜರಂಗ ದಳ ಎನ್ನುವುದು ಮುಖ್ಯವಲ್ಲ. ಎಲ್ಲರೂ ಕ್ಷೇಮವಾಗಿರಬೇಕು. ನೆಮ್ಮದಿಯಾಗಿರಬೇಕು. ಅಂತಹ ವಾತಾವರಣ ನಿರ್ಮಿಸಬೇಕು’ ಎಂದರು.

‘ಹತ್ಯೆ ಪ್ರಕರಣದಿಂದ ಮನಸು ಕಲಕಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ಗಮನಿಸಿದೆ. ಹೀಗೆ ಹೇಳುವ ಬದಲಿಗೆ ಅಂತಹ ಘಟನೆಗಳು ನಡೆಯದಂತೆ ಕಡಿವಾಣ ಹಾಕಬೇಕಿತ್ತು. ಎಲ್ಲಿಯವರೆಗೂ ಈ ವಾತಾವರಣ? ನೀವು ಅಧಿಕಾರಕ್ಕೆ ಬಂದ ಮೇಲೆ ಎಷ್ಟು ಕೊಲೆಯಾಗಿದೆ? ಶಿವಮೊಗ್ಗದ ಹರ್ಷ ಕೊಲೆ ಆರೋಪಿಗಳಿಗೆ ಕಾರಾಗೃಹದಲ್ಲಿ ಹಲವು ಸೌಲಭ್ಯಗಳನ್ನು ನೀಡಲಾಗಿದೆ. ಇದೇನಾ ನಿಮ್ಮ ಆಡಳಿತ, ಇದೇನಾ ಸಾಧನೆ? ಇದು ಸಾವಿನ ಸಾಧನಾ ಸಮಾವೇಶವಾ?’ ಎಂದು ಕೇಳಿದರು.

‘ಇನ್ನೆಷ್ಟು ಅಮಾಯಕರು ಸಾಯಬೇಕು’ ಎಂದು ಪ್ರಶ್ನಿಸಿದ ಅವರು, ‘ಕರಾವಳಿ, ಶಿವಮೊಗ್ಗ ಆಯ್ತು. ಮುಂದೆ ಎಲ್ಲಿ? ಇದೇನಾ ಬಿಜೆಪಿಯವರು ಹಿಂದೂ ಧರ್ಮ ಕಾಪಾಡುವುದು?’ ಎಂದು ಆಕ್ರೋಶದಿಂದ ಕೇಳಿದರು.

‘ಹಿಂದುತ್ವದ ಕಾರ್ಡ್‌ನಲ್ಲಿ ಮತ ಪಡೆಯಬಹುದು, ಸಾವುಗಳಾದರೆ ಅಧಿಕಾರ ಹಿಡಿಯಬಹುದು ಎನ್ನುವ ಲೆಕ್ಕಾಚಾರ ಅವರದ್ದು. ಕೃತಕ ಸಾಂತ್ವನ ಅಥವಾ ಆಕ್ರೋಶದ ಮಾತುಗಳಾಡಿದರೆ ಏನೂ ಬದಲಾವಣೆ ಆಗುವುದಿಲ್ಲ. ನಾನೂ ಮುಖ್ಯಮಂತ್ರಿ ಆಗಿದ್ದೆ. ನನ್ನ ಕಾಲದಲ್ಲಿ ಏಕೆ ಈ ರೀತಿ ಘಟನೆಗಳು ನಡೆದಿರಲಿಲ್ಲ’ ಎಂದು ಪ್ರಶ್ನಿಸಿದರು.

‘ಎಲ್ಲರಿಗೂ ಭದ್ರತೆ ಕೊಡಲಾಗುತ್ತದೆಯೇ ಎಂದು ಸಂಸದ ತೇಜಸ್ವಿ ಸೂರ್ಯ ಕೇಳಿದ್ದಾರೆ. ಅಂಥವರನ್ನು ಗೆಲ್ಲಿಸಿದ ಅಂಥ ಮಾತುಗಳನ್ನು ಕೇಳಲೇಬೇಕು. ಗನ್‌ ಮ್ಯಾನ್ ಕೊಡಿ ಎಂದು ನಿಮ್ಮನ್ನ್ಯಾರೂ ಕೇಳುವುದಿಲ್ಲ. ನೆಮ್ಮದಿ ಕೊಡಿ ಎಂದಷ್ಟೆ ಕೇಳುತ್ತಾರಷ್ಟೆ. ಚುನಾವಣೆ ವೇಳೆ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳೇ ಇದಕ್ಕೆ ಉದಾಹರಣೆ’ ಎಂದು ಆರೋಪಿಸಿದರು.

‘ಬಿಜೆಪಿಯವರ ಬಣ್ಣದ ಜಾಹೀರಾತುಗಳನ್ನು ನೋಡಿ ಬೆಂಬಲಿಸಿದರೆ ಮತ್ತಷ್ಟು ಕೆಟ್ಟ ಕಾಲ ಬರುತ್ತದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ? ಜೀವಕ್ಕೆ ಈ ಸರ್ಕಾರದಲ್ಲಿ ಬೆಲೆಯೇ ಇಲ್ಲ. ಧರ್ಮದ ಹೆಸರಿನ ಸಾವುಗಳಾದರೆ, ಹಿಂದೂ ಧರ್ಮದ ಬದ್ಧತೆಯ ಕಳಕಳಿ ಇರುವ ಕುಟುಂಬದಲ್ಲಿ ಹತ್ಯೆಯಾದರೆ ಅವರಿಗೆ ಫಸಲು. ಅವರಿಗೆ ಬದುಕು ಕಟ್ಟುವುದು ಬೇಡ; ಇಂತಹ ಘಟನೆಗಳ ಮೇಲೆ ಸೌಧ ಕಟ್ಟಬೇಕು. ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಬೇಕು. ಅಲ್ಲಿಯವರೆಗೂ ಈ ಪರಿಸ್ಥಿತಿ ಬದಲಾಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT