ಗುರುವಾರ , ಆಗಸ್ಟ್ 11, 2022
23 °C
’ಮುಂಜಾನೆ 4ರವರೆಗೆ ಕ್ಲಬ್ ನಡೆಸುತ್ತಿದ್ದವರು ಯಾರು?‘ -ಸಿದ್ದರಾಮಯ್ಯಗೆ ಎಚ್‌ಡಿಕೆ ಪ್ರಶ್ನೆ

ಬೇನಾಮಿ ಆಸ್ತಿ ಸಾಬೀತಾದರೆ ರಾಜಕೀಯ ನಿವೃತ್ತಿ: ಎಚ್‌.ಡಿ. ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜಕಾರಣಕ್ಕೆ ಬರುವ ಮುನ್ನ ಅಥವಾ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೇನಾಮಿ ಆಸ್ತಿ ಸಂಪಾದಿಸಿರುವುದನ್ನು ಸಾಬೀ‍ತು ಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

‘ಕುಮಾರಸ್ವಾಮಿ ಬಳಿ ಸಾಕಷ್ಟು ಬೇನಾಮಿ ಜಮೀನು ಇರುವ ಕಾರಣಕ್ಕೆ ಅವರು ಭೂಸುಧಾರಣೆ ಮಸೂದೆ ಪರ ಇದ್ದಾರೆ. ಮಣ್ಣಿನ ಮಕ್ಕಳು ಎಂದು ಹೇಳಿ ಕೊಳ್ಳಲು ನಾಚಿಕೆಯಾಗಬೇಕು’ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟೀಕಿಸಿದ್ದರು. ಈ ಬಗ್ಗೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ  ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ನಾನು ಬೇನಾಮಿ ಆಸ್ತಿ ಮಾಡಿಲ್ಲ. ಅಧಿಕಾರಕ್ಕೆ ಅಂಟಿಕೊಂಡು ಕುಳಿತನವಲ್ಲ’ ಎಂದರು.

‘ಖಾಸಗಿ ಹೋಟೆಲ್‍ನಲ್ಲಿ ಬೆಳಗಿನ ಜಾವ 4 ಗಂಟೆಯವರೆಗೂ ಕ್ಲಬ್‍  ನಡೆಸುತ್ತಿದ್ದವರು ಯಾರು ಎಂಬುದನ್ನು ಹೇಳಿ? ನಿಮ್ಮ ರೀತಿ ಕೆಲಸ ನಾನು ಮಾಡಿಲ್ಲ. ಅರ್ಕಾವತಿ ಬಡಾವಣೆಯಲ್ಲಿ 400 ಎಕರೆ ಜಮೀನು ರೀ–ಡು ಮಾಡಿ ಕೊಟ್ಟಿದ್ದು ರೈತರಿಗೋ ರಿಯಲ್ ಎಸ್ಟೇಟ್‍ನವರಿಗೂ ಎಂಬುದನ್ನು ಜನರಿಗೆ ತಿಳಿಸಿ’ ಎಂದೂ ಆಗ್ರಹಿಸಿದರು.

‘ನಿಮ್ಮಂತೆ ಡಬಲ್‍ಗೇಮ್ ರಾಜಕೀಯ ಮಾಡಿಲ್ಲ’ ಎಂದು ಸಿದ್ದರಾಮಯ್ಯ ಅವರನ್ನು ಉಲ್ಲೇಖಿಸಿ ಹೇಳಿದ ಅವರು, ‘ನಾನೇಕೆ ನಾಚಿಕೆ ಪಡಬೇಕು’ ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕಂದಾಯ ಸಚಿವರಾಗಿದ್ದ ಶ್ರೀನಿವಾಸ್‍ಪ್ರಸಾದ್ ನೇತೃತ್ವದ
ಸಂಪುಟ ಉಪ ಸಮಿತಿಯು ಕೃಷಿ ಭೂಮಿ ಖರೀದಿ ಮಾಡಲು ಇದ್ದ ಆದಾಯದ ಮಿತಿಯನ್ನು ₹ 25 ಲಕ್ಷಕ್ಕೆ ಹೆಚ್ಚಳ ಮಾಡುವ ತೀರ್ಮಾನ ಕೈಗೊಂಡಿತ್ತು. ಇದು ರೈತ ಪರ ತೀರ್ಮಾನವೋ ಅಥವಾ ಶ್ರೀಮಂತರ ಪರ ತೀರ್ಮಾನವೋ’ ಎಂದರು.

‘ಗೋಹತ್ಯೆ ನಿಷೇಧ ಮಸೂದೆಯನ್ನು 2010ರಲ್ಲೇ ವಿರೋಧಿಸಿದ್ದೆವು. ಆಗ ಎಚ್.ಡಿ. ದೇವೇಗೌಡ ಅವರ ನೇತೃತ್ವದಲ್ಲಿ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಮಸೂದೆಗೆ ಅಂಕಿತ ಹಾಕದಂತೆ ಕೋರಿದ್ದೆವು. ಈಗಲೂ ಗೋಹತ್ಯೆ ನಿಷೇಧಕ್ಕೆ ನಮ್ಮ ವಿರೋಧವಿದೆ. ವಿಧಾನ ಪರಿಷತ್‍ನಲ್ಲಿ ಜೆಡಿಎಸ್ ವಿರೋಧ ಮಾಡಲಿದೆ ಎಂಬ ಕಾರಣಕ್ಕೆ ಮಸೂದೆ ಮಂಡಿಸಲಿಲ್ಲ’ ಎಂದರು.

‘ಮೋದಿಯವರಿಗೂ ಅವಕಾಶ ಕೊಡಿ’

‘ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಅವರಿಗೂ ಒಂದು ಅವಕಾಶ ಮಾಡಿಕೊಟ್ಟು, ಕಾದು ನೋಡೋಣ’ ಎಂದು ಕುಮಾರಸ್ವಾಮಿ ಹೇಳಿದರು.

‘ಎಪಿಎಂಸಿ ಕಾಯ್ದೆ ಬಗ್ಗೆ ಪರ ಮತ್ತು ವಿರೋಧದ ಚರ್ಚೆಗಳು ನಡೆದಿವೆ. ಪಂಜಾಬ್ ಪರಿಸ್ಥಿತಿ ಬೇರೆ, ಕರ್ನಾಟಕದ ಸ್ಥಿತಿ ಬೇರೆ’ ಎಂದು ಅವರು, ‘ರೈತರಿಗೆ ಮಾರಕವಾದ ಯಾವುದೇ ತೀರ್ಮಾನವನ್ನು ನಮ್ಮ ಪಕ್ಷ ತೆಗೆದುಕೊಳ್ಳುವುದಿಲ್ಲ. ಭೂಸುಧಾರಣೆ ಮಸೂದೆ ರೈತರ ಪರವಾಗಿರುವ ಕಾರಣಕ್ಕೆ ಹಾಗೂ ನಮ್ಮ ಪಕ್ಷ ಸೂಚಿಸಿದ ತಿದ್ದುಪಡಿಯನ್ನು ಸೇರಿಸಿದ್ದರಿಂದಾಗಿ
ಪರಿಷತ್ತಿನಲ್ಲಿ ಅದಕ್ಕೆ ಒಪ್ಪಿಗೆ ನೀಡಿದ್ದೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು