ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಯೋಜನೆ ಜಾರಿಗೆ ಇಚ್ಛಾಶಕ್ತಿ ಬೇಕೇ ವಿನಃ ಪಾದಯಾತ್ರೆಗಳಲ್ಲ: ಎಚ್‌ಡಿಕೆ

Last Updated 9 ಮಾರ್ಚ್ 2022, 14:07 IST
ಅಕ್ಷರ ಗಾತ್ರ

ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೊಳಿಸಲು ಇಚ್ಛಾಶಕ್ತಿ ಮತ್ತು ಗಂಭೀರ ಪ್ರಯತ್ನ ಬೇಕೇ ಹೊರತು, ಯಾವುದೇ ಪಾದಯಾತ್ರೆಗಳ ಅಗತ್ಯವಿಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ವಿಧಾನಸಭೆಯಲ್ಲಿ ಬುಧವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಯೋಜನೆ ಆರಂಭಿಸಲು ತಮಿಳುನಾಡು ಅಥವಾ ಕೇಂದ್ರ ಸರ್ಕಾರದ ಒಪ್ಪಿಗೆಯ ಅಗತ್ಯವೂ ಇಲ್ಲ. ಪರಿಸರ ಇಲಾಖೆ ಅನುಮತಿ ಪಡೆದು ಚಾಲನೆ ನೀಡಬಹುದು ಎಂದು ಅವರು ಪ್ರತಿಪಾದಿಸಿದರು.

ಕರ್ನಾಟಕ 30.65 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಬಿಳಿಗೊಂಡ್ಲುವಿನಿಂದ ಮೇಲಕ್ಕೆ (ಕರ್ನಾಟಕದ ಕಡೆ) ಅಥವಾ ಮೇಕೆದಾಟು ಬಳಿ ಯೋಜನೆ ರೂಪಿಸಬಹುದು ಎಂದು ಸುಪ್ರೀಂಕೋರ್ಟ್‌ 2019 ರ ಮೇ ತಿಂಗಳಿನಲ್ಲೇ ಸೂಚನೆ ನೀಡಿದೆ. ಆದ್ದರಿಂದ ತಮಿಳುನಾಡಿನ ಒಪ್ಪಿಗೆ ಬೇಕಿಲ್ಲ ಎಂದೂ ಹೇಳಿದರು.

ಮೇಕೆದಾಟು ವಿಚಾರದಲ್ಲಿ ಸಾಕಷ್ಟು ಗೊಂದಲಗಳಾಗಿವೆ. ಈ ಗೋಜಲುಗಳನ್ನು ನಿವಾರಿಸಿಕೊಂಡು ಯೋಜನೆಯನ್ನು ಹೇಗೆ ಕಾರ್ಯಗತ ಮಾಡಬಹುದು ಎಂದು ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಈ ಯೋಜನೆಯನ್ನು ಎರಡು ಹಂತಗಳಲ್ಲಿ ಕಾರ್ಯಗತಗೊಳಿಸಲೂ ಸೂಚಿಸಿದ್ದಾರೆ. ಕುಡಿಯುವ ನೀರಿನ ಉದ್ದೇಶಕ್ಕಾಗಿ 30.65 ಟಿಎಂಸಿ ಅಡಿ ನೀರು ತುಂಬುವ 67.16 ಗ್ರಾಸ್‌ ಕೆಪಾಸಿಟಿಯಷ್ಟು ಗಾತ್ರದ ಯೋಜನೆ ಒಂದೇ ಹಂತದಲ್ಲಿ ಮಾಡಲು ಸಾಧ್ಯವಿಲ್ಲ. ಇದನ್ನು ಸರ್ಕಾರ ಗಮನಕ್ಕೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಸುಪ್ರೀಂಕೋರ್ಟ್‌ನಲ್ಲಿ ತಮಿಳುನಾಡು ರಾಜ್ಯ ವಕೀಲರೇ ಪ್ರಮಾಣ ಪತ್ರವನ್ನು ಸಲ್ಲಿಸಿ, ಕಾವೇರಿ ನದಿಯಲ್ಲಿ ತನಗೆ ಹಂಚಿಕೆ ಆದ ನೀರನ್ನು ಕರ್ನಾಟಕ ಹೇಗೆ ಬೇಕಾದರೂ ಬಳಕೆ ಮಾಡಿಕೊಳ್ಳಬಹುದು. ಅದಕ್ಕೆ ನಮ್ಮ ತಕರಾರು ಇಲ್ಲ. ಬೇಕಾದರೆ ಎರಡೂ ರಾಜ್ಯಗಳ ಗಡಿಪ್ರದೇಶದಲ್ಲಿ ಇನ್ನೊಂದು ಅಣೆಕಟ್ಟಿಕೊಳ್ಳಲಿ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ’ ಎಂದು ಕುಮಾರಸ್ವಾಮಿ ಹೇಳಿದರು.

ಎತ್ತಿನ ಹೊಳೆ ಯೋಜನೆಯ ಮೂಲಕ ಬರಪೀಡಿತ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ನೀರು ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲವಾದರೂ ಗುತ್ತಿಗೆದಾರರ ಜೇಬು ತುಂಬಿಸಲಾಗುತ್ತಿದೆಯೆ ಎಂಬ ಅನುಮಾನ ಬರುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

ನೇತ್ರಾವತಿ ನದಿಯಿಂದ ಮೂರು ಹಂತಗಳಲ್ಲಿ ನೀರನ್ನು ಬರಪೀಡಿತ ಜಿಲ್ಲೆಗಳಿಗೆ 24 ಟಿಎಂಸಿ ನೀರನ್ನು ಹರಿಸುವ ಈ ಯೋಜನೆಗೆ 2013 ರಲ್ಲಿ ₹8323 ಕೋಟಿ, 2014 ರಲ್ಲಿ ₹12,912 ಕೋಟಿಗೆ ಅಂದಾಜು ಮಾಡಲಾಗಿತ್ತು. 10 ವರ್ಷ ಕಳೆದರೂ ಯೋಜನೆ ಮುಗಿರುವ ಲಕ್ಷಣವೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೀರು ಕೇಳಿದವರಿಗೆ ಬೆತ್ತದಲ್ಲಿ ಹೊಡೆಸಿದ್ದು ಯಾರು?

‘ಕಳೆದ 75 ವರ್ಷದಲ್ಲಿ ಅನೇಕರು ಸರ್ಕಾರ ಮಾಡಿದ್ದಾರೆ. ಸಾಕಷ್ಟು ಅಣೆಕಟ್ಟುಗಳೂ ಬಂದಿವೆ. ಇದರ ಕೀರ್ತಿ ಎಲ್ಲರಿಗೂ ಸಲ್ಲಬೇಕು. ಈಗ ಕಾಂಗ್ರೆಸ್‌ ನಾಯಕರು ನಮ್ಮ ನೀರು ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡುತ್ತಿದ್ದಾರೆ. ಜನರ ಹಕ್ಕು ಎನ್ನುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಜನರು ಧರಣಿ ನಡೆಸಿದಾಗ ಪೊಲೀಸರನ್ನು ಬಿಟ್ಟು ಬೆತ್ತದಿಂದ ಹೊಡೆಸಿದ್ದು ಯಾರು? ಆಗ ನಮ್ಮ ನೀರು ನಮ್ಮ ಹಕ್ಕು ನೆನಪಿಗೆ ಬರಲಿಲ್ಲವೆ’ ಎಂದು ಕುಮಾರಸ್ವಾಮಿ ಅವರು ಕಾಂಗ್ರೆಸ್ ಅನ್ನು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT