ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿಗೆ ಜೆಡಿಎಸ್‌ನಿಂದ ಬಿಜೆಪಿಗೆ ಅರ್ಜಿ ಹಾಕಿದವರು ಯಾರು: ಎಚ್‌ಡಿಕೆ ಪ್ರಶ್ನೆ

ಜೆಡಿಎಸ್‌ ಎನ್‌ಡಿಎ ಸೇರಲಿದೆ ಎನ್ನುವುದು ಅಪ್ಪಟ ಸುಳ್ಳು: ಕುಮಾರಸ್ವಾಮಿ
Last Updated 3 ಜನವರಿ 2021, 11:06 IST
ಅಕ್ಷರ ಗಾತ್ರ

ಬೆಂಗಳೂರು: ‘ಜೆಡಿಎಸ್‌ ಎನ್‌ಡಿಎ ಸೇರಲಿದೆ ಎಂಬ ಕಲ್ಪಿತ ಸುದ್ದಿಗಳನ್ನು ವ್ಯವಸ್ಥಿತವಾಗಿ ಬಿಜೆಪಿ ಹರಡುತ್ತಿದೆ. ಇದೆಲ್ಲವೂ ಅಪ್ಪಟ ಸುಳ್ಳು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಅವರು, ‘ಜೆಡಿಎಸ್‌ ಅನ್ನು ಮುಗಿಸುವ ಪ್ರಯತ್ನಗಳೆಲ್ಲ ವಿಫಲವಾಗಿವೆ ಎಂಬುದು ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದ ಮೂಲಕ ಬಿಜೆಪಿಗೆ ಮನವರಿಕೆಯಾಗಿದೆ. ಇದೇ ಕಾರಣಕ್ಕೆ ಮೈತ್ರಿಯ ಕಪಟ ನಾಟಕವಾಡಲು ಬಿಜೆಪಿ ನಿಂತಿದೆ’ ಎಂದಿದ್ದಾರೆ.

‘ಪ್ರಧಾನಿ ಅವರೊಂದಿಗೆ ರಾಜ್ಯ ಬಿಜೆಪಿ ನಾಯಕರಿಗಿಂತಲೂ ಉತ್ತಮ ಬಾಂಧವ್ಯವೂ ನನಗಿದೆ. ಯಡಿಯೂರಪ್ಪ ಹಿರಿಯರು ಎಂಬ ಗೌರವವೂ ಇದೆ. ವಿರೋಧಕ್ಕಾಗಿ ವಿರೋಧ ಪಕ್ಷವಾಗಿರಬಾರದು ಎಂಬ ಆಶಯವೂ ಇದೆ. ಬಿಜೆಪಿ ಅಪಪ್ರಚಾರಕ್ಕೆ ಕೈ ಹಾಕಿದರೆ, ಬಾಂಧವ್ಯ, ಗೌರವ, ಆಶಯಗಳಿಗೆ ಧಕ್ಕೆಯಾಗಲಿದೆ. ಜೆಡಿಎಸ್‌ ವಿಚಾರದಲ್ಲಿ ಬಿಜೆಪಿಯು ಎಚ್ಚರವಾಗಿರಲಿ’ ಎಂದೂ ಹೇಳಿದ್ದಾರೆ.

‘ಜೆಡಿಎಸ್‌ ಜೊತೆಗೆ ಮಿತ್ರತ್ವದ ನಾಟಕವಾಡಿ, ಕಡೆಗೆ ಪಕ್ಷವನ್ನೇ ಒಡೆಯಲು ಯತ್ನಿಸಿದವರು ಅನೇಕರು. ಈಗ ಬಿಜೆಪಿ ಸರದಿ. ಅಷ್ಟಕ್ಕೂ ಮೈತ್ರಿಗೆ ಜೆಡಿಎಸ್‌ನಿಂದ ಬಿಜೆಪಿಗೆ ಅರ್ಜಿ ಹಾಕಿದವರು ಯಾರು. ಜೆಡಿಎಸ್‌ನೊಂದಿಗೆ ಮೈತ್ರಿ ಇಲ್ಲವೆಂದಿರುವ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಎದುರು ಮೈತ್ರಿ ಪ್ರಸ್ತಾಪ ಇಟ್ಟವರು ಯಾರು’ ಎಂದು ಪ್ರಶ್ನಿಸಿದರು.

‘ಜೆಡಿಎಸ್‌ ಎನ್‌ಡಿಎ ಮೈತ್ರಿಕೂಟ ಸೇರುತ್ತದೆ, ಕುಮಾರಸ್ವಾಮಿ ಅವರನ್ನು ಕೇಂದ್ರ ಮಂತ್ರಿ ಮಾಡಲಾಗುತ್ತದೆ ಎಂಬುದೆಲ್ಲವೂ ಸುಳ್ಳಿನ ಕಂತೆ. ಈ ರೀತಿಯ ಆಮಿಷಗಳ ಮೂಲಕ ಬಿಜೆಪಿಯು ಜೆಡಿಎಸ್‌ ಕಾರ್ಯಕರ್ತರು, ಜೆಡಿಎಸ್‌ ಬೆಂಬಲಿಸುವ ಜನರ ಮನಸ್ಸುಗಳಿಗೆ ವಿಷ ಬಿತ್ತುವ ಕೆಲಸ ಮಾಡುತ್ತಿದೆ. ಇದು ನೈತಿಕವಲ್ಲದ ರಾಜಕಾರಣ ಎಂಬುದನ್ನು ಬಿಜೆಪಿ ತಿಳಿಯಲಿ’ ಎಂದೂ ಹೇಳಿದ್ದಾರೆ.

‘1997ರಲ್ಲಿ ದೇವೇಗೌಡರು ಪ್ರಧಾನಿ ಸ್ಥಾನದಿಂದ ಇಳಿಯುವಾಗ ಇದೇ ಬಿಜೆಪಿಯ ಅಗ್ರಮಾನ್ಯ ಸಾರ್ವಕಾಲಿಕ ನಾಯಕ ವಾಜಪೇಯಿ ಅವರು ದೇವೇಗೌಡರಿಗೆ, ಜನತಾದಳಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದರು. ಆಗಲೇ ಪ್ರಧಾನಿ ಹುದ್ದೆ, ಕೇಂದ್ರದ ಅಧಿಕಾರ ತಿರಸ್ಕರಿಸಿ ಬಂದವರು ನಾವು. ಇನ್ನು ಯಕಃಶ್ಚಿತ್‌ ಮಂತ್ರಿ ಸ್ಥಾನಕ್ಕೆ ಆಸೆಪಡುವ ವ್ಯಕ್ತಿ ನಾನಲ್ಲ’ ಎಂದು ಅವರು ಉಲ್ಲೇಖಿಸಿದ್ದಾರೆ.

‘ಸದ್ಯ ಯಾವ ಪಕ್ಷಕ್ಕೆ ಯಾರ ಅಗತ್ಯವೂ ಇಲ್ಲ. ನಮಗಂತೂ ಬಿಜೆಪಿ ಸ್ನೇಹ ಬೇಕಿಲ್ಲ. ನಮಗೆ ಬೇಕಿರುವುದು ರಾಜ್ಯದ ಅಭಿವೃದ್ಧಿ ಹಾಗೂ ನಮ್ಮ ಕಾರ್ಯಕರ್ತರು. ಪ್ರತಿಕೂಲ ಪರಿಸ್ಥಿತಿ ಇದ್ದರೂ ಕಾರ್ಯಕರ್ತರಲ್ಲಿ ಉತ್ಸಾಹ, ಚೈತನ್ಯವಿದೆ ಎಂಬುದು ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದಿಂದ ಎಲ್ಲರಿಗೂ ಗೊತ್ತಾಗಿದೆ. ಈಗ ನಮ್ಮ ಮುಂದಿರುವುದು ಪಕ್ಷದ ಸಂಘಟನೆ ಮಾತ್ರ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT