ಸೋಮವಾರ, ಅಕ್ಟೋಬರ್ 18, 2021
22 °C
ಪ್ರತಿ ಕುಟುಂಬಕ್ಕೆ ₹25 ಸಾವಿರ ನೆರವು: ಕುಮಾರಸ್ವಾಮಿ ಒತ್ತಾಯ

ಅಮೃತ ಯೋಜನೆ ಬದಿಗಿಡಿ, ಕೋವಿಡ್‌ ವರ್ಷ ಘೋಷಿಸಿ: ಎಚ್‌.ಡಿ ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಸರ್ಕಾರ ಕೆಲವು ಯೋಜನೆಗಳನ್ನು ಘೋಷಣೆ ಮಾಡಿದೆ. ಆದರೆ, ಬೆಲೆ ಏರಿಕೆಯಿಂದ ಬಸವಳಿದಿರುವ ಜನರ ನೆರವಿಗೆ ಧಾವಿಸಲು ಆ ಹಣ ಮೀಸಲಿಟ್ಟು ಆ ಎಲ್ಲ ಯೋಜನೆಗಳನ್ನು ಒಂದು ವರ್ಷ ಮುಂದಕ್ಕೆ ಹಾಕಬೇಕು. ಈ ವರ್ಷವನ್ನು ‘ಕೋವಿಡ್ ವರ್ಷ’ವೆಂದು ಘೋಷಣೆ ಮಾಡಬೇಕು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ವಿಧಾನಸಭೆಯಲ್ಲಿ ನಿಯಮ 69ರ ಅಡಿ ಚರ್ಚೆಯಲ್ಲಿ ಪಾಲ್ಗೊಂಡು ಗುರುವಾರ ಮಾತನಾಡಿದ ಅವರು,  ‘ರಾಜ್ಯದ 55 ಲಕ್ಷ ಬಡ ಕುಟುಂಬಗಳಿಗೆ ತಲಾ ₹25 ಸಾವಿರ ನೆರವು ನೀಡಿ ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವವರ ಕಣ್ಣೀರು ಒರೆಸುವ ಕೆಲಸ ಮಾಡಬೇಕು’ ಎಂದರು. 

‘ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ನಿರಂತರವಾಗಿ ಏರಿಸುವ ಮೂಲಕ ಉರಿವ ಮನೆಯಲ್ಲಿ ಗಳ ಹಿರಿಯುವ ಕೆಲಸ ಆಗುತ್ತಿದೆ. ನಿರಂತರ ಬೆಲೆ ಏರಿಕೆಯಿಂದ ರೈತರು, ಬಡವರು ಮತ್ತು ಶ್ರಮಿಕರ ಮನೆಗಳಲ್ಲಿ ಬೆಂಕಿ ಬಿದ್ದಿದೆ. ಆ ಬೆಂಕಿ ಬಿದ್ದಿರುವ ಮನೆಗಳಲ್ಲಿ ಎಷ್ಟು ಗಳ ಹಿರಿಯಬಹುದು ಎಂಬ ಉದ್ದೇಶದಿಂದ ಇಷ್ಟು ತೆರಿಗೆ ಹಾಕಿದಂತಿದೆ’ ಎಂದರು.

‘ಅತಿಯಾದ ಭಾರ ಹೊರಲಾಗದ ಎತ್ತಿನ ಗಾಡಿಯ ಅಸಹಾಯಕ ಎತ್ತಿನಂತಿದೆ ಜನಸಾಮಾನ್ಯನ ಬದುಕು. ಭಾರ ಹೊರಲಾಗದಿದ್ದರೆ ಎತ್ತಿಗೆ ಛಡಿಯೇಟು ತಪ್ಪಿಲ್ಲ. ಹಾಗೆಯೇ, ಭಾರದಿಂದ ಗಾಡಿ ಚಕ್ರ ನೆಲದಲ್ಲಿ ಹೂತರೆ ಅದನ್ನು ಎಳೆಯಲಾಗದಿದ್ದರೆ ಪುನಾ ಆ ಎತ್ತಿಗೇ ಛಡಿಯೇಟು ತಪ್ಪಲ್ಲ. ಜನ ಸಾಮಾನ್ಯನ ಪರಿಸ್ಥಿತಿಯೂ ಇದೇ ಆಗಿದೆ’ ಎಂದರು. 

‘ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ₹1 ಲಕ್ಷ ಪರಿಹಾರ ನೀಡುವು ದಾಗಿ ರಾಜ್ಯ ಸರ್ಕಾರ ಕೆಲವು ತಿಂಗಳ ಹಿಂದೆ ಪ್ರಕಟಿಸಿತು. ಆದರೆ, ಒಂದು ಕುಟುಂಬಕ್ಕೂ ಈವರೆಗೆ ಪರಿಹಾರ ಸಿಕ್ಕಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ದೊಡ್ಡ ಯೋಜನೆಗಳಿಗೆ ₹200 ಕೋಟಿ, ₹400 ಕೋಟಿ, ₹1 ಸಾವಿರ ಕೋಟಿ ಒಂದು ವರ್ಷ ಬಿಡುಗಡೆ ಮಾಡದಿ
ದ್ದರೂ ಪರವಾಗಿಲ್ಲ. ಈ ಹಣವನ್ನು ಜನರ ಬದುಕು ಮರುರೂಪಿಸಲು ಬಳಸಿ’ ಎಂದು ಅವರು ಕಿವಿಮಾತು ಹೇಳಿದರು.

‘ಕೋವಿಡ್‌ನಿಂದಾಗಿ 40 ಸಾವಿರ ಜನರು ಸತ್ತಿದ್ದಾರೆ. ಸಾವಿರಾರು ಜನರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಅವರಿಗೆ ₹6 ಲಕ್ಷ, 8 ಲಕ್ಷ, 10 ಲಕ್ಷ ಬಿಲ್‌ ಬಂದಿದೆ. ಈ ಕುಟುಂಬಗಳು ಸಾಲ ಮಾಡಿ ಬೀದಿಗೆ ಬಂದಿವೆ. ಈ ಕುಟುಂಬಗಳ ಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು