ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚರತ್ನ ಯಾತ್ರೆ, ಎಚ್‌.ಡಿ.ಕೆ ಜನ್ಮದಿನ: ಮಾಗಡಿಗೆ ಹರಿದು ಬಂದ ಜನಸಾಗರ

Last Updated 15 ಡಿಸೆಂಬರ್ 2022, 16:01 IST
ಅಕ್ಷರ ಗಾತ್ರ

ರಾಮನಗರ: ಕಣ್ಣು ಹಾಯಿಸಿದಷ್ಟು ದೂರ ಜನಸಾಗರ. ಕೋಟೆ ಮೈದಾನ ತುಂಬೆಲ್ಲ ಜೈಕಾರ. ಎಚ್‌.ಡಿ. ಕುಮಾರಸ್ವಾಮಿಗೆ ಅಭಿಮಾನಿಗಳಿಂದ ಬೃಹತ್‌ ಗಾತ್ರದ ಹಾರಗಳ ಅರ್ಪಣೆ.

ಇದು ಮಾಗಡಿಯಲ್ಲಿ ಗುರುವಾರ ರಾತ್ರಿ ಕಂಡುಬಂದ ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಜನ್ಮದಿನಾಚರಣೆ ಕಾರ್ಯಕ್ರಮದ ದೃಶ್ಯಗಳು. ಮಳೆಯ ಕಾರಣಕ್ಕೆ ಮೊಟಕುಗೊಂಡಿದ್ದ ಪಂಚರತ್ನ ಯಾತ್ರೆಗೆ ಕೆಂಪೇಗೌಡರ ನಾಡಿನಲ್ಲಿ ಗುರುವಾರ ಸಂಜೆ ಮತ್ತೆ ಚಾಲನೆ ದೊರೆತಿದ್ದು, ಇಲ್ಲಿಗೆ ಜೆಡಿಎಸ್‌ ಕಾರ್ಯಕರ್ತರು ಅಭಿಮಾನಿಗಳ ದಂಡೇ ಹರಿದು ಬಂದಿತ್ತು.

ಸಂಜೆ 7ರ ಸುಮಾರಿಗೆ ಮಾಗಡಿಗೆ ಧಾವಿಸಿದ ಎಚ್‌.ಡಿ. ಕುಮಾರಸ್ವಾಮಿ ಜನ್ಮದಿನದ ಅಂಗವಾಗಿ ಮಾಗಡಿಯ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮೊದಲಿಗೆ ರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಗೋಪೂಜೆ ನೆರವೇರಿಸಿ, ಬಳಿಕ ದೇವರ ದರ್ಶನ ಪಡೆದರು. ನಂತರ ಸೋಮೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ ನಂತರ ಜೆಡಿಎಸ್ ಕಚೇರಿಗೆ ಧಾವಿಸಿದರು.

ಜೆಡಿಎಸ್‌ ಕಚೇರಿಯಿಂದ ಕೋಟೆ ಮೈದಾನದವರೆಗೆ ಕುಮಾರಸ್ವಾಮಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಮಾರ್ಗ ಮಧ್ಯೆ ಅಭಿಮಾನಿಗಳು ಎಚ್‌ಡಿಕೆಗೆ ಬೃಹತ್‌ ಹೂವು ಹಾಗೂ ಹಣ್ಣಿನ ಹಾರಗಳನ್ನು ಅರ್ಪಿಸಿದರು. ಅವರೆ ಕಾಳಿನಿಂದ ಮಾಡಿದ್ದ ಬೃಹತ್ ಹಾರ ಗಮನ ಸೆಳೆಯಿತು.

ವೇದಿಕೆ ಕಾರ್ಯಕ್ರಮ ನಡೆದ ಕೋಟೆ ಮೈದಾನಕ್ಕೆ ಜನಸಾಗರವೇ ಹರಿದು ಬಂದಿತ್ತು. ನಗರದ ಮುಖ್ಯ ರಸ್ತೆಗಳೆಲ್ಲ ಜನರಿಂದ ತುಂಬಿದ್ದವು. ಕಂಸಾಳೆ, ಡೊಳ್ಳು, ಪೂಜಾ ಕುಣಿತ ಸೇರಿದಂತೆ ವಿವಿಧ ತಂಡಗಳು ಮೆರವಣಿಗೆಯ ರಂಗು ಏರಿಸಿದ್ದವು. ನಗರದ ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿತ್ತು.

ಮೆರವಣಿಗೆಯಿಂದಾಗಿ ಇಡೀ ಮಾಗಡಿಯಲ್ಲಿ ವಾಹನ ಸಂದಣಿ ಉಂಟಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಮೆರವಣಿಗೆಯಲ್ಲಿ ಕುಮಾರಸ್ವಾಮಿ ಅವರೊಂದಿಗೆ ಶಾಸಕ ಎ.ಮಂಜುನಾಥ, ಜೆಡಿಎಸ್ ರಾಜ್ಯ ಘಟದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತಿತರರು ಸಾಥ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT