ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘಿಸಿ 1ರಿಂದ 5ನೇ ತರಗತಿ ಶಾಲೆ ಆರಂಭಿಸಿದರೆ ಕ್ರಮ: ಸುಧಾಕರ್

ಆರೋಗ್ಯ ಸಚಿವ ಟ್ವೀಟ್‌
Last Updated 11 ಮಾರ್ಚ್ 2021, 20:09 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಅನುಮತಿ ನೀಡದಿದ್ದರೂ ನಿಯಮ ಉಲ್ಲಂಘಿಸಿ ಹಲವು ಕಡೆಗಳಲ್ಲಿ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು 1ರಿಂದ 5ರವರೆಗಿನ ತರಗತಿಗಳನ್ನು ಆರಂಭಿಸಿರುವ ಬಗ್ಗೆ ಪೋಷಕರು ಲಿಖಿತವಾಗಿ ಮತ್ತು ಕರೆ ಮಾಡಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಅವರಿಗೆ ದೂರು ನೀಡಿದ್ದಾರೆ.

ಕೋವಿಡ್‌ ಕಾರಣದಿಂದ 2020–21ನೇ ಸಾಲಿನಲ್ಲಿ 1ರಿಂದ 5ನೇ ತರಗತಿವರೆಗೆ ಇನ್ನೂ ಶಾಲೆಗಳು ಆರಂಭ ಆಗಿಲ್ಲ. 6ರಿಂದ 12ನೇ ತರಗತಿವರೆಗೆ ಮಾತ್ರ ಶಾಲೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೂ ಬೆಂಗಳೂರು ಗ್ರಾಮಾಂತರವೂ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಖಾಸಗಿ ಶಾಲೆಗಳು ಪ್ರಾಥಮಿಕ ಹಂತದಿಂದಲೇ ತರಗತಿಗಳನ್ನು ಆರಂಭಿಸಿವೆ.

ಶಾಲೆ ಆರಂಭಗೊಂಡಿರುವುದರಿಂದ ಮಕ್ಕಳನ್ನು ಕಳುಹಿಸಬೇಕೇ, ಬೇಡವೇ ಎಂಬ ಗೊಂದಲದಲ್ಲಿ ಪೋಷಕರಿದ್ದಾರೆ. ಕೆಲವು ಶಾಲೆಗಳು ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸಲು ತರಗತಿಗಳನ್ನು ಆರಂಭಿಸಿವೆ ಎನ್ನಲಾಗಿದೆ. ಈ ಬಗ್ಗೆ ಪೋಷಕರು ನೇರವಾಗಿ ಸಚಿವರಿಗೆ ಮಾಹಿತಿ ನೀಡಿದ್ದಾರೆ ಎಂದು ಗೊತ್ತಾಗಿದೆ.

ರಾಜ್ಯ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ 1ರಿಂದ 5ನೇ ತರಗತಿವರೆಗೆ ಶಾಲೆಗಳನ್ನು ಆರಂಭಿಸುವ ಬಗ್ಗೆ ಸರ್ಕಾರಕ್ಕೆ ಯಾವುದೇ ಸಲಹೆ ನೀಡಿಲ್ಲ. ಅಲ್ಲದೆ, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಕೆಲವು ದಿನಗಳಿಂದ ಹೆಚ್ಚೆಚ್ಚು ಪತ್ತೆಯಾಗುತ್ತಿವೆ. ರಾಜ್ಯದಲ್ಲಿಯೂ ಇತ್ತೀಚಿನ ದಿನಗಳಲ್ಲಿ ಇಳಿಕೆಯಾಗಿದ್ದ ಪ್ರಕರಣಗಳ ಸಂಖ್ಯೆ, ಮತ್ತೆ ಏರಿಕೆಯಾಗುತ್ತಿದೆ. ಕೊರೊನಾ ಸೋಂಕು ಸಂಪೂರ್ಣ ಕಡಿಮೆ ಆಗಿಲ್ಲ. ಈ ನಡುವೆ ಪ್ರಾಥಮಿಕ ಹಂತದ ಶಾಲೆಗಳನ್ನು ತೆರೆಯುವುದು ಸೂಕ್ತವಲ್ಲ ಎಂದು ಸಮಿತಿ ಈ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಅಭಿಪ್ರಾಯ ನೀಡಿತ್ತು.

‘ಸರ್ಕಾರದ ನಿಯಮ, ನಿರ್ದೇಶನವನ್ನು ಉಲ್ಲಂಘಿಸಿ ತರಗತಿಗಳನ್ನು ಪುನರಾಂಭಿಸಿರುವ ಶಾಲೆಗಳಿಗೆ ತಕ್ಷಣ ಎಚ್ಚರಿಕೆ ನೀಡಬೇಕು. ಅಂಥ ಶಾಲೆಗಳ ಪರವಾನಗಿ ರದ್ದು ಸೇರಿದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಅವರಿಗೆ ಟ್ವೀಟ್‌ ಮೂಲಕ ಸಚಿವ ಸುಧಾಕರ್‌ ಮನವಿ ಮಾಡಿದ್ದಾರೆ.

ಅಲ್ಲದೆ, ಪೋಷಕರ ದೂರುಗಳ ಬಗ್ಗೆ ಶಿಕ್ಷಣ ಇಲಾಖೆಯ ಆಯುಕ್ತರಿಗೂ ಸುಧಾಕರ್‌ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಗತ್ಯ ಕ್ರಮಕೈಗೊಳ್ಳಲು ಉಪ ನಿರ್ದೇಶಕರಿಗೆ ಸೂಚನೆ –ಸುರೇಶ್‌ ಕುಮಾರ್‌
‘ಕೆಲವು ಖಾಸಗಿ ಶಾಲೆಗಳಲ್ಲಿ ಒಂದರಿಂದ 5ರವರೆಗೆ ತರಗತಿ ನಡೆಸುತ್ತಿರುವ ಮಾಹಿತಿ ಸಿಕ್ಕಿದೆ. ಎಲ್ಲ ಜಿಲ್ಲೆಗಳ ಉಪನಿರ್ದೇಶಕರಿಗೆ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

‘ಆರೋಗ್ಯ ಸಚಿವರು ನನ್ನ ಜೊತೆ ಮಾತನಾಡಿದ್ದಾರೆ. ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಅದರ ಹಿಂದೆ ಮಕ್ಕಳ ಹಿತ, ಯೋಗಕ್ಷೇಮಗಳ ಚಿಂತನೆ ಇರುತ್ತದೆ. ಸದ್ಯ, ಆರನೇ ತರಗತಿಯಿಂದ 12ನೇ ತರಗತಿಯವರೆಗೆ ಮಾತ್ರ ಶೈಕ್ಷಣಿಕ ಚಟುವಟಿಕೆ ನಡೆಯುತ್ತಿವೆ. ಒಂದರಿಂದ 5ರವರೆಗೂ ತರಗತಿ ಆರಂಭಿಸಲು ಆರೋಗ್ಯ ಇಲಾಖೆ ಸಮ್ಮತಿ ನೀಡಿಲ್ಲ. ಸರ್ಕಾರದ ಆದೇಶ ಮೀರಿ ನಿರ್ಧಾರ ಕೈಗೊಳ್ಳುವುದಕ್ಕೆ ಯಾರಿಗೂ ಅವಕಾಶವಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT