ಬುಧವಾರ, ಆಗಸ್ಟ್ 10, 2022
23 °C
ಮೈದುಂಬಿದ ಹಳ್ಳ–ಕೊಳ್ಳಗಳು: ನದಿಗಳಲ್ಲಿ ನೀರಿನ ಹರಿವು ಹೆಚ್ಚಳ l ಸೇತುವೆ ಕುಸಿತ – ಸಂಪರ್ಕ ಕಡಿತ

ರಾಜ್ಯದಲ್ಲಿ ಮುಂದುವರಿದ ಮಳೆಯ ಆರ್ಭಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ ಮುಂಗಾರಿನ ಆರ್ಭಟ ಬುಧವಾರವೂ ಮುಂದುವರಿದಿದ್ದು, ವಿವಿಧೆಡೆ ಹಳ್ಳ–ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಜಲಾಶಯಗಳಿಗೆ ಒಳಹರಿವು ಹೆಚ್ಚತೊಡಗಿದೆ.

ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ವತ್ತಿನೆಣೆ ಹೆದ್ದಾರಿಯ ಇಳಿಜಾರಿನಲ್ಲಿ ಗುಡ್ಡ ಕುಸಿದಿದ್ದರೆ, ಹಾಸನದ ಸಕಲೇಶಪುರ ತಾಲ್ಲೂಕಿನ ಹಾನುಬಾಳು –ಡೋನಹಳ್ಳಿ ಮಾರ್ಗದ ಬೆಣಗಿನಹಳ್ಳ ಸೇತುವೆ ಕುಸಿದಿದ್ದು, ಸಂಪರ್ಕ ಕಡಿತಗೊಂಡಿದೆ.

ಹುಬ್ಬಳ್ಳಿಯ ತುಮಕೂರು ಗಲ್ಲಿಯಲ್ಲಿ ಮನೆ ಗೋಡೆ ಕುಸಿದಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ.

ಮಳೆಯ ಕಾರಣ, ಕೊಡಗು ಜಿಲ್ಲೆಯಾದ್ಯಂತ ಜೂನ್ 23ರಿಂದ ಆಗಸ್ಟ್ 16ರ ತನಕ ಮರಳುಗಾರಿಕೆ, ಮರದ ದಿಮ್ಮಿಗಳ ಸಾಗಣೆ ಮತ್ತು ಇತರೆ ಸರಕು ಸಾಗಾಣಿಕೆಯನ್ನು ನಿರ್ಬಂಧಿಸಲಾಗಿದೆ. 

ಅಧಿಕ ಭಾರ ತುಂಬಿದ ಭಾರಿ ಸರಕು ಸಾಗಣೆ ವಾಹನಗಳು ನಿತ್ಯ ಸಂಚಾರ ಮಾಡುವುದರಿಂದ ರಸ್ತೆಯ ಬದಿಗಳ ಮಣ್ಣು ಭೂಕುಸಿತದಿಂದ ರಸ್ತೆಯ ಮೇಲೆ ಬಿದ್ದು, ಸಾಕಷ್ಟು ಅಪಘಾತಗಳಿಗೆ ಕಾರಣವಾಗುತ್ತದೆ. ಹೀಗಾಗಿ ಹಲವು ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಗುಡ್ಡಕುಸಿತ (ಮಂಗಳೂರು ವರದಿ): ಉಡುಪಿ ಜಿಲ್ಲೆಯ ಶಿರೂರು- ಬೈಂದೂರು ನಡುವಿನ ವತ್ತಿನೆಣೆ ಹೆದ್ದಾರಿಯ ಇಳಿಜಾರಿನಲ್ಲಿ ಮಂಗಳವಾರ ರಾತ್ರಿ ಗುಡ್ಡ ಕುಸಿದ ಪರಿಣಾಮ ಹೆದ್ದಾರಿ ಮೇಲೆ ಮಣ್ಣು ಬಿದ್ದಿತ್ತು. ಬುಧವಾರ ಬೆಳಿಗ್ಗೆ ಹೆದ್ದಾರಿ ಗುತ್ತಿಗೆದಾರ ಐಆರ್‌ಬಿ ಕಂಪನಿಯು ಜೆಸಿಬಿ ಮೂಲಕ ಹೆದ್ದಾರಿ ಮೇಲೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಿತು. ಕೆಲಕಾಲ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಬಂಟ್ವಾಳ ತಾಲ್ಲೂಕಿನಲ್ಲಿ ಹಲವೆಡೆ ಮನೆ ಮತ್ತು ಅಡಿಕೆ ತೋಟಗಳಿಗೆ ಹಾನಿಯಾಗಿದೆ. ಕಡೇಶಿವಾಲಯ ಗ್ರಾಮದ ಬಳಿ ದೊಡ್ಡ ಗೋಳಿಮರ ಉರುಳಿದ್ದು, 5 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಗಾಳಿಗೆ ವಿವಿಧೆಡೆ ಮರಗಳು ಬಿದ್ದಿವೆ. ಕೊಟ್ಟಿಗೆಹಾರ ಸಮೀಪದ ನಿಡುವಾಳೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಕಮಾನಿನ ಮೇಲೆ ಮರ ಬಿದ್ದು ಹಾನಿಯಾಗಿದೆ. ಬಿನ್ನಡಿ
ಭಾಗದಲ್ಲಿ ಧರೆ ಕುಸಿದು ರಸ್ತೆಗೆ ಬಿದ್ದಿದೆ. ಕೊಪ್ಪ ತಾಲ್ಲೂಕಿನ ಶೆಟ್ಟಿಹಡ್ಲು
ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದು, ಚಾವಣಿ ಹಾನಿಯಾಗಿದೆ. ಭದ್ರಾ, ಹೇಮಾವತಿ, ತುಂಗಾ ನದಿಗಳು ಮೈದುಂಬಿಕೊಂಡಿವೆ.

ಸೇತುವೆ ಕುಸಿತ (ಮೈಸೂರು ವರದಿ): ಹಾಸನದ ಸಕಲೇಶಪುರ ತಾಲ್ಲೂಕು ಹಾನುಬಾಳು– ಡೋನಹಳ್ಳಿ ಮಾರ್ಗದ ಬೆಣಗಿನಹಳ್ಳದ ಮಣ್ಣಿನ ಸೇತುವೆ ಕುಸಿದಿದ್ದು, ಸಂಪರ್ಕ ಕಡಿತಗೊಂಡಿದೆ.

ಕಳೆದ ವರ್ಷವೂ ಮಳೆಯಿಂದ ಸೇತುವೆ ಕೊಚ್ಚಿ ಹೋಗಿತ್ತು. ಡೋನಹಳ್ಳಿ ಗ್ರಾಮಸ್ಥರೇ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಿದ್ದರು. ಈಗ ಮತ್ತೆ ಸೇತುವೆ ಕುಸಿದಿದ್ದರಿಂದ, ಜಮೀನು ಹಾಗೂ ಇತರೆ ಕೆಲಸಗಳಿಗೆ ಜನರು, 10 ಕಿ.ಮೀ ಸುತ್ತಿ ಹಾನುಬಾಳಕ್ಕೆ ಬರುವಂತಾಗಿದೆ. ಸಕಲೇಶಪುರ ತಾಲ್ಲೂಕಿನ ಕೆಲ ಮನೆಗಳು ಹಾನಿಗೊಳಗಾಗಿವೆ. ಆಲೂರು ತಾಲ್ಲೂಕಿನ ಹಲವೆಡೆ ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ.

ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಮಂಗಳವಾರ ರಾತ್ರಿ ಬಿದ್ದ ಮಳೆಯ ಪರಿಣಾಮ ಪಟ್ಟಣದ ಖಾಸಗಿ ಬಸ್‌ ನಿಲ್ದಾಣದ ಬಳಿ ರಸ್ತೆ ಬದಿಯ ಮಣ್ಣಿನ ತಡೆಗೋಡೆ ಕುಸಿದಿದೆ. ಕೊಡ್ಲಿಪೇಟೆ ಹೋಬಳಿಯ ಚಿಕ್ಕಬಂಡಾರ ಗ್ರಾಮದ ಮನೆಯೊಂದರ ಮೇಲೆ ಮರ ಬಿದ್ದು, ಹಾನಿಯಾಗಿದೆ. 

ಗೋಡೆ ಕುಸಿತ (ಹುಬ್ಬಳ್ಳಿ ವರದಿ): ಮಳೆಯಿಂದಾಗಿ ಹುಬ್ಬಳ್ಳಿಯ ತುಮಕೂರು ಗಲ್ಲಿಯಲ್ಲಿ ಮನೆ ಗೋಡೆ ಕುಸಿದಿದೆ. ಮನೆಯವರೆಲ್ಲರೂ ಸಂಬಂಧಿಕರ ಊರಿಗೆ ಹೋಗಿದ್ದರಿಂದ ಯಾವುದೇ ಪ್ರಾಣಾಪಾಯ
ಸಂಭವಿಸಿಲ್ಲ.

ಬೆಳಗಾವಿ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಸತತ ಮಳೆಯಿಂದಾಗಿ ಬೆಳಗಾವಿಯ ಬಾಗವಾನ್ ಗಲ್ಲಿಯ ಮನೆಯ ಗೋಡೆ ಕುಸಿದಿದೆ.

ಘಟಪ್ರಭಾ ನದಿಗೆ ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಬಳಿ ನಿರ್ಮಿಸಿರುವ ಜಲಾಶಯಕ್ಕೆ ಒಳಹರಿವು ಆರಂಭವಾಗಿದೆ. ಬುಧವಾರ ಬೆಳಿಗ್ಗೆ 7,558 ಕ್ಯುಸೆಕ್ ಒಳಹರಿವು ಇತ್ತು. ಮಳೆಯಿಂದಾಗಿ, ಅಲ್ಲಲ್ಲಿ ಹಳ್ಳ–ಕೊಳ್ಳಗಳು ತುಂಬಿ ಹರಿಯುತ್ತಿವೆ. ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಉತ್ತರ ಕನ್ನಡ, ಬಳ್ಳಾರಿ, ಗದಗ, ವಿಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಮಳೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು