ಶನಿವಾರ, ಸೆಪ್ಟೆಂಬರ್ 18, 2021
30 °C
ಮೂವರು ಸಾವು l ಸೇತುವೆಗಳು ಮುಳುಗಡೆ, ಭೂಕುಸಿತ l ಜನಜೀವನ ಅಸ್ತವ್ಯಸ್ತ

ಮುಂದುವರಿದ ಮಳೆಯ ಅಬ್ಬರ: ಮೂವರು ಸಾವು, ಸೇತುವೆಗಳು ಮುಳುಗಡೆ, ಭೂಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬಿಟ್ಟೂಬಿಡದ ಮಳೆಯಿಂದಾಗಿ ಕೃಷ್ಣ, ಮಲಪ್ರಭಾ, ಘಟಪ್ರಭಾ, ತುಂಗಾ, ತುಂಗಭದ್ರಾ, ಕಾವೇರಿ, ಲಕ್ಷ್ಮಣತೀರ್ಥ ಸೇರಿದಂತೆ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿವೆ. ಸೇತುವೆಗಳ ಮುಳುಗಡೆ, ಗುಡ್ಡಗಳ ಕುಸಿತ, ಬೆಳೆಗಳ ಹಾನಿ, ರಸ್ತೆ, ಗ್ರಾಮಗಳು ಜಲಾವೃತವಾಗಿರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತ ಗೊಂಡಿದೆ. 

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕೆಗೆ ಹೋದವರಲ್ಲಿ ಇಬ್ಬರು ಮೃತರಾಗಿದ್ದರೆ, ಇನ್ನಿಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಚಿಕ್ಕಮಗಳೂರು ತಾಲ್ಲೂಕಿನ ಕ್ಯಾತನಬೀಡು ಗ್ರಾಮದಲ್ಲಿ ಕೊಟ್ಟಿಗೆಮನೆ ಕುಸಿದು ಒಬ್ಬರು ಮೃತಪಟ್ಟಿದ್ದಾರೆ.

ಚಿಕ್ಕೋಡಿ ಹೊರವಲಯದ ರಾಮನಗರ ಬಳಿ ರಭಸವಾಗಿ ಹರಿಯುತ್ತಿರುವ ಹಳ್ಳದಲ್ಲಿ ಬಾಲಕಿ ಕೊಚ್ಚಿಕೊಂಡು ಹೋದ ಘಟನೆ ಶುಕ್ರವಾರ ನಡೆದಿದೆ.

ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಗ್ರಾಮಗಳು ಜಲಾವೃತಗೊಂಡಿವೆ. ಮನೆಗಳು ಕುಸಿದಿವೆ. ಕಬ್ಬು, ಭತ್ತ, ಜೋಳ, ಕಡಲೆ, ಹೆಸರು ಸೇರಿದಂತೆ ಹಲವು ಬೆಳೆಗಳು ನೀರಿನಲ್ಲಿ ಮುಳುಗಿವೆ. ಪಂಪ್‌ಸೆಟ್‌ಗಳು ಕೊಚ್ಚಿ ಹೋಗಿವೆ. ನದಿ ದಂಡೆಯ ಜನರ ಬದುಕು ಬೀದಿಗೆ ಬಂದಿದೆ. ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. 2019ರ ನೆರೆಯನ್ನು ಪುನಃ ನೆನಪಿಸುವಂತಾಗಿದೆ.

ನೆರೆಯ ಮಹಾರಾಷ್ಟ್ರದ ಕೊಂಕಣ ಪ್ರದೇಶ, ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದು ಕೃಷ್ಣಾ ಹಾಗೂ ಅದರ ಉಪನದಿಗಳ ಹರಿವಿನ ಪ್ರಮಾಣದಲ್ಲಿ ಹೆಚ್ಚಾಗುತ್ತಲಿದೆ. ಇದೇ ರೀತಿ ಕೇರಳದ ವೈನಾಡಿನಲ್ಲಿಯೂ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯದ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಮುಂಬೈ ಕರ್ನಾಟಕ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ ಸೇರಿದಂತೆ ರಾಜ್ಯದ ವಿವಿಧೆಡೆ ಧಾರಾಕಾರ ಮಳೆ ಮುಂದುವರಿದಿದೆ. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ 52 ಸೆ.ಮೀ. ದಾಖಲೆ ಮಳೆಯಾ
ಗಿದೆ. ಇಲ್ಲಿ 2019ರ ಆ.3ರಂದು 41 ಸೆಂ.ಮೀ. ಮಳೆ ದಾಖಲಾಗಿತ್ತು.

ಸಂಚಾರ ಸ್ಥಗಿತ: ಆಲಮಟ್ಟಿ, ನಾರಾಯಣಪುರ, ತುಂಗಾ, ಕಬಿನಿ ಜಲಾಶಯಗಳಿಂದ ಭಾರೀ ಪ್ರಮಾಣದಲ್ಲಿ ನೀರುಹೊರಬಿಡಲಾಗುತ್ತಿದೆ. ಹಲವು ಕಡೆಗ ಳಲ್ಲಿ ಸೇತುವೆಗಳು ಮುಳುಗಿರುವುದ ರಿಂದ, ಸುತ್ತು–ಬಳಸಿ ಸಂಚರಿಸ ಬೇಕಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ನಿಪ್ಪಾಣಿ ತಾಲ್ಲೂಕಿನ ಯಮಗರ್ಣಿ ಬಳಿ ಪುಣೆ–ಬೆಂಗಳೂರು ರಸ್ತೆ ಜಲಾವೃತವಾಗಿದೆ. ಬೆಳಗಾವಿ–ಚೋರ್ಲಾ ರಾಜ್ಯ ಹೆದ್ದಾರಿಯಲ್ಲಿ ಭೂ ಕುಸಿತವಾಗಿರುವುದರಿಂದ ಗೋವಾಕ್ಕೆ ತೆರಳುವ ಮಾರ್ಗಗಳಲ್ಲಿ ಸಂಚಾರ ಸ್ಥಗಿತವಾಗಿದೆ. 

ಭೂ ಕುಸಿತ: ರೈಲ್ವೆ ಪ್ರಯಾಣಿಕರ ಪರದಾಟ

ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯ ದೂದ್‌ಸಾಗರ ಬಳಿ ರೈಲ್ವೆ ಮಾರ್ಗದಲ್ಲಿ ಎರಡು ಕಡೆ ಭೂಕುಸಿತವಾಗಿದೆ. ರೈಲಿನಲ್ಲಿದ್ದ ಪ್ರಯಾಣಿಕರನ್ನು ಬಸ್ ಮೂಲಕ ಕಳುಹಿಸಿವ ವ್ಯವಸ್ಥೆ ಮಾಡಲಾಗಿದೆ.

ಮಂಗಳೂರು- ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದು ಹಳಿ ತಪ್ಪಿದೆ. ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಅವರನ್ನು ಬೇರೆ ಬೋಗಿಗಳಿಗೆ ಸ್ಥಳಾಂತರಿಸಲಾಗಿದೆ.

ಹಜರತ್ ನಿಜಾಮುದ್ದೀನ್- ವಾಸ್ಕೊ ಡ ಗಾಮಾ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೂ ಅಡ್ಡಿಯಾಗಿದೆ.

ತಾಳಗುಪ್ಪ ರೈಲು ಸಂಚಾರ ರದ್ದು: ಸಾಗರ ತಾಲ್ಲೂಕು ಕಾನ್ಲೆ ಬಳಿ ರೈಲು ಹಳಿಯ ಮೇಲೆ ನೀರು ನಿಂತಿರುವ ಕಾರಣ ತಾಳಗುಪ್ಪ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಮೈಸೂರು–ತಾಳಗುಪ್ಪ ರೈಲು ತಾಳಗುಪ್ಪ ಸಂಚಾರ ರದ್ದುಪಡಿಸಿದ್ದು, ಸಾಗರದಿಂದಲೇ ಮರಳಿದೆ. ಮಳೆ ಕಡಿಮೆಯಾಗುವವರೆಗೂ ರಾತ್ರಿ ರೈಲುಗಳ ಸಂಚಾರವೂ ಸಾಗರಕ್ಕೆ ಕೊನೆಯಾಗಲಿವೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಿರಾಡಿಘಾಟ್ ಸಂಚಾರ ನಿರ್ಬಂಧ

ಹಾಸನ: ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಶಿರಾಡಿಘಾಟ್ ರಸ್ತೆಯಲ್ಲಿ ಶುಕ್ರವಾರದಿಂದ ಎಲ್ಲ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ಶಿರಾಡಿಘಾಟ್‌ನಲ್ಲಿ ರಸ್ತೆ ತೀವ್ರವಾಗಿ ಕುಸಿತವಾಗಿದ್ದು, ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಪರ್ಯಾಯ ಮಾರ್ಗಗಳ ಮೂಲಕ ವಾಹನಗಳು ಸಂಚರಿಸುತ್ತಿವೆ.

ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ಮಾರ್ಗದಲ್ಲಿ (ಎನ್‌.ಎಚ್‌–173) ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಲಘು ವಾಹನಗಳು ಹಗಲಿನಲ್ಲಿ ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಮೈಸೂರು ಜಿಲ್ಲೆಯ ಕಪಿಲಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಸ್ನಾನ ಘಟ್ಟದಲ್ಲಿ ಸ್ನಾನ ಮಾಡುವುದು ಹಾಗೂ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ ವತಿಯಿಂದ ನಡೆಸಲಾಗುತ್ತಿದ್ದ ಮುಡಿ ಸೇವೆ ರದ್ದು ಮಾಡಲಾಗಿದೆ ಎಂದು ದೇವಾಲಯ ಪ್ರಕಟಣೆ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು