ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಮಳೆ: ಬೆಳೆ ನಷ್ಟ, ಮನೆಗಳಿಗೆ ಹಾನಿ

ಉತ್ತರ ಕರ್ನಾಟಕದ ವಿವಿಧೆಡೆ ಬೆಳೆ ನಷ್ಟ l ಹಾವೇರಿ: 567 ಮನೆಗಳಿಗೆ ಹಾನಿ l ಶಿರಸಿ: 1,840 ಹೆಕ್ಟೇರ್ ಭತ್ತದ ಬೆಳೆ ನಾಶ
Last Updated 19 ನವೆಂಬರ್ 2021, 20:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ, ಹಾವೇರಿ, ವಿಜಯನಗರ, ಉತ್ತರ ಕನ್ನಡ ಸೇರಿದಂತೆಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ, ಬಹಳಷ್ಟು ಕಡೆಗಳಲ್ಲಿ ಈರುಳ್ಳಿ, ಮೆಣಸಿನಕಾಯಿ, ಭತ್ತದ ಬೆಳೆಗಳಿಗೆ ಹಾನಿಯಾಗಿವೆ.

ಹಾವೇರಿಯಲ್ಲಿ ಒಂದೇ ದಿನ ಜಿಲ್ಲೆಯಾದ್ಯಂತ 567 ಮನೆಗಳು, ವಿಜಯನಗರ ಜಿಲ್ಲೆಯಲ್ಲಿ 65 ಮನೆಗಳಿಗೆ ಹಾನಿಯಾಗಿವೆ. ಹುಬ್ಬಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಒಂಬತ್ತು ಮನೆಗಳು ಭಾಗಶಃ ಕುಸಿದಿದ್ದು, ಒಟ್ಟಾರೆ 1331 ಹೆಕ್ಟೇರ್‌ನಲ್ಲಿ ಬೆಳೆ ಹಾಳಾಗಿದೆ.

‘ಧಾರವಾಡ ಜಿಲ್ಲೆಯಲ್ಲಿ ಮೂರು ದಿನದಿಂದ ಮಳೆಯಾಗುತ್ತಿದ್ದು, ವಾಡಿಕೆಗಿಂತ ಹೆಚ್ಚುವರಿ 16.7ಸೆಂ.ಮೀ. ಮಳೆಯಾಗಿದೆ. ಮಳೆಯಿಂದ 28 ಕಿ.ಮೀ. ರಸ್ತೆ ಹಾಳಾಗಿವೆ. 7,390 ಹೆಕ್ಟೇರ್‌ನಲ್ಲಿ ಕೃಷಿ ಬೆಳೆ, 1,210 ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆ ಹಾನಿಗೀಡಾಗಿವೆ.ನವೆಂಬರ್‌ನಲ್ಲಿ ಈವರೆಗೆ 22 ಮನೆಗಳಿಗೆ ಸಂಪೂರ್ಣ, 188 ಮನೆಗಳಿಗೆ ಭಾಗಶಃ ಹಾನಿಯಾಗಿದೆ’ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ತಿಳಿಸಿದ್ದಾರೆ.

‘ನ. 23ರವರೆಗೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮಳೆ ಹಾನಿ ತಡೆಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕು ಚೌಡಯ್ಯದಾನಪುರದಲ್ಲಿ ಭತ್ತದ ರಾಶಿಗೆ ನೀರು ನುಗ್ಗಿದೆ. ಅತಿವೃಷ್ಟಿಯಿಂದ 18,665 ಹೆಕ್ಟೇರ್‌ ಕೃಷಿ ಬೆಳೆ, 230 ಹೆಕ್ಟೇರ್‌ ತೋಟಗಾರಿಕಾ ಬೆಳೆ ನಾಶವಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. 4,799 ಹೆಕ್ಟೇರ್‌ನಲ್ಲಿ ಭತ್ತದ ಬೆಳೆ ನಾಶವಾಗಿದೆ.

ರಟ್ಟೀಹಳ್ಳಿ ತಾಲ್ಲೂಕಿನ ಹಳ್ಳೂರ ಗ್ರಾಮದಲ್ಲಿ ಮಳೆಯಿಂದ ಹಾನಿಯಾದ ಜಮೀನುಗಳಿಗೆ ಕೃಷಿ ಸಚಿವ
ಬಿ.ಸಿ.ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ಎನ್‌ಡಿಆರ್‌ಎಫ್‌ ಮೂಲಕ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ –24, ಕೂಡ್ಲಿಗಿಯಲ್ಲಿ 17, ಕೊಟ್ಟೂರು–16, ಹಗರಿಬೊಮ್ಮನಹಳ್ಳಿ–5, ಹೊಸಪೇಟೆ ತಾಲ್ಲೂಕಿನಲ್ಲಿ 3 ಮನೆಗಳು ಭಾಗಶಃ ಕುಸಿದಿವೆ. ಯಾವುದೇ ಪ್ರಾಣ ಹಾನಿಯಾಗಿಲ್ಲ.

ಹೊಸಪೇಟೆ ತಾಲ್ಲೂಕಿನ ವಿವಿಧೆಡೆ ಈರುಳ್ಳಿ, ಮೆಣಸಿನಕಾಯಿ ಬೆಳೆ, ಹೂವಿನಹಡಗಲಿಯಲ್ಲಿ 200 ಎಕರೆಗೂ ಹೆಚ್ಚು ಪ್ರದೇಶದಲ್ಲಿನ ಭತ್ತ ನೆಲಕಚ್ಚಿದೆ. ಇನ್ನಷ್ಟೇ ಸಮೀಕ್ಷೆ ನಡೆಯಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ನಿರಂತರ ಮಳೆ ಮುಂದುವರಿದಿದೆ.‘ಶಿರಸಿ, ಮುಂಡಗೋಡ, ಹಳಿಯಾಳ ಮತ್ತು ಹೊನ್ನಾವರ ಭಾಗದಲ್ಲಿ ಭತ್ತ ಬೆಳೆಗೆ ಹೆಚ್ಚು ಹಾನಿಯಾಗಿದೆ. 1,840.76 ಹೆಕ್ಟೇರ್ ಪ್ರದೇಶಕ್ಕೆ ನಷ್ಟವಾಗಿದೆ’ ಎಂದು ಕೃಷಿ ಇಲಾಖೆ ಉಪನಿರ್ದೇಶಕ ನಟರಾಜ್ ತಿಳಿಸಿದ್ದಾರೆ.

ಬೆಳಗಾವಿ ನಗರ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸಾಧಾರಣ ಮಳೆ ಬಿದ್ದಿದೆ. ಬೆಳಗಾವಿ, ಖಾನಾಪುರ ಹಾಗೂ ಕಿತ್ತೂರು ಭಾಗದಲ್ಲಿ ಭತ್ತದ ಒಕ್ಕಣೆಗೆ ಹಾಗೂ ಕೊಯ್ಲಿಗೆ ತೊಂದರೆಯಾಗಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯಲ್ಲಿ ಜಿಟಿಜಿಟಿ ಮಳೆಯಾಗಿದೆ.

ಗದಗ ಜಿಲ್ಲೆಯಾದ್ಯಂತ ಮಳೆಗೆ ಅಪಾರ ಬೆಳೆ ಹಾನಿಯಾಗಿದೆ. ಕೆಲವೆಡೆ ಮನೆಗಳು ಕುಸಿದು ಬಿದ್ದಿವೆ. ಗದಗ ತಾಲ್ಲೂಕಿನ ಮುಳಗುಂದದಲ್ಲಿ 2 ಮನೆಗಳು ಹಾಗೂ ಮಲ್ಲಸಮುದ್ರ ಗ್ರಾಮದಲ್ಲಿ 1 ಮನೆ ಮಳೆಯಿಂದಾಗಿ ಹಾನಿಗೊಂಡಿದೆ ಎಂದು ಗದಗ ತಹಶೀಲ್ದಾರ್‌ ಕಿಶನ್‌ ಕಲಾಲ್‌ ತಿಳಿಸಿದ್ದಾರೆ.

ಸ್ಮಾರಕಗಳು ಭಾಗಶಃ ಮುಳುಗಡೆ

ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಹಂಪಿ ಸ್ನಾನಘಟ್ಟ, ಚಕ್ರತೀರ್ಥ, ವಿಜಯನಗರ ಕಾಲದ ಕಾಲು ಸೇತುವೆ, ಪುರಂದರ ಮಂಟಪ ಸ್ಮಾರಕಗಳು ಭಾಗಶಃ ಮುಳುಗಡೆಯಾಗಿವೆ.

ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿರುವುದರಿಂದ ಹೆಚ್ಚುವರಿ ನೀರು ನದಿಗೆ ಹರಿಸಲಾಗುತ್ತಿದೆ. 50 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರು ನದಿಗೆ ಹರಿಸಲಾಗುತ್ತಿದೆ. 1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ಪೂರ್ಣ ತುಂಬಿದೆ. 12 ಕ್ರಸ್ಟ್‌ಗೇಟ್‌ಗಳಿಂದ ನೀರು ಹರಿಸಲಾಗುತ್ತಿದೆ. ನದಿ ಪಾತ್ರ ಜನ ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ.

ಇಂದು ಶಾಲೆಗಳಿಗೆ ರಜೆ

ಮುಂದುವರಿದ ಮಳೆಯಿಂದಾಗಿ ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ನ.20ರಂದು ಎಲ್ಲ ಶಾಲೆ ಮತ್ತು ಕಾಲೇಜುಗಳಿಗೆ ಜಿಲ್ಲಾಡಳಿತ ಒಂದು ದಿನ ರಜೆ ಘೋಷಿಸಿದೆ.

ವಿದ್ಯುತ್‌ ಸ್ಪರ್ಶ ರೈತ ಸಾವು

ಹಾವೇರಿ: ಮಳೆಯಿಂದಾಗಿ ತಮ್ಮ ಜಮೀನಿನಲ್ಲಿ ನೆಲಕ್ಕುರುಳಿದ್ದ ವಿದ್ಯುತ್ ಬೋರ್ಡ್‌ ಇದ್ದ ತಗಡಿನ ಶೆಡ್ ಸರಿಪಡಿಸಲು ಹೋದ ಹಾವೇರಿ ಜಿಲ್ಲೆಯ ಹಂಸಭಾವಿಯ ಬೆಟಕೇರೂರಿನ ರೈತ ರಮೇಶ ನಾಗಪ್ಪ ಆರೀಕಟ್ಟಿ (37) ಎಂಬುವವರು ವಿದ್ಯುತ್ ಹರಿದು ಶುಕ್ರವಾರ ಮೃತಪಟ್ಟಿದ್ದಾರೆ.

ಬಳ್ಳಾರಿ: ಬೆಳೆ ಹಾನಿ

ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಹೆಕ್ಟೇರ್‌ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ನಡೆಸಿದ ಪ್ರಾಥಮಿಕ ಸಮೀಕ್ಷೆಯಿಂದ ಖಚಿತವಾಗಿದೆ.

1,550 ಹೆಕ್ಟೇರ್‌ ಭತ್ತ, 1,200 ಹೆಕ್ಟೇರ್‌ ಕಡ್ಲೆ ಸೇರಿದಂತೆ 10 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿದ್ದ ಬೆಳೆ ನಷ್ಟವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಮಲ್ಲಿಕಾರ್ಜುನ್‌ ತಿಳಿಸಿದರು.

ಮೂರು ದಿನದಿಂದ ಸಮೀಕ್ಷೆ ಆರಂಭಿಸಲಾಗಿದೆ. ಸಿರುಗುಪ್ಪ, ಕಂಪ್ಲಿ, ಕುರುಗೋಡು ಮತ್ತು ಬಳ್ಳಾರಿ ತಾಲ್ಲೂಕುಗಳಲ್ಲಿ ಬೆಳೆ ಹಾನಿಯಾಗಿದೆ. ಸಮೀಕ್ಷೆ ಮುಂದುವರಿದಿದ್ದು ಬೆಳೆ ಹಾನಿ ಪ್ರಮಾಣ ಇನ್ನೂ ಹೆಚ್ಚಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT