ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಮಳೆ: ಮನೆಗಳು ಜಲಾವೃತ, ರಸ್ತೆಯಲ್ಲಿ ಬಿರುಕು

ಕರಾವಳಿ, ಮಲೆನಾಡಿನಲ್ಲಿ ಬಿರುಸಿನ ಮಳೆ l ಹಲವೆಡೆ ತಗ್ಗು ಪ್ರದೇಶಗಳು ಮುಳುಗಡೆ l ಮಣ್ಣಿನಡಿ ಸಿಲುಕಿದ ಕಾರುಗಳು
Last Updated 11 ಸೆಪ್ಟೆಂಬರ್ 2020, 17:49 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿ ಮತ್ತು ಮಲೆನಾಡಿನಲ್ಲಿ ಶುಕ್ರವಾರ ಮಳೆ ಬಿರುಸಾಗಿದ್ದು, ಸತತ ಎರಡನೇ ದಿನವೂ ಮಳೆಯ ಅಬ್ಬರ ಮುಂದುವರಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು 21 ಸೆಂ.ಮೀ. ಮಳೆ ಸುರಿದಿದೆ. ಜಪ್ಪಿನಮೊಗರು ಹಾಗೂ ಇತರ ಪ್ರದೇಶಗಳ 150 ಮನೆಗಳಿಗೆ ಮಳೆ ನೀರು ನುಗ್ಗಿದೆ. 8 ಅಡಿಗಳಷ್ಟು ನೀರಿನಲ್ಲಿ ಸಿಲುಕಿದ್ದ 12 ಮಂದಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ತಲುಪಿಸಲಾಗಿದೆ. ದೇರೆಬೈಲ್‌ನ ಅಪಾರ್ಟ್‌ಮೆಂಟ್‌ನ ಕಾಂಪೌಂಡ್‌ ಕುಸಿದು 10ಕ್ಕೂ ಹೆಚ್ಚು ಕಾರುಗಳು ಮಣ್ಣಿನಡಿ ಸಿಲುಕಿವೆ. ಉಳ್ಳಾಲ ಭಾಗದಲ್ಲಿ ಹಲವು ಮನೆಗಳು ಜಲಾವೃತಗೊಂಡಿವೆ.

ಮಂಗಳೂರಿನ ಕೊಟ್ಟಾರ ಚೌಕಿ, ಅಳಕೆ, ಅಶೋಕ್ ನಗರ, ಪಾಂಡೇಶ್ವರ ಭಾಗದಲ್ಲಿನ ತಗ್ಗು ಪ್ರದೇಶಗಳು ಮುಳುಗಡೆಯಾಗಿದೆ. ಕುಂಟಿಕಾನ ಬಳಿ ಬೋಂದೆಲ್‌ಗೆ ತೆರಳುವ ರಸ್ತೆಯ ಪಕ್ಕದಲ್ಲಿ ಭೂಕುಸಿತ ಉಂಟಾಗಿ, ರಸ್ತೆ ಹಾನಿಯಾಗಿದೆ.

ಮೂಲ್ಕಿಯಲ್ಲಿ ಗರಿಷ್ಠ 30 ಸೆಂ.ಮೀ ಮಳೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ರಾಜ್ಯದಲ್ಲೇ ಗರಿಷ್ಠ 30 ಸೆಂ. ಮಳೆಯಾಗಿದೆ. ಉಡುಪಿ
ಜಿಲ್ಲೆಯಲ್ಲೂ ಬಿರುಸಿನ ಮಳೆಯಾಗಿದ್ದು, ಉಡುಪಿ ತಾಲ್ಲೂಕಿನ ಇನ್ನಂಜೆಯಲ್ಲಿ ಗರಿಷ್ಠ 28.1 ಸೆಂ.ಮೀ, ಹಾಗೂ ಬಡಾನಿಡಿಯೂರಿನಲ್ಲಿ 27.6 ಸೆಂ.ಮೀ ಮಳೆ ಬಿದ್ದಿದೆ. ಕುಂದಾಪುರ, ಕಾರ್ಕಳ, ಬೈಂದೂರು, ಹೆಬ್ರಿ, ಬ್ರಹ್ಮಾವರ, ಕಾಪು ತಾಲ್ಲೂಕುಗಳಲ್ಲಿ ಮಳೆ ಜೋರಾಗಿದೆ. ಮುದ್ರಾಡಿಯಲ್ಲಿ ಹಲವು ಮನೆಗಳು ಕುಸಿದಿವೆ.

ರಸ್ತೆ ಕುಸಿತ: ಚಿಕ್ಕಮಗಳೂರು ತಾಲ್ಲೂಕಿನ ಹಿರೇಮಗಳೂರು ದೊಡ್ಡ ಕೆರೆ ಏರಿಯಲ್ಲಿ ರಸ್ತೆ ಕುಸಿದಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಕೆರೆ ಏರಿಯಲ್ಲಿ ರಸ್ತೆ ಮಧ್ಯದಲ್ಲಿ ಸುಮಾರು 50 ಅಡಿ ಕುಸಿದಿದೆ. ಏರಿ ಒಡೆದರೆ ಕೆರೆಯ ಪಕ್ಕದಲ್ಲಿನ ತೋಟ, ಜಮೀನುಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಟ್ಟಿಗೆಹಾರ ಭಾಗದಲ್ಲಿ ಬಿರುಸಾಗಿ ಸುರಿದಿದೆ. ಕೊಟ್ಟಿಗೆಹಾರದಲ್ಲಿ 7.8 ಸೆಂ.ಮೀ ಮಳೆಯಾಗಿದೆ.

ಬೆಳಗಾವಿ, ಶಿರಸಿ, ಕಾರವಾರ, ಹುಬ್ಬಳ್ಳಿ–ಧಾರವಾಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದ್ದು, ಗದಗ ಜಿಲ್ಲೆಯ ನರಗುಂದದಲ್ಲಿ ಧಾರಾಕಾರ ಮಳೆಯಾಗಿದೆ.

ಪತ್ತೆಯಾಗದ ಶವ: ಬಳ್ಳಾರಿಯ ಕಂಪ್ಲಿ ತಾಲ್ಲೂಕಿನ ಶ್ರೀರಾಮರಂಗಾಪುರ ಗ್ರಾಮದಲ್ಲಿ ತಾತ್ಕಾಲಿಕ ಸೇತುವೆ ದಾಟುವಾಗ ಕಾಲುಜಾರಿ ಬಿದ್ದು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವ ಶುಕ್ರವಾರವೂ ಪತ್ತೆಯಾಗಲಿಲ್ಲ. ಶೋಧ ಕಾರ್ಯ ಮುಂದುವರಿದಿದೆ.‌

ರಾಯಚೂರು ಮತ್ತು ಬೀದರ್ ಜಿಲ್ಲೆಯಲ್ಲಿ ಶುಕ್ರವಾರ ಉತ್ತಮ ಮಳೆ ಯಾಯಿತು. ರಾಯಚೂರು ಜಿಲ್ಲೆಯ ಲಿಂಗಸುಗೂರು, ಹಟ್ಟಿ, ದೇವದುರ್ಗ ಮತ್ತು ಜಾಲಹಳ್ಳಿಯಲ್ಲಿ ಮಳೆಯಾಯಿತು.

ಹಟ್ಟಿ ಚಿನ್ನದಗಣಿಯಲ್ಲಿ ಗುರುವಾರ ರಾತ್ರಿ ಸುರಿದ ಮಳೆಯಿಂದ ಗುರುಗುಂಟಾ ವೆಂಕಟೇಶ್ವರ ದೇವಸ್ಧಾನದ ಆವರಣವು ಜಲಾವೃತಗೊಂಡಿತು. ಮನೆಗಳಲ್ಲೂ ನೀರು ನುಗ್ಗಿತು. ಮಸ್ಕಿ ತಾಲ್ಲೂಕಿನ ದೋತರಬಂಡಿ ಸೇತುವೆ ಕೊಚ್ಚಿಹೋಗಿದೆ.

ಮಡಿಕೇರಿ ವರದಿ: ಕೊಡಗು ಜಿಲ್ಲೆಯ ಮಡಿಕೇರಿ, ಭಾಗಮಂಡಲ, ತಲಕಾವೇರಿ, ನಾಪೋಕ್ಲು ಸೇರಿದಂತೆ ವಿವಿಧೆಡೆ ಶುಕ್ರವಾರ ಧಾರಾಕಾರ ಮಳೆಯಾಗಿದೆ.

ಸಮುದ್ರದಲ್ಲಿ 44 ಗಂಟೆ ಸಿಲುಕಿದ್ದ 24 ಮೀನುಗಾರರ ರಕ್ಷಣೆ

ಮಂಗಳೂರು: ಭಟ್ಕಳ ತೀರದಿಂದ 17 ನಾಟಿಕಲ್ ಮೈಲಿ ದೂರದಲ್ಲಿ ಸಮುದ್ರದಲ್ಲಿ ಸಿಲುಕಿದ್ದ 24 ಮೀನುಗಾರರನ್ನು ಶುಕ್ರವಾರ ರಕ್ಷಣೆ ಮಾಡಲಾಗಿದೆ.

ಮೀನುಗಾರಿಕೆಗೆ ತೆರಳಿದ್ದ ‘ಖಮರುಲ್ ಬಹಾರ್’ ಹೆಸರಿನ ಬೋಟ್, ಎಂಜಿನ್ ವೈಫಲ್ಯದಿಂದ ಸಮುದ್ರದಲ್ಲಿ ಸಿಲುಕಿತ್ತು. ಗುರುವಾರ ರಾತ್ರಿ 8 ಗಂಟೆಗೆ ಬೋಟ್ ಮಾಲೀಕರು ಮೀನುಗಾರಿಕೆ ಇಲಾಖೆಯ ಕಾರವಾರ ಜಿಲ್ಲಾ ಉಪ ನಿರ್ದೇಶಕರಿಗೆ ಮಾಹಿತಿ ನೀಡಿ, ರಕ್ಷಣೆಗೆ ಮನವಿ ಮಾಡಿದ್ದರು. ಈ ಬಗ್ಗೆ ಉಪನಿರ್ದೇಶಕರು, ಕರಾವಳಿ ಕಾವಲು ಪಡೆಗೆ ಮಾಹಿತಿ ರವಾನಿಸಿದ್ದರು.

ಸಮುದ್ರದಲ್ಲಿ ಗಸ್ತಿನಲ್ಲಿದ್ದ ಕಸ್ತೂರಬಾ ಗಾಂಧಿ ಹಡಗಿನೊಂದಿಗೆ ಕಾರ್ಯಪ್ರವೃತ್ತರಾದ ಕರಾವಳಿ ಕಾವಲು ಪಡೆ ಸಿಬ್ಬಂದಿ, ಬೋಟ್‌ನಲ್ಲಿರುವವರನ್ನು ಸಂಪರ್ಕಿಸಿ, ಮಾಹಿತಿ ಪಡೆದರು. ಸ್ಥಳಕ್ಕೆ ತೆರಳಿ, ಮೀನುಗಾರರನ್ನು ರಕ್ಷಣೆ ಮಾಡಲಾಯಿತು. ಸುಮಾರು 44 ಗಂಟೆ ಸಮುದ್ರದಲ್ಲಿದ್ದ ಮೀನುಗಾರರಿಗೆ ಆಹಾರ, ಔಷಧಿಗಳನ್ನು ನೀಡಲಾಯಿತು. ನಂತರ ಮೀನುಗಾರರು ಹಾಗೂ ಬೋಟ್ ಅನ್ನು ಭಟ್ಕಳದ ಸಮುದ್ರ ತೀರಕ್ಕೆ ತರಲಾಯಿತು. ‘ಸಮುದ್ರ ಪ್ರಕ್ಷುಬ್ಧ
ವಾಗಿದ್ದು, ಕರಾವಳಿ ಕಾವಲು ಪಡೆ ನಿರಂತರ ಗಸ್ತು ನಡೆಸುತ್ತಿದೆ’ ಎಂದು ಕರಾವಳಿ ಕಾವಲು ಪಡೆ ಡಿಐಜಿ ವೆಂಕಟೇಶ್‌ ತಿಳಿಸಿದ್ದಾರೆ.

ಭದ್ರಾ ಜಲಾಶಯ ಭರ್ತಿಗೆ ಒಂದೂವರೆ ಅಡಿ ಬಾಕಿ

ಶಿವಮೊಗ್ಗ: ನಾಲ್ಕೈದು ದಿನಗಳಿಂದ ಜಿಲ್ಲೆಯ ಕೆಲವೆಡೆ ಆಗಾಗ್ಗೆ ಉತ್ತಮ ಮಳೆಯಾಗುತ್ತಿದ್ದು, ಭದ್ರಾ ಜಲಾಶಯ ಭರ್ತಿಯಾಗಲು ಒಂದೂವರೆ ಅಡಿ ಬಾಕಿ ಇದೆ.

186 ಅಡಿ ನೀರು ಸಂಗ್ರಹ ಸಾಮರ್ಥ್ಯದ ಭದ್ರಾ ಜಲಾಶಯದ ನೀರಿನ ಮಟ್ಟ 184.10 ಅಡಿಗೆ ತಲುಪಿದೆ. ತೀರ್ಥಹಳ್ಳಿಯಲ್ಲಿ ಕಡಿಮೆ ಮಳೆಯಾಗುತ್ತಿರುವ ಕಾರಣ ತುಂಗಾ ಜಲಾಶಯದ ಒಳಹರಿವು ಕಡಿಮೆಯಾಗಿದೆ. 6 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣ ನೀರನ್ನು ಹೊರಬಿಡಲಾಗುತ್ತಿದೆ. ತೀರ್ಥಹಳ್ಳಿ, ಸೊರಬ, ಹೊಸನಗರ ದಲ್ಲಿ ಆಗಾಗ್ಗೆ ಸಾಧಾರಣ ಮಳೆಯಾಗಿದೆ.

ಕರಾವಳಿಯಲ್ಲಿ ಎರಡು ದಿನ ಭಾರಿ ಮಳೆ

ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ನೈರುತ್ಯ ಮುಂಗಾರು ಬಿರುಸುಗೊಂಡಿರುವುದರಿಂದ ಸೆ.12 ಮತ್ತು 13ರಂದು ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆಯ ತೀವ್ರತೆ ಹೆಚ್ಚಾಗಿದ್ದ ಕಾರಣ ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಶುಕ್ರವಾರ ‘ರೆಡ್ ಅಲರ್ಟ್’ ಘೋಷಿಸಲಾಗಿತ್ತು. ಶನಿವಾರ ಬೆಳಿಗ್ಗೆವರೆಗೆ ಅಲರ್ಟ್ ಮುಂದುವರಿಯಲಿದೆ. ಬಳಿಕ, ಮಳೆ ತುಸು ಕಡಿಮೆಯಾಗುವ ನಿರೀಕ್ಷೆಯಿದ್ದು, ಸೆ.13ರಂದು ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಸಿದೆ.

ಬೆಳಗಾವಿ, ಬೀದರ್, ಧಾರವಾಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ ಜಿಲ್ಲೆಗಳಲ್ಲೂ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.

ಮಳೆ-ಎಲ್ಲಿ,ಎಷ್ಟು?: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಗರಿಷ್ಠ 30 ಸೆಂ.ಮೀ ಮಳೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣ 26, ಪಣಂಬೂರು 23, ಮೂಡುಬಿದರೆ, ಕುಂದಾಪುರ, ಕಾರ್ಕಳ 13, ಬೆಳ್ತಂಗಡಿ 12, ಭಟ್ಕಳ 7, ಉಡುಪಿ 6, ಭಾಗಮಂಡಲ 5, ವಿರಾಜಪೇಟೆ 4, ಬೈಲಹೊಂಗಲ, ಕಂಪ್ಲಿ 3, ಪುತ್ತೂರು, ಸುಳ್ಯ, ಮೂಡಿಗೆರೆ 2, ಉಪ್ಪಿನಂಗಡಿ, ಹುಕ್ಕೇರಿ, ಚಿತ್ರದುರ್ಗ, ಹಿರಿಯೂರು, ಪಾವಗಡ, ಗುಬ್ಬಿ, ಕೊಪ್ಪದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT