ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ತಾಲ್ಲೂಕುಗಳಲ್ಲಿ ವ್ಯಾಪಕ ಮಳೆ: ಹೆದ್ದಾರಿ ಮೇಲೆ ಗುಡ್ಡ ಕುಸಿತ

ವಿಜಯನಗರ, ಗದಗದಲ್ಲೂ ಬಿರುಸಿನ ಮಳೆ: ರೈತರಲ್ಲಿ ಖುಷಿ
Last Updated 1 ಜುಲೈ 2022, 3:00 IST
ಅಕ್ಷರ ಗಾತ್ರ

ಕಾರವಾರ: ಉತ್ತರ ಕನ್ನಡದ ಎಲ್ಲ ಐದು ಕರಾವಳಿ ತಾಲ್ಲೂಕುಗಳಲ್ಲಿ ಗುರುವಾರ ದಿನವಿಡೀ ವ್ಯಾಪಕ ಮಳೆಯಾಗಿದೆ. ತಡರಾತ್ರಿ ಶುರುವಾರ ವರ್ಷಧಾರೆ ಸಂಜೆಯವರೆಗೂ ಮುಂದುವರಿದಿತ್ತು. ಬಹುತೇಕ ಸಮಯ ಜಿಟಿಜಿಟಿಯಾಗಿ, ಆಗಾಗ ಜೋರಾಗಿ ಸುರಿಯಿತು.

ಅಂಕೋಲಾ–11.6 ಸೆ.ಮೀ, ಹೊನ್ನಾವರ–11.3 ಸೆ.ಮೀ ಹಾಗೂ ಕಾರವಾರದಲ್ಲಿ 9.1 ಸೆ.ಮೀ ಮಳೆ ದಾಖಲಾಗಿದೆ.

ಭಟ್ಕಳ ತಾಲ್ಲೂಕಿನ ಶಿರಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಮೇಲೆ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ಚತುಷ್ಪಥ ಕಾಮಗಾರಿಯ ವೇಳೆ ಚರಂಡಿಗಳನ್ನು ಮುಚ್ಚಿದ್ದರಿಂದ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ತಾಲ್ಲೂಕಿನಲ್ಲಿ ಮೂರು ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಹೊನ್ನಾವರ ತಾಲ್ಲೂಕಿನ ಕರ್ಕಿ, ಚಿಕ್ಕನಕೋಡ ಹಾಗೂ ಭಾಸ್ಕೇರಿ ಗ್ರಾಮಗಳಲ್ಲಿ ತಲಾ ಒಂದು ಮನೆಗಳ ಮೇಲೆ ಮರಗಳು ಬಿದ್ದಿದ್ದು, ಭಾಗಶಃ ಹಾನಿಯಾಗಿದೆ. ಯಾವುದೇ ಜೀವಾಪಾಯವಾಗಿಲ್ಲ. ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಹೊನ್ನಾವರ– ಗೇರುಸೊಪ್ಪ ನಡುವೆ ಖರ್ವಾ ಕ್ರಾಸ್ ಹತ್ತಿರ ಗುಡ್ಡ ಕುಸಿತವಾಗಿದೆ. ಮಣ್ಣು ಹೆದ್ದಾರಿಯ ಒಂದು ಭಾಗದಲ್ಲಿದ್ದು, ವಾಹನ ಸಂಚಾರಕ್ಕೆ ಅಷ್ಟಾಗಿ ಅಡಚಣೆಯಾಗಿಲ್ಲ.

ಗೋಕರ್ಣದಲ್ಲಿ ಮಹಾಬಲೇಶ್ವರ ದೇವರ ಗರ್ಭಗುಡಿಯಲ್ಲಿಯೂ ಸ್ವಲ್ಪ ಹೊತ್ತು ನೀರು ನಿಂತಿತ್ತು. ಹಾಗಾಗಿ ಮಧ್ಯಾಹ್ನದ ಮಹಾಪೂಜೆ ತಡವಾಗಿ ನೆರವೇರಿತು. ರಥಬೀದಿಯಲ್ಲಿ ಸುಮಾರು ಎರಡು ಅಡಿಗಳಷ್ಟು ನೀರು ಹರಿದು ಕೆಲವು ಮನೆಗಳಿಗೆ ಹೊಕ್ಕಿತ್ತು.

ಪುರಾಣ ಪ್ರಸಿದ್ಧ ಮಾಣೇಶ್ವರ ದೇವಸ್ಥಾನದ ಕೆಳಗೆ ಬ್ರಹ್ಮ ತೀರ್ಥದ ಗೋಡೆ ಕುಸಿದಿದೆ.

ಹೊಸಪೇಟೆಯಲ್ಲಿ ಬಿರುಸಿನ ಮಳೆ: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಿರುಸಿನ ಮಳೆಯಾಗಿದೆ. ಹೊಸಪೇಟೆ ನಗರ ಸೇರಿದಂತೆ ತಾಲ್ಲೂಕಿನ ಹಂಪಿ, ಕಮಲಾಪುರ, ಹೊಸೂರು, ಸಂಕ್ಲಾಪುರ, ಇಂಗಳಗಿಯಲ್ಲಿ ವರ್ಷಧಾರೆಯಾಗಿದೆ. ಒಂದು ತಿಂಗಳಿಂದ ಮಳೆಯಾಗಿರಲಿಲ್ಲ. ಹೀಗಾಗಿ ಬಿತ್ತನೆ ಸ್ಥಗಿತಗೊಂಡಿತ್ತು. ಗುರುವಾರ ಸುರಿದ ಮಳೆಯಿಂದ ರೈತರು ಖುಷಿಗೊಂಡಿದ್ದಾರೆ.

ಗದಗ ಜಿಲ್ಲೆಯ ರೋಣ ಮತ್ತು ನರಗುಂದ ತಾಲ್ಲೂಕು ಕೇಂದ್ರದಲ್ಲಿ ಅರ್ಧ ತಾಸಿಗೂ ಹೆಚ್ಚು ಮಳೆ ಸುರಿಯಿತು.

ಕೊಪ್ಪಳ ನಗರ ಸೇರಿದಂತೆ ಗಂಗಾವತಿ ತಾಲ್ಲೂಕಿನ ಆನೆಗೊಂದಿ, ಚಿಕ್ಕರಾಂಪುರ, ಹನುಮನಹಳ್ಳಿ, ಸಾಣಾಪುರ ಗ್ರಾಮದಲ್ಲಿ ಮೂರು ಗಂಟೆ ಸಾಧಾರಣ ಮಳೆಯಾಯಿತು. ಯಾದಗಿರಿ ನಗರದಲ್ಲೂ ಮಳೆ ಸುರಿಯಿತು.

ಕೊಡಗು; ತುಂಬಿ ಹರಿಯುತ್ತಿರುವ ಹಳ್ಳ, ತೊರೆಗಳು
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುರುವಾರ ಧಾರಾಕಾರ ಮಳೆ ಸುರಿದಿದ್ದು, ಕಾವೇರಿ ಸೇರಿದಂತೆ ಹಲವು ನದಿಗಳಿಗೆ ಹೆಚ್ಚಿನ ನೀರು ಹರಿದಿದೆ. ನದಿ, ತೊರೆ, ತೋಡುಗಳು ತುಂಬಿ ಹರಿಯುತ್ತಿವೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ,ಭೇತ್ರಿಯಲ್ಲಿ ನೀರಿನ ಮಟ್ಟ ಹೆಚ್ಚಿದೆ.

ಹಾರಂಗಿ ಜಲಾಶಯಕ್ಕೆ 1,743 ಕ್ಯುಸೆಕ್‌ಗೆ ನೀರಿನ ಒಳಹರಿವು ಹೆಚ್ಚಾಗಿದೆ. 2,859 ಗರಿಷ್ಠ ಅಡಿಯ ಜಲಾಶಯದಲ್ಲಿ ಈಗಾಗಲೇ 2,854 ಅಡಿಗಳಷ್ಟು ನೀರು ತುಂಬಿದೆ.

ಶನಿವಾರಸಂತೆಸಮೀಪದದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬತ್ತಿದ್ದ ಕಾಜೂರು ಹೊಳೆ,ವಿರಾಜಪೇಟೆಯ ಕದನೂರು ಹೊಳೆ ತುಂಬಿದೆ. ‌ಸೋಮವಾರಪೇಟೆ ಸಮೀಪದ ಮಲ್ಲಹಳ್ಳಿ ಜಲಪಾತಕ್ಕೂ ಹೆಚ್ಚು ನೀರು ಹರಿದು ಬರುತ್ತಿದೆ. ಎಲ್ಲೆಡೆ ಕೃಷಿ ಚಟುವಟಿಕೆಗಳೂ ಬಿರುಸುಗೊಂಡಿವೆ.

‘ಮುಂದಿನ 24 ಗಂಟೆಗಳ ಅವಧಿಯಲ್ಲಿ ಸಾಮಾನ್ಯಕ್ಕಿಂತಲೂ ಅಧಿಕ ಮಳೆಯಾಗುವ ಸಾಧ್ಯತೆ ಇದೆ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT