ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ, ಮಲೆನಾಡಲ್ಲಿ ಧಾರಾಕಾರ ಮಳೆ:ಮಂಗಳೂರು ಏರ್‌ಪೋರ್ಟ್ ರಸ್ತೆಯ ಸೇತುವೆ ಬಿರುಕು

ಮುಂದುವರಿದ ಮಳೆ: ಹೊಳೆಗೆ ಬಿದ್ದು ವ್ಯಕ್ತಿ ಸಾವು
Last Updated 15 ಜೂನ್ 2021, 20:29 IST
ಅಕ್ಷರ ಗಾತ್ರ

ಮಂಗಳೂರು/ಹುಬ್ಬಳ್ಳಿ/ಶಿವಮೊಗ್ಗ: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಂಗಳವಾರವೂ ಧಾರಾಕಾರ ಮಳೆ ಸುರಿದಿದ್ದು, ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಉಡುಪಿ ಜಿಲ್ಲೆಯಲ್ಲಿಮಂಗಳವಾರ ಹೊಳೆಗೆ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮರವೂರು ಬಳಿ ಫಲ್ಗುಣಿ ನದಿಗೆ ನಿರ್ಮಿಸಿದ್ದ ಸೇತುವೆ ಬಿರುಕು ಬಿಟ್ಟಿದ್ದು, ಕುಸಿಯುವ ಭೀತಿ ಎದುರಾಗಿದೆ.

ಸೇತುವೆಯ ಒಂದು ಭಾಗದ ಪಿಲ್ಲರ್ ಕುಸಿದು ಸೇತುವೆಗೆ ಹಾನಿಯಾಗಿದ್ದು, ರಸ್ತೆ ಸಂಚಾರ ಸಂಪೂರ್ಣ ಸ್ಥಗಿತ
ಗೊಳಿಸಲಾಗಿದೆ. ಈ ಸೇತುವೆಯ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣವಾಗುತ್ತಿದ್ದು, ಕಾಮಗಾರಿ ನಿರ್ವಹಿಸಲು ನೀರಿಗೆ ತಡೆಗೋಡೆ ಕಟ್ಟಲಾಗಿತ್ತು. ಇದರಿಂದ ನದಿಯ ನೀರು ಒಂದೇ ಭಾಗಕ್ಕೆ ಹರಿದು ಸೇತುವೆಗೆ ಅಪಾಯ ಎದುರಾಗಿದೆ.

‘ಸೇತುವೆ ನಸುಕಿನ ಜಾವ 3 ಗಂಟೆಗೆ ಕುಸಿದಿದೆ. ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್‌ ಎನ್‌. ಶಶಿಕುಮಾರ್ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಶಿರೂರು ಗ್ರಾಮದ ಸಂಕದಗುಂಡಿ ಹೊಳೆಗೆ ಕಾಲು ಜಾರಿ ಬಿದ್ದು ಅಬ್ದುಲ್ ರಹೀಂ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು, ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆ ಗ್ರಾಮದಲ್ಲಿ 12 ಮನೆಗಳಿಗೆ ಹಾನಿಯಾಗಿದೆ. ‌ಮೂಡುತೋನ್ಸೆ, ಮುಂಡ್ಕೂರು, ಮಡಾಮಕ್ಕಿ, ನಾವುಂದ, ನಾಲ್ಕೂರು, ಯಡ್ತಾಡಿ, ಮಣೂರು ಗ್ರಾಮಗಳಲ್ಲಿ ಮನೆಗಳು ಕುಸಿದಿವೆ.‌ ಗಾಳಿ ಮಳೆಗೆ ಬಾಳೆ ಹಾಗೂ ಅಡಿಕೆ ತೋಟಗಳಿಗೆ ಹಾನಿಯಾಗಿದೆ.

ಚಿಕ್ಕಮಗಳೂರಿನಲ್ಲಿ ಆರ್ಭಟ: ಚಿಕ್ಕಮಗಳೂರು ಜಿಲ್ಲೆಯ ಕಳಸ ಭಾಗದ ಸಂಸೆ ಸಮೀಪದ ಎಡಮುರ ಗ್ರಾಮದಲ್ಲಿ ಕೊಟ್ಟಿಗೆ ಹಿಂಬದಿಯ ದಿಬ್ಬದ ಮಣ್ಣು ಕುಸಿದು ಹಾನಿ ಸಂಭವಿಸಿದೆ.

ಬಣಕಲ್‌ ಬಳಿಯ ಅತ್ತಿಗೆರೆಯಲ್ಲಿ ಮನೆ ಮೇಲೆ ತೆಂಗಿನ ಮರ ಬಿದ್ದು ಚಾವಣಿ ಮುರಿದಿದೆ. ಮೂಡಿಗೆರೆ ತಾಲ್ಲೂಕಿನ ಜನ್ನಾಪುರ ಭಾಗದಲ್ಲಿ 15 ಹಾಗೂ ದಾರದಹಳ್ಳಿ ಪ್ರದೇಶದಲ್ಲಿ 6 ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನಲ್ಲಿ 16 ವಿದ್ಯುತ್ ಕಂಬಗಳು, ಮೂರು ಪರಿವರ್ತಕಗಳು, ಅಂಕೋಲಾದಲ್ಲಿ ಎರಡು ವಿದ್ಯುತ್ ಕಂಬಗಳು, ಎರಡು ಪರಿವರ್ತಕಗಳು ಮಳೆಯಿಂದ ಹಾನಿಗೀಡಾಗಿವೆ.

ಸಿದ್ದಾಪುರ ತಾಲ್ಲೂಕಿನ ನಿಲ್ಕುಂದ ಗ್ರಾಮದ ಮುಂಡಿಗೆ ಜಡ್ಡಿಯಲ್ಲಿ ಮರ ಬಿದ್ದು ವಿದ್ಯುತ್ ಕಂಬ ಮುರಿದಿದೆ. ಹೊನ್ನಾವರ ತಾಲ್ಲೂಕಿನ ವಿವಿಧೆಡೆ ಐದು ಮನೆಗಳಿಗೆ ಹಾನಿಯಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಿಂಗನಮಕ್ಕಿ ಒಳಹರಿವು ಹೆಚ್ಚಳ:

ಶಿವಮೊಗ್ಗ ಜಿಲ್ಲೆಯ ಹೊಸನಗರ, ತಿರ್ಥಹಳ್ಳಿ ತಾಲ್ಲೂಕು ವ್ಯಾಪಕ ಮಳೆ ಸುರಿಯುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ 13,173 ಕ್ಯುಸೆಕ್ ನೀರು ಹರಿದುಬರುತ್ತಿದೆ. ಗರಿಷ್ಠ 1,819 ಅಡಿ ನೀರಿನ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯ ನೀರಿನ ಮಟ್ಟ ಮಂಗಳವಾರ 1,776.6 ಅಡಿಗೆ ತಲುಪಿದೆ.

ಭದ್ರಾ ಹಿನ್ನೀರಿನ ಪ್ರದೇಶದಲ್ಲಿ ಸಹ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಜಲಾಶಯಕ್ಕೆ 6,073 ಕ್ಯುಸೆಕ್ ನೀರು ಹರಿದುಬರುತ್ತಿದೆ. ಗರಿಷ್ಠ 186 ಅಡಿ ನೀರಿನ ಮಟ್ಟ ಹೊಂದಿರುವ ಭದ್ರಾ ಡ್ಯಾಂನಲ್ಲಿ 141.2 ಅಡಿ ನೀರು ಸಂಗ್ರಹಗೊಂಡಿದೆ. ತೀರ್ಥಹಳ್ಳಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ 7,535 ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ.

ಬೆಳಗಾವಿ, ಕೊಡಗು, ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆಯಾಗಿದೆ. ಕೊಡಗು ಜಿಲ್ಲೆಯ ಮಲ್ಲಳ್ಳಿ ಜಲಪಾತವು ಮೈದುಂಬಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT