ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಮಳೆ: ಜನ ಜೀವನ ಅಸ್ತವ್ಯಸ್ತ

ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ: ಬೆಳಗಾವಿ ಜಿಲ್ಲೆಯಲ್ಲಿ 9 ಕಡೆ ಕಾಳಜಿ ಕೇಂದ್ರ
Last Updated 23 ಜುಲೈ 2021, 18:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ, ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸತತ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜಲಾಶಯಗಳಲ್ಲಿ ನೀರು ಬಿಡುಗಡೆ ಮಾಡಿರುವುದರಿಂದ ಬಾಗಲಕೋಟೆ, ವಿಜಯಪುರ, ಹಾವೇರಿ ಜಿಲ್ಲೆಗಳ ನದಿಪಾತ್ರದ ಗ್ರಾಮಗಳು ಪ್ರವಾಹ ಭೀತಿಯನ್ನು ಎದುರಿಸುತ್ತಿವೆ.

ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಅಬ್ಬರ ಶುಕ್ರವಾರವೂ ಮುಂದುವರಿದಿದ್ದು, ಜನ ಜೀವನ ತತ್ತರಗೊಂಡಿದೆ. ಕೃಷ್ಣಾ, ವೇದಗಂಗಾ, ದೂಧ್‌ಗಂಗಾ, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹದ ಭೀತಿ ಎದುರಾಗಿದೆ.

ನೆರೆಯ ಮಹಾರಾಷ್ಟ್ರದ ಕೊಂಕಣ ಮತ್ತು ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ನದಿ ಜಲಾನಯನ ಪ್ರದೇಶಗಳಲ್ಲಿ ವರುಣನ ಆರ್ಭಟ ಹೆಚ್ಚಿದೆ. ಚಿಕ್ಕೋಡಿ ತಾಲ್ಲೂಕಿನ ಸದಲಗಾ-ಬೋರಗಾಂವ ಸೇತುವೆ ಮುಳುಗಡೆಯಾಗಿದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯ
ದಿಂದ ಹೊರಬಿಡಲಾದ 10ಸಾವಿರ ಕ್ಯುಸೆಕ್, ದೂಧ್‌ಗಂಗಾ ನದಿಯಿಂದ 34,320 ಕ್ಯುಸೆಕ್ ಮತ್ತು ರಾಜಾಪುರ ಬ್ಯಾರೇಜ್‌ನಿಂದ ಬರುತ್ತಿರುವ 1.21 ಲಕ್ಷ ಕ್ಯುಸೆಕ್ ಸೇರಿ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 1.56 ಲಕ್ಷ ಕ್ಯುಸೆಕ್ ನೀರು ಸೇರುತ್ತಿದೆ. ಪ್ರವಾಹ ಭೀತಿಯೂ ಹೆಚ್ಚಾಗತೊಡಗಿದೆ. ರಾಯಬಾಗ ತಾಲ್ಲೂಕಿನ ಕುಡಚಿ-
ಉಗಾರ ಸೇತುವೆ ಮೇಲೆ ನೀರು ಹರಿಯು
ತ್ತಿದ್ದು, ಸಂಪರ್ಕ ಕಡಿತಗೊಂಡಿದೆ.

ಖಾನಾಪುರ ತಾಲ್ಲೂಕಿನ ಕಣಕುಂಬಿಯಲ್ಲಿ ದಾಖಲೆಯ 52 ಸೆಂ.ಮೀ. ಮಳೆ ಆಗಿದೆ. ಇಲ್ಲಿ 2019ರಆ.3ರಂದು41ಸೆಂ.ಮೀ. ಮಳೆದಾಖಲಾಗಿತ್ತು. ಈ ವಿಷಯವನ್ನು ಬೆಳಗಾವಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ‘ಪ್ರಜಾವಾಣಿ’ಗೆ ಖಚಿತಪಡಿಸಿದರು.

ಬೆಳಗಾವಿ–ಚೋರ್ಲಾ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತದ ಕಾರಣ ಕರ್ನಾಟಕ-ಗೋವಾ ನಡುವೆ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಖಾನಾಪುರ ತಾಲ್ಲೂಕಿನ ಹಬ್ಬಾನಟ್ಟಿ ಹೊರವಲಯದ ಮಲಪ್ರಭಾ ನದಿ ದಂಡೆಯಲ್ಲಿರುವ ಆಂಜನೇಯ ದೇವಸ್ಥಾನ ಸಂಪೂರ್ಣ ಮುಳುಗಿದೆ. ಖಾನಾಪುರ ಪಟ್ಟಣ ಸಂಪರ್ಕಿಸುವ ಎಲ್ಲ ದಿಕ್ಕುಗಳ ರಸ್ತೆಗಳು ಕೂಡ ಬಂದ್ ಆಗಿವೆ. ಖಾನಾಪುರದಲ್ಲಿ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿಯೊಬ್ಬರು ಮೃತರಾದರು. ಲೋಂಡಾ ಗ್ರಾಮದಲ್ಲಿ ಪಾಂಡರಿ ನದಿಯ ಪ್ರವಾಹದ ಕಾರಣ ಸಂತ್ರಸ್ತರಿಗೆ ಲೋಂಡಾ ರೈಲು ನಿಲ್ದಾಣದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ನದಿ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿದರು.

ಭಾರಿ ಮಳೆಯಿಂದಾಗಿ ವೇದಗಂಗಾ ನದಿ ಉಕ್ಕಿ ಹರಿಯುತ್ತಿದ್ದು, ನಿಪ್ಪಾಣಿ ತಾಲ್ಲೂಕಿನ ಯಮಗರ್ಣಿ ಗ್ರಾಮದ ಬಳಿಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಂಚಾರ ಬಂದ್‌ ಮಾಡಲಾಗಿದೆ. ಕಾರು ಹಾಗೂ ಲಾರಿ ನೀರಿನಲ್ಲಿ ಸಿಲುಕಿದ್ದು, ಆ ವಾಹನಗಳಲ್ಲಿದ್ದ ಎಂಟು ಮಂದಿಯನ್ನು ರಕ್ಷಿಸಲಾಗಿದೆ.

ಹುಕ್ಕೇರಿ ತಾಲ್ಲೂಕಿನ ಹಿರಣ್ಯಕೇಶಿ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ಸಂಕೇಶ್ವರದ ಮಠ ಗಲ್ಲಿಯ ಮನೆಗಳಿಗೆ ನೀರು ನುಗ್ಗಿದೆ. ಜನರನ್ನು ಎನ್‌ಡಿಆರ್‌ಎಫ್‌ ತಂಡದವರು ಮತ್ತು ಪೊಲೀಸರು ರಕ್ಷಿಸಿ ಸ್ಥಳಾಂತರಿಸಿದರು. 5 ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ನಿಪ್ಪಾಣಿ ತಾಲ್ಲೂಕಿನ ಕೊಡ್ನಿ ಗ್ರಾಮಕ್ಕೆ ಚಿಕುತ್ರಾ ನದಿ ನೀರು ನುಗ್ಗಿದ್ದು, ಅಲ್ಲಿನ 300 ಮಂದಿಯನ್ನು ಎನ್‌ಡಿಆರ್‌ಎಫ್‌ ತಂಡದವರು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಸಂತ್ರಸ್ತರಿಗೆ 26 ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ಗೋಕಾಕ ತಾಲ್ಲೂಕಿನ ಕುಂದರಗಿ ಆಡುಸಿದ್ದೇಶ್ವರ ಮಠದಲ್ಲಿ ಸಿಲುಕಿದ್ದ ಸ್ವಾಮೀಜಿ ಮತ್ತು ನಾಲ್ವರನ್ನು ಎಸ್‌ಡಿಆರ್‌ಎಫ್‌ ತಂಡದವರು ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ, ರಕ್ಷಿಸಿದರು.

ಮಲಪ್ರಭಾ ಹಾಗೂ ಘಟಪ್ರಭಾ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡುವ ಸಾಧ್ಯತೆ ಇದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನದಿ ತೀರದ ಗ್ರಾಮಗಳ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

ಬೆಳಗಾವಿ ತಾಲ್ಲೂಕಿನ ಬೆನಕನಹಳ್ಳಿ–ಬೆಳಗುಂದಿ–ರಕ್ಕಸಕೊಪ್ಪ ರಸ್ತೆ ಜಲವೃತವಾಗಿದ್ದು, ಸಂಚಾರ ಬಂದ್ ಆಗಿದೆ.

ಅಪಾಯಮಟ್ಟ ಮೀರಿ ಹರಿಯುತ್ತಿರುವ ನದಿಗಳು

ಬಾಗಲಕೋಟೆ, ಹಾವೇರಿ : ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯ ಪರಿಣಾಮ ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಅಪಾಯದ ಮಟ್ಟಮಟ್ಟ ಮೀರಿ ಹರಿಯುತ್ತಿವೆ.

ಘಟಪ್ರಭಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಮಹಾಲಿಂಗಪುರ–ಮಿರ್ಜಿ ನಡುವಿನ ಸೇತುವೆ, ಬೆಳಗಾವಿ–ಬಾಗಲಕೋಟೆ ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುವ ಮುಧೋಳ ತಾಲ್ಲೂಕಿನ ಢವಳೇಶ್ವರ ಹಾಗೂ ಜಾಲಿಬೇರ ಸೇತುವೆ ಮುಳುಗಡೆಯಾಗಿವೆ. ಇದರಿಂದ ಸಂಪರ್ಕ ಕಡಿತಗೊಂಡಿದೆ.

ಹಾವೇರಿ ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೆರೆ–ಕಟ್ಟೆಗಳು ತುಂಬಿ, ವರದಾ, ಕುಮದ್ವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.

ರಾಣೆಬೆನ್ನೂರು ತಾಲ್ಲೂಕಿನ ಹಿರೇಮಾಗನೂರು ಗ್ರಾಮದ ಹತ್ತಿರ ಕುಮದ್ವತಿ ನದಿ ತುಂಬಿ ಹರಿಯುತ್ತಿರುವುದರಿಂದ ಸೇತುವೆ ಮುಳುಗಡೆಯಾಗಿ ಹಿರೇಮಾಗನೂರು ದಂಡಗೀಹಳ್ಳಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಟ್ಟೀಹಳ್ಳಿ– ಎಲಿವಾಳ ಗ್ರಾಮಗಳ ಮಧ್ಯೆ ಕುಮದ್ವತಿ ನದಿ ಸೇತುವೆ ಮೇಲೆ ಹರಿಯುತ್ತಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.

ರಟ್ಟೀಹಳ್ಳಿ ತಾಲ್ಲೂಕು ತಿಪ್ಪಾಯಿಕೊಪ್ಪದ ಬಳಿ ಸೇತುವೆ ಜಲಾವೃತವಾಗಿದ್ದು, ಮಾಸೂರು– ಶಿಕಾರಿಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಾಸೂರು–ಹಿರೇಮೊರಬ ನಡುವಿನ ರಸ್ತೆ ಜಲಾವೃತವಾಗಿದೆ. ಮದಗ ಮಾಸೂರು ಕೆರೆ ಕೋಡಿ ಬಿದ್ದಿದೆ.

ಸವಣೂರ ತಾಲ್ಲೂಕು ಕಳಸೂರು– ದೇವಗಿರಿ ಮಾರ್ಗವಾಗಿ ಹಾವೇರಿ ನಗರವನ್ನು ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಮುಳುಗಡೆಯಾಗಿದೆ. ಹಾನಗಲ್‌ ತಾಲ್ಲೂಕು ತಿಳವಳ್ಳಿ ಸಮೀಪದ ಯತ್ತಿನಹಳ್ಳಿ ಗ್ರಾಮದ ನಾಗರ ಹಳ್ಳವು ತುಂಬಿ ಹರಿಯುತ್ತಿರುವುದರಿಂದ ಸೇತುವೆ ಮುಳುಗಡೆಯಾಗಿದ್ದು, ತಿಳವಳ್ಳಿ ಹಾಗೂ ಆನವಟ್ಟಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ನಾಲ್ವರು ನೀರುಪಾಲು

ಕಾರವಾರ: ಶಿರಸಿ ತಾಲ್ಲೂಕಿನ ಚಿನ್ನಾಪುರ ಕೆರೆ ನೀರಿನ ಸೆಳೆತಕ್ಕೆ ಸಿಲುಕಿ ಹುಸರಿ ಗ್ರಾಮದ ಗಂಗಾಧರ ಗೌಡ (28) ಮೃತಪಟ್ಟಿದ್ದಾರೆ. ಹೊನ್ನಾವರ ತಾಲ್ಲೂಕಿನ ಮಾಳ್ಕೋಡ ಗ್ರಾಮದ ಬಳಿ ಶರಾವತಿ ನದಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ದೋಣಿಯೊಂದು ಭಾರಿ ಗಾಳಿ ಮಳೆಗೆ ಮುಳುಗಿದೆ. ಅದರಲ್ಲಿದ್ದ ಮಾದೇವಿ ಅಂಬಿಗ (46) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅವರ ಪತಿ ಸುಬ್ರಾಯ ಅಂಬಿಗ (55) ಈಜಿ ದಡ ಸೇರಿದ್ದಾರೆ.

ಅಂಕೋಲಾದ ‌ಶಿರೂರಿನಲ್ಲಿ ದೋಣಿಯಲ್ಲಿ ನದಿ ದಾಟುವಾಗ ಮಹಿಳೆ ಬೀರು ಗೌಡ (65) ಮತ್ತು ಗಂಗಾಧರ ಗೌಡ (30) ನೀರುಪಾಲಾಗಿದ್ದಾರೆ.

ಕೂರ್ವೆ ದ್ವೀಪದ ಮೇಲೆ ಗಂಗಾವಳಿ ನದಿ ನೀರು ಹರಿಯಲು ಆರಂಭಿಸಿದಾಗ, ಅಲ್ಲಿದ್ದವರು ದೋಣಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಬರುತ್ತಿದ್ದರು. ಆಗ ನೀರಿನ ರಭಸಕ್ಕೆ ದೋಣಿ ಪಲ್ಟಿಯಾಗಿ ಮಹಿಳೆಯೊಬ್ಬರು ಸೇರಿದಂತೆ ಎಂಟು ಮಂದಿ ನದಿಗೆ ಬಿದ್ದರು. ಒಂದು ಗಂಟೆ ನೀರಿನಲ್ಲೇ ತೆಂಗಿನ ಮರವನ್ನು ಹಿಡಿದುಕೊಂಡು ಜೀವರಕ್ಷಣೆ ಮಾಡಿಕೊಂಡರು. ಅವರನ್ನು ಸ್ಥಳೀಯ ಮೀನುಗಾರರ ಸಹಾಯದಿಂದ ಒಂದು ತಾಸು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ.

ಪರಿಹಾರ ಕಾರ್ಯಾಚರಣೆ ಜೋರು

ಕಾರವಾರ: ಎರಡು ದಿನಗಳಿಂದ ಮಲೆನಾಡಿನಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯು ಜಿಲ್ಲೆಯಲ್ಲಿ ಜನಜೀವನವನ್ನು ಮತ್ತೆ ಬುಡಮೇಲು ಮಾಡಿದೆ. ಅಂಕೋಲಾ, ಕಾರವಾರ, ಕುಮಟಾ ತಾಲ್ಲೂಕುಗಳಲ್ಲಿ ಭಾರಿ ಪ್ರವಾಹ ಉಂಟು ಮಾಡಿದೆ.

ಕರಾವಳಿ ಮತ್ತು ಮಲೆನಾಡಿನ ನಡುವಿನ ರಸ್ತೆ ಸಂಪರ್ಕವನ್ನೇ ಕಡಿತಗೊಳಿಸಿದೆ. ಹುಬ್ಬಳ್ಳಿ, ಧಾರವಾಡ ಭಾಗದಲ್ಲಿ ಸುರಿಯುತ್ತಿರುವ ಮಳೆ ನೀರು, ಗಂಗಾವಳಿಯನ್ನು ಉಕ್ಕಿ ಹರಿಯುವಂತೆ ಮಾಡಿದೆ. ಸುಂಕಸಾಳದಲ್ಲಿ ಹೆದ್ದಾರಿಯ ಮೇಲೆ ನಾಲ್ಕೈದು ಅಡಿಗಳಷ್ಟು ಎತ್ತರಕ್ಕೆ ನೀರು ಹರಿದಿದೆ. ಇದರಿಂದ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.

ಸುಂಕಸಾಳದ ಹೋಟೆಲ್ ನವಮಿಯಲ್ಲಿ ಸಿಲುಕಿದ್ದ ಎಂಟು ಮಂದಿಯನ್ನು ನೌಕಾಪಡೆಯ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ. ಅದೇ ಹೋಟೆಲ್‌ನಲ್ಲಿದ್ದ ಉಳಿದ 24 ಮಂದಿಯನ್ನು ದೋಣಿಗಳ ಮೂಲಕ ಸುರಕ್ಷಿತ ಪ್ರದೇಶಕ್ಕೆ ಕರೆ ತರಲಾಗಿದೆ.

ಅಘನಾಶಿನಿ ನದಿಯಲ್ಲೂ ಭಾರಿ ಪ್ರವಾಹ ಬಂದಿದ್ದು, ಕುಮಟಾ ತಾಲ್ಲೂಕಿನಲ್ಲಿ ಹತ್ತಾರು ಮನೆಗಳಿಗೆ, ಕೃಷಿ ಜಮೀನಿಗೆ ನೀರು ನುಗ್ಗಿದೆ.

ಜಲಾಶಯದಿಂದ ನೀರು ಹೊರಕ್ಕೆ

ಹುಬ್ಬಳ್ಳಿ: ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯದ 10 ಗೇಟ್‌ಗಳನ್ನು ತೆರೆದು ಕಾಳಿ ನದಿಗೆ ಒಟ್ಟು 2.15 ಲಕ್ಷ ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ಇದರಿಂದ ಜಲಾಶಯದ ಕೆಳಭಾಗದಲ್ಲಿರುವ ಕದ್ರಾ, ಮಲ್ಲಾಪುರ, ಕುರ್ನಿಪೇಟೆ, ಕಿನ್ನರ ಪ್ರದೇಶಗಳು ಮುಳುಗಡೆಯಾಗಿವೆ.

ಬಾಗಲಕೋಟೆ ಜಿಲ್ಲೆಯ ರಬಕವಿ–ಬನಹಟ್ಟಿ ತಾಲ್ಲೂಕಿನ ಹಿಪ್ಪರಗಿ ಜಲಾಶಯಕ್ಕೆ 1.13 ಲಕ್ಷ ಕ್ಯೂಸೆಕ್ ನೀರು ಹರಿದುಬರುತ್ತಿದೆ. 1.12 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಯಬಿಡಲಾಗಿದೆ. ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 10 ಸಾವಿರ ಕ್ಯೂಸೆಕ್ ಹಾಗೂ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ. ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನಿವಾಸಿಗಳಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಪ್ರವಾಹದಲ್ಲಿ ಮುಳುಗಿದ ಬಸ್‌: ಪ್ರಯಾಣಿಕರ ರಕ್ಷಣೆ

ವಿಜಯಪುರ: ಜಿಲ್ಲೆಯ ಇಂಡಿ ಪಟ್ಟಣದಿಂದ ಮಹಾರಾಷ್ಟ್ರ ರಾಜ್ಯದ ರತ್ನಗಿರಿಗೆ ತೆರಳುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ವಿಭಾಗಕ್ಕೆ ಸೇರಿದ ಬಸ್‌ (ಕೆಎ 28 ಎಫ್‌ 2230) ರಾತ್ರಿ 1.30ಕ್ಕೆ ಕೊಲ್ಲಾಪುರದಿಂದ ಎರಡು ಕಿ.ಮೀ. ದೂರದಲ್ಲಿ ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿದ್ದು, ಬಸ್‌ ಸಂಪೂರ್ಣ ಮುಳುಗಿದೆ.

ಬಸ್‌ನಲ್ಲಿ ಪಯಣಿಸುತ್ತಿದ್ದ ಕರ್ನಾಟಕದ 10 ಮಂದಿ ಸೇರಿದಂತೆ ಅದರಲ್ಲಿದ್ದ 19 ಪ್ರಯಾಣಿಕರು ಹಾಗೂ ಚಾಲಕ ಶ್ರೀಶೈಲ ಬೊಲೆಗಾವ್‌, ನಿರ್ವಾಹಕ ಅಬ್ಬಾಸ್‌ ಅಲಿ ಅವರನ್ನು ಎನ್‌ಡಿಆರ್‌ಎಫ್‌ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ ಎಂದು ನಿಗಮದ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT