ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಕೆಲವೆಡೆ ಮನೆಗಳು ಕುಸಿತ, ಸೇತುವೆ ಮುಳುಗಡೆ

ಶಿವಮೊಗ್ಗದಲ್ಲಿ ಗೋಡೆ ಕುಸಿದು ಮಹಿಳೆ ಸಾವು l ಕಾಲುಸಂಕದಿಂದ ಬಿದ್ದು ಕೊಚ್ಚಿಹೋದ ಬಾಲಕಿ
Last Updated 9 ಆಗಸ್ಟ್ 2022, 5:46 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸೋಮವಾರವೂ ಮುಂದುವರಿದಿದೆ.ಹಲವೆಡೆ ಮನೆಗಳು ಕುಸಿದು ಬಿದ್ದಿವೆ. ಸೇತುವೆಗಳು ಮುಳುಗಡೆಯಾಗಿದ್ದು, ಸಂಚಾರ ಬಂದ್‌ ಆಗಿದೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಕಾಚಿಗೊಂಡನಹಳ್ಳಿಯಲ್ಲಿ ಮನೆಯ ಗೋಡೆ ಕುಸಿದು ಸುಜಾತಾ (55) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಪತಿ ಕೃಷ್ಣಮೂರ್ತಿ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಡುಪಿ ಜಿಲ್ಲೆ ಬೈಂದೂರು ಸಮೀಪದ ಕಾಲ್ತೋಡು ಗ್ರಾಮದ ಬಿಜಮಕ್ಕಿ ಬಳಿ ಸಂಜೆ ಶಾಲೆಯಿಂದ ಮನೆಗೆ ಮರಳುತ್ತಿದ್ದ ಚಪ್ಪರಿಕೆ ಸರ್ಕಾರಿ ಪ್ರಾಥಮಿಕ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ಬೊಳಂಬಳ್ಳಿ ಮಕ್ಕಿ ಮನೆಯ ಸನ್ನಿಧಿ ಪ್ರದೀಪ ಪೂಜಾರಿ (7) ಕಾಲುಸಂಕ ದಾಟುವಾಗ ಆಯ ತಪ್ಪಿ ಹಳ್ಳಕ್ಕೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾಳೆ. ಮಳೆಯಿಂದಾಗಿ ಶೋಧ ಕಾರ್ಯಕ್ಕೆ ಅಡ್ಡಿಯುಂಟಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಜಾಂಬಳೆ ಪ್ರದೇಶದಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಕಳಸ– ಕುದುರೆಮುಖ ಮಾರ್ಗದಲ್ಲಿ ಸಂಚಾರ ಬಂದ್‌ ಆಗಿದೆ. ಮೂಡಿ ಗೆರೆ ತಾಲ್ಲೂಕಿನ ಬಣಕಲ್‌ನ ಆರೋಗ್ಯ ಸಿಬ್ಬಂದಿ ವಸತಿ ಗೃಹ ಮತ್ತು ಉರ್ದು ಪ್ರಾಥಮಿಕ ಶಾಲೆ ಶೌಚಾಲಯದ ಮೇಲೆ ವೃಕ್ಷ ಉರುಳಿದೆ. ಹಾನಗಸಿ ಪ್ರದೇಶದಲ್ಲಿ ಧರೆ ಕುಸಿದಿದೆ.

ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನಲ್ಲಿರುವ ಕೃಷ್ಣದೇವರಾಯನ ಸಮಾಧಿ ಮುಳುಗುವ ಹಂತ ತಲುಪಿದೆ. ಗಂಗಾವತಿ–ಕಂಪ್ಲಿ ಸೇತುವೆ ಮೇಲೆ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.

ಬೆಳಗಾವಿಯಲ್ಲಿ ಮನೆ ಕುಸಿತ: ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ನಾಲ್ಕು ಮನೆಗಳು ಕುಸಿದಿವೆ. ಅನಗೋಳ ಎಂಬಲ್ಲಿ ಎರಡು ಅಂತಸ್ತಿನ ಕಟ್ಟಡ ನೆಲಕ್ಕುರುಳಿದೆ. ಓಂ ಹಾಗೂ ಕೇಶವ ನಗರದ ಜನವಸತಿ ಪ್ರದೇಶ ಇಡೀ ದಿನ ಜಲಾವೃತಗೊಂಡಿತ್ತು. ಚಿಕ್ಕೋಡಿಯ ನಾಲ್ಕು, ಗೋಕಾಕದ ಒಂದು ಕಿರು ಸೇತುವೆ ಮುಳುಗಡೆಯಾಗಿವೆ. ನಿಪ್ಪಾಣಿ ತಾಲ್ಲೂಕಿನ ಬಹತೇಕ ಸೇತುವೆಗಳು ಎರಡನೇ ಬಾರಿ ಜಲಾವೃತಗೊಂಡಿವೆ. ಕಾರದಗಾ-ಭೋಜ ಸೇತುವೆಯೂ ಜಲಾವೃತಗೊಂಡು ಸಂಚಾರ ಸ್ಥಗಿತ ಗೊಂಡಿದೆ. ತಾಲ್ಲೂಕಿನ ಹುನ್ನರಗಿ ಗ್ರಾಮದ ಲಕ್ಷ್ಮೀ-ನಾರಾಯಣ ಮಂದಿರ ದಲ್ಲಿ ವೇದಗಂಗಾ ನದಿ ನೀರು ನುಗ್ಗಿದೆ.

ವೇದಗಂಗಾ ಮತ್ತು ದೂಧಗಂಗಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿ ನೂರಾರು ಎಕರೆ ಬೆಳೆ ನಷ್ಟವಾಗಿದೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿ ಸಂಪರ್ಕಿಸುವ ಹೊಟ್ಯಾಪುರ ರಸ್ತೆ ಸಂಪರ್ಕ ಕಡಿತ ಗೊಂಡಿದೆ. ಬಸವಾಪಟ್ಟಣ ಸಮೀಪದ ನೆಲಹೊನ್ನೆ ತಾಂಡಾದ ಹೆದ್ದಾರಿಯಲ್ಲಿ ಭೂ ಕುಸಿತ ಉಂಟಾಗಿದೆ. ಚನ್ನಗಿರಿ ತಾಲ್ಲೂಕಿನ ಮುದಿಗೆರೆ ಗ್ರಾಮದ ದೊಡ್ಡ ಕೆರೆ ತುಂಬಿ ಕೋಡಿ ಬಿದ್ದಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಮಳೆ ಮುಂದುವರಿದಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀ ಸಾವೆಯಿಂದ ತೂಬಿನಕೆರೆ ಸಂಪರ್ಕ ರಸ್ತೆ ಹಳ್ಳದ ನೀರಿಗೆ ಕೊಚ್ಚಿ ಹೋಗಿದೆ.

ವಿಜಯಪುರ ಜಿಲ್ಲೆಯ ಆಲಮೇಲ ತಾಲ್ಲೂಕಿನ ಕಡ್ಲೇವಾಡ (ಪಿಎ) ಗ್ರಾಮದಲ್ಲಿ ಮನೆ ಚಾವಣಿ ಕುಸಿದು ವೃದ್ಧೆ ಹಾಗೂ ಬಾಲಕಿ ಮಣ್ಣಿನ ಅವಶೇಷದಡಿ ಸಿಲುಕಿ ಗಾಯಗೊಂಡಿದ್ದಾರೆ. ನವಲ ಗುಂದ ತಾಲ್ಲೂಕಿನ ಬೆಣ್ಣಿ ಹಳ್ಳ ಹಾಗೂ ತುಪ್ಪರಿ ಹಳ್ಳ ತುಂಬಿ ಹರಿಯುತ್ತಿದೆ.

ಕಂಪ್ಲಿ–ಗಂಗಾವತಿ ಸೇತುವೆಗೆ ಸಮನಾಗಿ ನೀರು ಹರಿಯುತ್ತಿರುವುದರಿಂದ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧಿಸಿದೆ. ವೆಂಕಟಾಪುರ ಕ್ಯಾಂಪ್‌ ಸಮೀಪ ತುರ್ತಾ ಉಪಕಾಲುವೆ ಒಡೆದಿದ್ದು, ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಅನೇಕ ದಿನಗಳ ಹಿಂದೆಯೇ ಹಂಪಿಯ ಸ್ನಾನಘಟ್ಟ, ಕರ್ಮ ಮಂಟಪ, ಪುರಂದರದಾಸರ ಮಂಟಪ, ಚಕ್ರತೀರ್ಥ, ವಿಜಯನಗರ ಕಾಲದ ಕಾಲು ಸೇತುವೆ ಸ್ಮಾರಕಗಳು ಮುಳುಗಿವೆ.

ಉತ್ತರ ಕನ್ನಡದ ಮುಂಡಗೋಡ ತಾಲ್ಲೂಕಿನ ಪಾಳಾದಲ್ಲಿ ದೊಡ್ಡ ಕೆರೆ ಕೋಡಿ ಬಿದ್ದಿದೆ. ಸುಮಾರು 70 ಎಕರೆ ಗದ್ದೆಯಲ್ಲಿ ನೀರು ನಿಂತಿದೆ.

ಸಂಚಾರಕ್ಕೆ ರಬ್ಬರ್‌ ದೋಣಿ ಬಳಕೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನದಿ, ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಭಾಗಮಂಡಲ–ನಾಪೋಕ್ಲು ರಸ್ತೆ ಜಲಾವೃತಗೊಂಡಿದ್ದು, ಜನಸಂಚಾರಕ್ಕೆ ರಬ್ಬರ್ ದೋಣಿಯನ್ನು ಬಳಸಲಾಗುತ್ತಿದೆ. ಮಡಿಕೇರಿ–ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಕುಂಬೂರು ಗ್ರಾಮದ ಬಳಿ ಭೂಕುಸಿತವಾಗಿದೆ. ಭಾಗಮಂಡಲ– ಕರಿಕೆ ರಸ್ತೆಯಲ್ಲಿ ಮತ್ತೆ ಭೂಮಿ ಕುಸಿದಿದೆ.

ಲಕ್ಷ್ಮಣತೀರ್ಥ ನದಿ ಪ್ರವಾಹ ಹೆಚ್ಚಾಗಿದೆ. ನದಿ ಬಯಲಿನ ಗದ್ದೆಗಳು ಜಲಾವೃತವಾಗಿವೆ. ಮಡಿಕೇರಿ– ವಿರಾಜಪೇಟೆ ಸಂಪರ್ಕಿಸುವ ಬೇತ್ರಿ ಸೇತುವೆಯಲ್ಲಿ ಕಾವೇರಿ ನದಿ ನೀರು ಅಪಾಯದಮಟ್ಟ ಮೀರಿ ಹರಿಯುತ್ತಿದ್ದರೆ, ಮಡಿಕೇರಿ ತಾಲ್ಲೂಕಿನ ಕೊಯನಾಡು ಸೇತುವೆ ಬಳಿ ಪಯಸ್ವಿನಿ ನದಿ ಭೋರ್ಗರೆಯುತ್ತಿದೆ.

ಆರು ಜಿಲ್ಲೆಗಳಲ್ಲಿ ‘ಆರೆಂಜ್‌ ಅಲರ್ಟ್‌’
ಬೆಂಗಳೂರು: ಕರಾವಳಿ ಹಾಗೂ ಒಳನಾಡು ವ್ಯಾಪ್ತಿಯ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಗುಡುಗು ಸಹಿತ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಂಗಳವಾರ ‘ಆರೆಂಜ್‌ ಅಲರ್ಟ್‌’ ನೀಡಲಾಗಿದೆ. ಬೆಳಗಾವಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT