ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿವಿಧೆಡೆ ಗುಡುಗು, ಆಲಿಕಲ್ಲು ಮಳೆ: ಬಿರುಗಾಳಿಗೆ ಧರೆಗೆ ಉರುಳಿದ ಮರಗಳು

ಬಿರುಗಾಳಿಗೆ ಧರೆಗೆ ಉರುಳಿದ ಮರಗಳು: ತೆಂಗಿನ ಮರಗಳಿಗೆ ಸಿಡಿಲು
Last Updated 18 ಏಪ್ರಿಲ್ 2021, 19:09 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಭಾನುವಾರ ಗುಡುಗು ಸಹಿತ ಮಳೆಯಾಗಿದ್ದು, ಕೆಲವೆಡೆ ಸಿಡಿಲು ಬಡಿದು ಮರಗಳಿಗೆ ಹಾನಿಯಾಗಿದೆ.

ಶಿವಮೊಗ್ಗ ನಗರದ ಪಾರ್ಕ್ ಬಡಾವಣೆಯ ಮೊದಲನೇ ತಿರುವಿನಲ್ಲಿರುವ ಖಾಸಗಿ ಹಾಸ್ಟೆಲ್ ಕಟ್ಟಡದಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಮರವು ಧಗ ಧಗ ಹೊತ್ತಿ ಉರಿದಿದೆ.

ಸಂಜೆ ವೇಳೆಗೆ ಗುಡುಗು ಸಹಿತ ಗಾಳಿಯೊಂದಿಗೆ ಮಳೆ ಆರಂಭವಾದಾಗ ಸಿಡಿಲು ತೆಂಗಿನ‌ ಮರದ ಸುಳಿಗೆ ಬಡಿದಿದೆ. 10 ನಿಮಿಷ ಬೆಂಕಿ ಹೊತ್ತಿ ಸ್ವಲ್ಪ ಹೊತ್ತು ಉರಿಯಿತು. ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ. ಭಾನುವಾರವಾದ ಕಾರಣ ಹಾಸ್ಟೆಲ್‌ನಲ್ಲಿ ಕೆಲವೇ ವಿದ್ಯಾರ್ಥಿಗಳು ಇದ್ದರು. ಯಾವುದೇ ಪ್ರಾಣಾಪಾಯ
ಸಂಭವಿಸಿಲ್ಲ.

ಶಿವಮೊಗ್ಗದಲ್ಲಿ ಒಂದು ತಾಸು ಮಳೆಯಾಗಿದ್ದು, ಶಿಕಾರಿಪುರ, ಶಿರಾಳಕೊಪ್ಪ ಭಾಗದಲ್ಲಿ ಗುಡುಗು, ಆಲಿಕಲ್ಲು ಸಹಿತ ಜೋರು ಮಳೆಯಾಗಿದೆ. ಹೊಸನಗರ, ತೀರ್ಥಹಳ್ಳಿಯಲ್ಲಿ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣವಿದ್ದು, ಸಂಜೆ ವೇಳೆ ಸಾಧಾರಣ ಮಳೆ ಸುರಿದಿದೆ. ಕೋಣಂದೂರು ಸುತ್ತಮುತ್ತ ಕೂಡ ಮಳೆಯಾಗಿದೆ. ಸಾಗರದಲ್ಲೂ ಗುಡುಗು, ಗಾಳಿ ಸಹಿತ ಮಳೆ ಸುರಿದಿದೆ.

ದಾವಣಗೆರೆ ನಗರ ಹಾಗೂ ನ್ಯಾಮತಿಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ.

ಕೊಡಗಿನ ಗೋಣಿಕೊಪ್ಪಲು, ತಿತಿಮತಿ, ಆನೆಚೌಕೂರು, ದೇವರಪುರ, ಪಾಲಿಬೆಟ್ಟ, ಹಾತೂರು ಭಾಗದಲ್ಲಿ ಗುಡುಗು ಸಹಿತ ಉತ್ತಮ ಮಳೆ ಸುರಿದಿದೆ. ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿ ಮಳೆ ಬೀಳುತ್ತಿದ್ದು, ವಾತಾವರಣ ತಂಪಾಗಿದೆ.

ಚಾಮರಾಜನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ತಡ ರಾತ್ರಿ ಗುಡುಗು ಮಿಂಚು ಸಹಿತ ಉತ್ತಮ‌ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ವಿಜಯನಗರ, ಹುಬ್ಬಳ್ಳಿ–ಧಾರವಾಡ ಸೇರಿದಂತೆ ಕೆಲವೆಡೆ ಗುಡುಗು ಸಹಿತ ಮಳೆಯಾಗಿದೆ. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ತಳಕಲ್ಲು ಗ್ರಾಮದಲ್ಲಿ ಸಿಡಿಲು ಬಡಿದು ಆಕಳು ಮೃತಪಟ್ಟಿದೆ.

ಮುಂಡಗೋಡ ಪಟ್ಟಣದಲ್ಲೂ ತೆಂಗಿನಮರಕ್ಕೆ ಸಿಡಿಲು ಬಡಿದು ಮರ ಹೊತ್ತಿ ಉರಿಯಿತು. ಶಿರಸಿಯಲ್ಲಿ ಗುಡುಗು ಸಹಿತ ಮಳೆಯಾಗಿದೆ.

ಮಾವಿನತೋಟಕ್ಕೆ ಹಾನಿ

ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಬಿರುಗಾಳಿ ಮಳೆಗೆ ಮರಗಳು ಧರೆಗೆ ಉರುಳಿದ್ದು, ಕೆಲ ಮನೆಗಳ ತಗಡಿನ ಶೀಟ್‌ಗಳು ಹಾರಿಹೋಗಿವೆ. ಅನಂತನಹಳ್ಳಿಯ ರೈತ ವಿರೂಪಾಕ್ಷಪ್ಪ ಅವರ ಮಾವಿನ ತೋಟದಲ್ಲಿ ಮಾವಿನಹಣ್ಣುಗಳು ಉದುರಿದ್ದು, ಅಪಾರ ನಷ್ಟವಾಗಿದೆ.

ಕರಾವಳಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ. ಗುಡುಗು, ಸಿಡಿಲಿನೊಂದಿಗೆ ಮಳೆ ಸುರಿದಿದೆ.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಅರ್ಧ ಗಂಟೆ ಮಳೆ ಸುರಿಯಿತು. ಹುಣಸೇಹಳ್ಳಿ ಬಳಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು, ಶೃಂಗೇರಿ, ಜಯಪುರ, ಬಾಳೆಹೊನ್ನೂರಿನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಕೊಪ್ಪ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ತುಂತುರು ಮಳೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಸುಬ್ರಹ್ಮಣ್ಯದಲ್ಲಿ ಸಾಧಾರಣ ಮಳೆಯಾಗಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರದ ಸುತ್ತ ಉತ್ತಮ ಮಳೆ ಸುರಿದಿದೆ.

ಮೇವಿನ ಬಣವೆ ಭಸ್ಮ

ಕುಷ್ಟಗಿ ತಾಲ್ಲೂಕಿನ ಹನುಮಸಾಗರದಲ್ಲೂ ಮಳೆಯಾಗಿದೆ. ಸಮೀಪದ ಮಲಕಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಮೇವಿನ ಬಣವೆ ಭಸ್ಮವಾಯಿತು. ಜೋರಾಗಿ ಗಾಳಿ ಬೀಸಿದ ಪರಿಣಾಮ ಅಲ್ಲಲ್ಲಿ ಮನೆಗಳ ಹೆಂಚು ಹಾರಿ ಹೋದರೆ, ಬಣವೆಗಳಿಗೂ ಹಾನಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT