ಭಾನುವಾರ, ಸೆಪ್ಟೆಂಬರ್ 26, 2021
21 °C
ಕರಾವಳಿ, ಕಲ್ಯಾಣ ಕರ್ನಾಟಕದಲ್ಲಿ ಧಾರಾಕಾರ ಮಳೆ l ನದಿಗಳಲ್ಲಿ ಹೆಚ್ಚಿದ ನೀರಿನ ಪ್ರಮಾಣ lಜನವಸತಿ ಪ್ರದೇಶಗಳು ಜಲಾವೃತ

ಧರೆಗೆ ಉರುಳಿದ ಮರಗಳು: ಬೆಳೆಗಳಿಗೆ ಅಪಾರ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾನುವಾರ ಇಡೀ ದಿನ ಮಳೆಯಾಗಿದ್ದು, ಹಲವೆಡೆ ಗಾಳಿ–ಮಳೆಯಿಂದ ಹಾನಿ ಸಂಭವಿಸಿದೆ.

ಬಂಟ್ವಾಳ ತಾಲ್ಲೂಕಿನ ವಿಟ್ಲಪಡ್ನೂರು ಗ್ರಾಮದ ಕೊಡಂಗೆ ಎಂಬಲ್ಲಿ ಗುಡ್ಡ ಕುಸಿದು ಸುನೀಲ್ ಪಾಯಸ್ ಅವರಿಗೆ ಸೇರಿದ 100ಕ್ಕೂ ಹೆಚ್ಚು ಅಡಿಕೆ ಮರಗಳು ಧರಾಶಾಯಿಯಾಗಿವೆ. ವೀರಕಂಬ- ಬೋಳಂತೂರು ಸಂಪರ್ಕಿಸುವ ರಸ್ತೆಯ ತಡೆಗೋಡೆ ನೀರು ಪಾಲಾಗಿದ್ದು, ರಸ್ತೆ ಕುಸಿಯುವ ಭೀತಿ ಎದುರಾಗಿದೆ. ಬಿ.ಸಿ.ರೋಡ್- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಳಗಿನ ವಗ್ಗ, ಆಲಂಪುರಿ ಕ್ರಾಸ್ ಬಳಿ ರಸ್ತೆ ಬದಿಯ ಗುಡ್ಡ ಜರಿದು 50ಕ್ಕೂ ಹೆಚ್ಚು ಅಡಿಕೆ ಮರಗಳು ಧರೆಗುರುಳಿವೆ. 

ಕೃತಕ ನೆರೆ: ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನಲ್ಲಿ ಜನವಸತಿ ಪ್ರದೇಶಗಳು ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿದೆ. ಮಜೂರು, ಉಳಿಯಾರು, ಕರಂದಾಡಿ, ಮಲ್ಲಾರಿನಲ್ಲಿ ನೆರೆ ಸೃಷ್ಟಿಯಾಗಿದ್ದು, ಜಲಾವೃತ ಪ್ರದೇಶಗಳಲ್ಲಿ ವಾಸವಿದ್ದವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಅನಾರೋಗ್ಯ ಪೀಡಿತ ಮಹಿಳೆಯೊಬ್ಬರನ್ನು ಸ್ಥಳೀಯರು ಕುರ್ಚಿಯಲ್ಲಿ ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ತಲುಪಿಸಿದರು. ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.

ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಬೈಕಂಪಾಡಿಯ ಆದಿಶಕ್ತಿ ಇಂಟರ್‌ಲಾಕ್ ಇಂಡಸ್ಟ್ರಿಗೆ ಹೊಂದಿಕೊಂಡಿರುವ ಮಣ್ಣಿನ ಗುಡ್ಡ ಸಹಿತ ಕಾಂಕ್ರಿಟ್‌ ತುಂಡುಗಳು ಕುಸಿದು ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಹೇಮಾವತಿ, ತುಂಗಾ, ಭದ್ರಾ ನದಿಗಳಲ್ಲಿ ಹರಿವಿನ ಪ್ರಮಾಣ ಜಾಸ್ತಿಯಾಗಿದೆ.

ಕಲಬುರ್ಗಿ ವರದಿ:  ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸಾಲೇಬೀರನಹಳ್ಳಿ, ದೇಗಲಮಡಿ, ತುಮಕುಂಟಾ, ಶಿರೋಳ್ಳಿ, ಕೆರೋಳ್ಳಿ, ಬೆನಕನಳ್ಳಿ, ಮೊದಲಾದ ಗ್ರಾಮಗಳಲ್ಲಿ‌ ಪ್ರವಾಹ ಪರಿಸ್ಥಿತಿ ತಲೆದೋರಿದೆ. 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

ಪೋತಂಗಲ್‌ ಗ್ರಾಮದಲ್ಲಿ ಶನಿವಾರ ಸಂಜೆ ಕಾಗಿಣಾ ನದಿಯಲ್ಲಿ ಪ್ರಹ್ಲಾದ್‌ ದಶರಥ ದೋಡ್ಲಾ (30) ಎಂಬುವರು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ.‌

ಸೇಡಂ ತಾಲ್ಲೂಕಿನ 18 ಗ್ರಾಮಗಳಲ್ಲಿ ಅಪಾರ ಮಳೆಯಾಗಿದೆ. ಹೊಲಗಳಲ್ಲಿ ನೀರು ನಿಂತಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ‌‌ಕಾಳಗಿ ತಾಲ್ಲೂಕಿನಲ್ಲಿ ಸತತ ಸುರಿಯುತ್ತಿರುವ ಮಳೆಯಿಂದ ಬೆಣ್ಣೆತೊರಾ ಜಲಾಶಯದ ನೀರಿನ ಒಳಹರಿವು ಹೆಚ್ಚಾಗಿದೆ. ಜಲಾಶಯದಿಂದ ಹೊರಬಿಟ್ಟ ನೀರು ಬಣಬಿ ಗ್ರಾಮದ ಜಮೀನುಗಳಿಗೆ ನುಗ್ಗಿದೆ

ಕೊಡಗಿನಲ್ಲಿ ಮತ್ತೆ ಮಳೆ ಬಿರುಸು

ಮಡಿಕೇರಿ/ಹಾಸನ/ಮೈಸೂರು: ಕೊಡಗು ಜಿಲ್ಲೆಯಲ್ಲಿ ಎರಡು ದಿನ ಬಿಡುವು ನೀಡಿದ್ದ ಮಳೆ ಮತ್ತೆ ಬಿರುಸು ಪಡೆದಿದೆ. ಭಾನುವಾರ ದಿನವಿಡೀ ಧಾರಾಕಾರ ಮಳೆಯಾಗಿದೆ.

ನಿರಂತರ ಮಳೆಯಿಂದ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಬಲಮುರಿಯಲ್ಲಿ ಕಿರುಸೇತುವೆ ಮಟ್ಟಕ್ಕೆ ಕಾವೇರಿ ನದಿ ನೀರು ಹರಿಯುತ್ತಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆ ನಿರಂತರ ಮಳೆಯಾಗುತ್ತಿದ್ದು, ಪ್ರವಾಹದ ಭೀತಿ ಎದುರಾಗಿದೆ.

ಬೇಲೂರು ತಾಲ್ಲೂಕಿನ ಬೆಳ್ಳಾವರ, ಹೊಸಳ್ಳಿ ಮಾರ್ಗವಾಗಿ ಅರೇಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಲ್ಲಿಗನೂರು ಸೇತುವೆಯ ಎರಡೂ ಬದಿ ಮಣ್ಣು ಕುಸಿಯತೊಡಗಿದೆ. ಸಂಪರ್ಕ ಕಡಿತಗೊಳ್ಳುವ ಆತಂಕ ಗ್ರಾಮಸ್ಥರಿಗೆ ಉಂಟಾಗಿದೆ.

ಮೈದುಂಬಿದ ಉತ್ತರ ‍ಪಿನಾಕಿನಿ

ಚಿಕ್ಕಬಳ್ಳಾಪುರ: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಶನಿವಾರ ರಾತ್ರಿ ರಭಸದ ಮಳೆ ಸುರಿದಿದೆ. ಹಳ್ಳ, ಕೊಳ್ಳಗಳು, ಜಲಾಶಯಗಳಿಗೆ ಹೆಚ್ಚು ನೀರು ಹರಿದು ಬಂದಿದೆ. ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ.

ಗೌರಿಬಿದನೂರು ತಾಲ್ಲೂಕಿನ ಉತ್ತರ ಪಿನಾಕಿನಿ ನದಿ ಮೈದುಂಬಿ ಹರಿಯುತ್ತಿದೆ.

ಬಿಡುವು ನೀಡದ ವರುಣ

ಹುಬ್ಬಳ್ಳಿ: ಧಾರವಾಡ, ವಿಜಯಪುರ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾನುವಾರವೂ ಮಳೆ ಮುಂದುವರಿದಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನಲ್ಲಿ 20.9 ಸೆಂ.ಮೀ.ನಷ್ಟು ಭಾರಿ ಮಳೆಯಾಗಿದೆ. ಚೌಥನಿಯ ಶರಾಬಿ ನದಿ ಉಕ್ಕಿಹರಿದು ಚೌಥನಿ ಗ್ರಾಮ‌ ಸಂಪೂರ್ಣ ಜಲಾವೃತವಾಗಿದೆ.‌ ಮುಂಡಳ್ಳಿಯ ಹಾವಳಿಕಂಟ‌ ನದಿ, ಮೂಡಭಟ್ಕಳ ಗೋಪಿನಾಥ ನದಿ, ಶಿರಾಲಿ ವೆಂಕಟಾಪುರ ನದಿ, ಬೆಂಗ್ರೆಯಲ್ಲಿ ನದಿ ಉಕ್ಕಿ ಹರಿದು ನೂರಾರು ಮನೆ ಹಾಗೂ ಕೃಷಿ ಭೂಮಿಗೆ ನೀರು ನುಗ್ಗಿದೆ.

ಹೊನ್ನಾವರ ತಾಲ್ಲೂಕಿನಲ್ಲೂ ಮಳೆಯ ಆರ್ಭಟ ಮುಂದುವರಿದಿದೆ. ನಗರೆ ಗ್ರಾಮದ ಹೊಸಹಿತ್ಲದಲ್ಲಿ ಸುಬ್ರಾಯ ಶಂಕರ ಹೆಗಡೆ ಅವರ ಮನೆಯ ಗೋಡೆ ಕುಸಿದಿದೆ.

ಭಟ್ಕಳ ಬಂದರಿನಿಂದ ಕಡಲಿಗಿಳಿದ ಎಂಟು ಪಾತಿ ದೋಣಿಗಳು ನದಿಯ ನೀರಿನ ರಭಸದಿಂದ ಮರಳಿ ದಡಕ್ಕೆ ಬರಲು ಸಾಧ್ಯವಾಗಲಿಲ್ಲ. ಎನ್.ಡಿ.ಆರ್.ಎಫ್ ತರಬೇತಿ ಪಡೆದ ಕರಾವಳಿ ಕಾವಲು ಪೊಲೀಸ್‌ ಪಡೆ ಸ್ಥಳಕ್ಕೆ ಧಾವಿಸಿ, ದೋಣಿಗಳನ್ನು ರಕ್ಷಣೆ ಮಾಡಿದೆ. ತುಂಗಭದ್ರಾ ಜಲಾಶಯದ ಒಳಹರಿವು ಸತತ ಹೆಚ್ಚಳವಾಗುತ್ತಿದೆ. ಭಾನುವಾರ 57,127 ಕ್ಯುಸೆಕ್‌ ಒಳಹರಿವು ದಾಖಲಾಗಿದೆ.

ಮಣ್ಣು ತೆರವು: ರೈಲು ಸಂಚಾರ ಪುನರಾರಂಭ

ಮಂಗಳೂರು: ನಗರ ಹೊರವಲಯದ ಕುಲಶೇಖರ ಬಳಿ ರೈಲ್ವೆ ಹಳಿಗೆ ತಡೆಗೋಡೆ ಸಹಿತ ಮಣ್ಣು ಕುಸಿದ ಪರಿಣಾಮ ಸ್ಥಗಿತಗೊಂಡಿದ್ದ ರೈಲು ಸಂಚಾರ ಭಾನುವಾರದಿಂದ ಪುನರಾರಂಭ ಗೊಂಡಿದೆ. ಬೆಳಿಗ್ಗೆ 8.45ರ ವೇಳೆಗೆ ಎರ್ನಾಕು ಳಂನಿಂದ ಅಜ್ಮೀರ್‌ಗೆ ಹೋಗುವ ರೈಲು ಈ ಮಾರ್ಗದಲ್ಲಿ ಪ್ರಯಾಣ ಬೆಳೆಸಿತು. ಶನಿವಾರ ತಡರಾತ್ರಿಯವರೆಗೂ ತೆರವು ಕಾರ್ಯ ನಡೆಯಿತು.

ಮತ್ತೆ ಧರೆ ಕುಸಿತ: ಭಾನುವಾರ ಬೆಳಿಗ್ಗೆ ಮಂಗಳೂರು ಜಂಕ್ಷನ್- ಯಶವಂತಪುರ ಎಕ್ಸ್‌ಪ್ರೆಸ್‌ ಪ್ರಯಾಣಿಕರ ರೈಲು ಚಲಿಸುತ್ತಿರುವಾಗ ಪುತ್ತೂರು- ಕಬಕ- ಸುಬ್ರಹ್ಮಣ್ಯ ಮಾರ್ಗದಲ್ಲಿ ವೀರಮಂಗಲದ ಬಳಿ ಏಕಾಏಕಿ ಧರೆ ಕುಸಿದ ಪರಿಣಾಮ ರೈಲಿನ ಗಾರ್ಡ್‌ಗೆ ಹಾನಿಯಾಗಿದೆ. ಒಂದು ತಾಸಿನಲ್ಲಿ ಮಣ್ಣು ತೆರವು ಮಾಡಿ, ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಚಿತ್ರದುರ್ಗದಲ್ಲಿ 26 ಮನೆಗಳಿಗೆ ಭಾಗಶಃ ಹಾನಿ

ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ತುಸು ತಗ್ಗಿದ್ದ ಮಳೆ ಭಾನುವಾರ ಹಲವೆಡೆ ಬೆಳಿಗ್ಗೆಯಿಂದ ಜೋರಾಗಿ ಸುರಿಯಿತು.

ಶರಾವತಿ ಕಣಿವೆ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದು, ಲಿಂಗನಮಕ್ಕಿ ಜಲಾಶಯದ ಒಳಹರಿವು ಹೆಚ್ಚತೊಡಗಿದೆ. ಜೋಗದ ಸುತ್ತಮುತ್ತ ಧಾರಾಕಾರ ಮಳೆ ಸುರಿಯುತ್ತಿದ್ದು, ಜಲಪಾತದ ನಾಲ್ಕು ಕವಲುಗಳಾದ ರಾಜ, ರಾಣಿ, ರೋರರ್, ರಾಕೆಟ್‌ ತುಂಬಿ ಹರಿಯುತ್ತಿವೆ.

ಚಿತ್ರದುರ್ಗ ಜಿಲ್ಲೆಯಲ್ಲಿ 26 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ತಪ್ಪಗೊಂಡನಹಳ್ಳಿಯಲ್ಲಿ ಕೆರೆಯ ನೀರು ನುಗ್ಗಿ 36 ಎಕರೆ ಜಮೀನಿನಲ್ಲಿದ್ದ ಬೆಳೆ ನಷ್ಟವಾಗಿದೆ.

ದಾವಣಗೆರೆ ಜಿಲ್ಲೆಯ ಕಾಡಜ್ಜಿ–ಆಲೂರುಹಳ್ಳ ತುಂಬಿದೆ. ಕಾಡಜ್ಜಿಯ ಕೆಪಿಟಿಸಿಎಲ್ ಉಪಕೇಂದ್ರದ ಕಟ್ಟಡಲ್ಲಿ ಸಿಲುಕಿದ್ದ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ದಾವಣಗೆರೆ ತಾಲ್ಲೂಕಿನ ಕಡ್ಲೆಬಾಳು ಗ್ರಾಮದ ಜಮೀನಿನಲ್ಲಿ ಟ್ರ್ಯಾಕ್ಟರ್ ಮುಳುಗಡೆಯಾಗಿದ್ದು, ಮಾಗಾನಹಳ್ಳಿ ಓಬಜ್ಜಿ ಮಧ್ಯೆದ ರಸ್ತೆ ಸಂಪರ್ಕ ಕಡಿತಕೊಂಡಿದೆ.

ನಾಟಿಗೆ ಹಾಕಿದ್ದ ಭತ್ತದ ಮಡಿ, ಮೆಕ್ಕೆಜೋಳ ಬೆಳೆ ನೀರಿನಲ್ಲಿ ಮುಳುಗಿದೆ. ಸಂತೇಬೆನ್ನೂರಿನ ಪುಷ್ಕರಣಿಯ ಜಲಹರಿ ಮಂಟಪದಿಂದ ನೀರು ಧುಮ್ಮಿಕ್ಕುತ್ತಿದೆ.

ಉಚ್ಚಂಗಿದುರ್ಗದ ಫಣಿಯಾಪುರ ಗ್ರಾಮದಲ್ಲಿ ತಂತಿಬೇಲಿ ಹಾಕಿ ಕಟ್ಟಿದ್ದ ಕೆಂಚಪ್ಪ ಎಂಬುವರ 9 ಮೇಕೆಗಳು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.