ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ: ಕಾಫಿ ಬೆಳೆಗಾರರಿಗೆ ವರದಾನ

Last Updated 11 ಮಾರ್ಚ್ 2021, 20:49 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕೆಲವೆಡೆ ಗುರುವಾರ ಮಳೆ ಸುರಿದಿದೆ. ಶಿರಸಿ ನಗರವೂ ಸೇರಿದಂತೆ ತಾಲ್ಲೂಕಿನ ಹಲವೆಡೆ ಗುರುವಾರ ಗುಡುಗು ಸಹಿತ ಆಲಿಕಲ್ಲು ಮಳೆ ಸುರಿಯಿತು. ಒಂದು ತಾಸಿಗೂ ಹೆಚ್ಚು ಕಾಲ ರಭಸದ ಗಾಳಿ ಬೀಸಿತು.

ಇಲ್ಲಿನ ಅಶ್ವಿನಿ ಸರ್ಕಲ್ ಬಳಿ ರಸ್ತೆ ಮೇಲೆ ಒಂದು ಅಡಿಗೂ ಹೆಚ್ಚು ನೀರು ನಿಂತಿದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಆಯಿತು. ಶಿವ ದೇವಾಲಯಗಳಿಗೆ ಭಕ್ತರು ಮಳೆಯಲ್ಲೇ ನೆನೆಯುತ್ತ ತೆರಳಿದರು. ಮಳೆ ಕಾರಣಕ್ಕೆ ಮಧ್ಯಾಹ್ನದ ನಂತರ ಶಿವತಾಣಗಳಲ್ಲಿ ಭಕ್ತರ ಸಂಖ್ಯೆ ಇಳಿಮುಖವಾಯಿತು. ಸಿದ್ದಾಪುರ ಪಟ್ಟಣ ಹಾಗೂ ಕೆಲವು ಹಳ್ಳಿಗಳಲ್ಲಿ ಮಳೆ ಸುರಿದಿದೆ.

ಸಿದ್ದಾಪುರ ತಾಲ್ಲೂಕಿನಲ್ಲೂ ಗುರುವಾರ ಮಧ್ಯಾಹ್ನ ಗುಡುಗು, ಸಿಡಿಲಿನಿಂದ ಕೂಡಿದ ಮಳೆ ಬಿದ್ದಿದ್ದು, ಪಟ್ಟಣದ ರವೀಂದ್ರ ನಗರದ ರೋಹಿಣಿ ಅಂಬಿಗ ಅವರ ವಾಸದ ಮನೆಯ ಸ್ವಿಚ್‌ ಬೋರ್ಡ್‌ ಹಾಗೂ ತೆಂಗಿನಮರಕ್ಕೆ ಸಿಡಿಲು ಬಡಿದು ಹಾನಿಯಾಗಿದೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಒಂದು ಗಂಟೆ ಸಾಧಾರಣವಾಗಿ ಸುರಿದಿದ್ದು, ಕೆ.ಆರ್.ನಗರ, ಎಚ್.ಡಿ.ಕೋಟೆ, ಹುಣಸೂರು ತಾಲ್ಲೂಕಿನ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಕೊಡಗಿನ ಅಮ್ಮತ್ತಿ, ಪೊನ್ನಂಪೇಟೆ, ಶ್ರೀಮಂಗಲ, ವಿರಾಜಪೇಟೆ ಸುತ್ತಮುತ್ತ ಉತ್ತಮ ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕೆಲ ಸಮಯ ಭಾರಿ ಮಳೆ ಸುರಿದಿದೆ. ಕೋಣಂದೂರು, ರಿಪ್ಪನ್‌ಪೇಟೆ, ಶಿವಮೊಗ್ಗ ಭಾಗದಲ್ಲಿ ಉತ್ತಮ ಮಳೆಯಾಗಿದೆ.

ದಾವಣಗೆರೆ ಜಿಲ್ಲೆಯ ಅರಸೀಕೆರೆ ಹೋಬಳಿಯ ಉಚ್ಚಂಗಿದುರ್ಗದ ಸುತ್ತಮುತ್ತ ಗುರುವಾರ ಸಂಜೆ ತುಂತುರು ಮಳೆಯಾಗಿದೆ. ಬೇಸಿಗೆ ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಸಾರ್ವಜನಿಕರಿಗೆ ಮಳೆ ಹನಿ ಸಂತಸ ಮೂಡಿಸಿತು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೆಂಜಿಗೆ, ಸಬ್ಬೇನಹಳ್ಳಿ, ಹೆಸಗೋಡು, ಬಿ. ಹೊಸಳ್ಳಿ, ತಳವಾರ, ಕುಂದೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಅರ್ಧ ತಾಸಿಗೂ ಅಧಿಕ ಮಳೆ ಸುರಿಯಿತು.

ಏಕಾಏಕಿ ಮಳೆ ಬಂದಿದ್ದರಿಂದ ಹಲವೆಡೆ ಕಣದಲ್ಲಿ ಒಣ ಹಾಕಿದ್ದ ಕಾಳುಮೆಣಸು ಹಾನಿಯಾಗಿದೆ. ಮಳೆ ಬಿದ್ದಿರುವ ಪ್ರದೇಶದಲ್ಲಿ ಕಾಫಿ ಹೂ ಅರಳಲು ಅನುಕೂಲವಾದ್ದರಿಂದ ಕಾಫಿ ಬೆಳೆಗಾರರಿಗೆ ವರದಾನವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT