ಸೋಮವಾರ, ಅಕ್ಟೋಬರ್ 26, 2020
20 °C

ರಾಜ್ಯದ ವಿವಿಧೆಡೆ ಉತ್ತಮ ಮಳೆ, 10 ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಮಂಗಳವಾರ ಭಾರಿ ಮಳೆಯಾಗಿದೆ. ದೋಣಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹಳ್ಳಗಳು ಭರ್ತಿಯಾಗಿದ್ದು, ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ.

ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದಾಗಿ 127 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಚಡಚಣ ತಾಲ್ಲೂಕಿನ ಹಾಲಳ್ಳಿ ಗ್ರಾಮದಲ್ಲಿ ಸಿಡಿಲಿಗೆ ಎಮ್ಮೆ ಬಲಿಯಾಗಿದೆ. ಡೋಣಿ ನದಿಯ ಪ್ರವಾಹದಿಂದ ತಾಳಿಕೋಟೆ–ಹಡಗಿನಾಳ ನೆಲಮಟ್ಟದ ಸೇತುವೆ ಹಾಗೂ ಸಾತಿಹಾಳದಲ್ಲಿ ದೇವರಹಿಪ್ಪರಗಿ– ಬಸವನ ಬಾಗೇವಾಡಿ ಮುಖ್ಯ ರಸ್ತೆಯಲ್ಲಿರುವ ಸಂಪರ್ಕ ಸೇತುವೆ ಜಲಾವೃತವಾಗಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದ ಸರಹದ್ದಿನಲ್ಲಿ ಹರಿಯುವ ಹಿರೇಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಳಗೊಂಡು ಜನವಸತಿ ಪ್ರದೇಶಕ್ಕೆ ನುಗ್ಗಿದೆ. ಹಳ್ಳದ ಪಕ್ಕದಲ್ಲಿ ಕಮ್ಮಾರ, ಕೊರಮ ಸಮುದಾಯದ 30 ಕ್ಕೂ ಹೆಚ್ಚು ಕುಟುಂಬಗಳ ಮನೆಗಳು ಜಲಾವೃತವಾಗಿವೆ. ಮನೆಯಲ್ಲಿದ್ದ ದವಸ ಧಾನ್ಯ, ಪಾತ್ರೆ ಎಲ್ಲಾ ವಸ್ತುಗಳು ನೀರುಪಾಲಾಗಿವೆ. ಉಟ್ಟಬಟ್ಟೆಯಲ್ಲಿ ಮಕ್ಕಳೊಂದಿಗೆ ಜನರು ಸುರಕ್ಷಿತ ಸ್ಥಳಕ್ಕೆ ತೆರಳಿದರು.

ಬಾಗಲಕೋಟೆ ಜಿಲ್ಲೆಯ ಅಮೀನಗಡ ಸಮೀಪದ ಐತಿಹಾಸಿಕ ಐಹೊಳೆ ಪ್ರಾಚೀನ ಸ್ಮಾರಕಗಳು ಜಲಾವೃತವಾಗಿವೆ. ಬಳ್ಳಾರಿ ಜಿಲ್ಲೆಯ ತಿಮ್ಮಲಾಪುರ ಗ್ರಾಮದ 10ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಗ್ರಾಮದ ಎರಡು ಮನೆಗಳಿಗೆ ಹಾನಿಯಾಗಿದೆ. ಏಳು ವಿದ್ಯುತ್ ಕಂಬಗಳು ಉರುಳಿವೆ. ಗದಗ ಜಿಲ್ಲೆಯ ನರೇಗಲ್ ಪಟ್ಟಣದಲ್ಲಿ ಎರಡು ಕಡೆ ಭೂ ಕುಸಿತವಾಗಿದೆ. ಬೆಳಗಾವಿ, ಹಾವೇರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ, ಹನುಮಸಾಗರದಲ್ಲಿ ಸೋಮವಾರ ರಾತ್ರಿ ವ್ಯಾಪಕ ಮಳೆಯಾಗಿದೆ. ಹನುಮಸಾಗರದ ಲಕ್ಷ್ಮಿವೆಂಕಟೇಶ ಬೆಟ್ಟದ ಮುಖ್ಯರಸ್ತೆಯ ಬದಿಯಲ್ಲಿ ಮಣ್ಣಿನ ಗುಡ್ಡ ಕುಸಿದು ಬೃಹತ್‌ ಗಾತ್ರದ ಬಂಡೆ ಉರುಳಿ ಸಂಚಾರ ಬಂದ್ ಆಗಿತ್ತು. ಐತಿಹಾಸಿಕ ಚಂದಾಲಿಂಗೇಶ್ವರ ದೇವ
ಸ್ಥಾನ ಜಲಾವೃತವಾಗಿತ್ತು. ಬೀದರ್,‌ ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗಿದೆ.

ಉತ್ತಮ ಮಳೆ: ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಾಧಾರಣ ಮಳೆ ಆಗಿದೆ. 

10 ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಉತ್ತರ ಒಳನಾಡಿನಲ್ಲಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ.

ಈ ಭಾಗದ ಯಾದಗಿರಿ, ವಿಜಯಪುರ, ರಾಯಚೂರು, ಕಲಬುರ್ಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಅ.14 ಮತ್ತು 15ರಂದು ‘ರೆಡ್ ಅಲರ್ಟ್’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.

ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಕೊಪ್ಪಳ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ.

ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ 'ಯೆಲ್ಲೊ ಅಲರ್ಟ್' ಘೋಷಿಸಿದೆ. ಅ.16ರವರೆಗೆ ರಾಜ್ಯದ ಉತ್ತರ ಒಳನಾಡಿನಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಗರಿಷ್ಠ 10 ಸೆಂ.ಮೀ ಮಳೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು