ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ

Last Updated 19 ಮೇ 2022, 19:28 IST
ಅಕ್ಷರ ಗಾತ್ರ

ಮಂಗಳೂರು/ ಶಿವಮೊಗ್ಗ:ಕರಾವಳಿ, ಮಲೆನಾಡು ಜಿಲ್ಲೆಗಳಲ್ಲೂ ಗುರುವಾರ ಮಳೆ ಮತ್ತಷ್ಟು ಬಿರುಸಾ
ಗಿದೆ.ಮಂಗಳೂರಿನ ಹೊಯ್ಗೆಬಜಾರ್‌ನ ಮರದ ಮಿಲ್ ಬುಧವಾರ ರಾತ್ರಿ ಕುಸಿದಿದೆ. ಮಳೆಯ ನೀರು ಗೋಡೆಗೆ ಬಡಿದು ಬಿರುಕು ಕಾಣಿಸಿಕೊಂಡಿತ್ತು. ರಾತ್ರಿ ಗೋಡೆ ಕುಸಿದಿದೆ.

ಹೆದ್ದಾರಿಯಲ್ಲಿ ಮರ ಬಿದ್ದು ಕಲ್ಲಡ್ಕ-ಕಾಂಞಂಗಾಡ್ ಅಂತರರಾಜ್ಯ ಹೆದ್ದಾರಿಯ ಕೆಲಿಂಜದಲ್ಲಿ ಕೆಲಹೊತ್ತು ವಾಹನ ಸಂಚಾರ ಸ್ಥಗಿತವಾಗಿತ್ತು. ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿಯ ಅವಾಂತರದಿಂದಾಗಿ ಉಪ್ಪಿನಂಗಡಿ ಪೇಟೆಯಲ್ಲಿ ಕೃತಕ ನೆರೆ ಉಂಟಾಗಿದ್ದು, ತಗ್ಗು ಪ್ರದೇಶ ಜಲಾವೃತಗೊಂಡಿತ್ತು.

ಶಿವಮೊಗ್ಗಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ನಗರದ ಹಲವು ಬಡಾವಣೆಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿದೆ. ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಮಳೆ ನೀರು ಹೊರಗೆ ಹೋಗಲು ಅವಕಾಶ ಇಲ್ಲದೆ ಇಲ್ಲಿನ ನ್ಯೂ ಮಂಡ್ಲಿ ಸರ್ಕಾರಿ ಶಾಲೆ ಕ್ರೀಡಾಂಗಣ ಕೆರೆ
ಯಂತಾಗಿದೆ.ಗಾಂಧಿ ನಗರದ ಮುಖ್ಯ ರಸ್ತೆ, ಎ ಬ್ಲಾಕ್‌, ಬಿ ಬ್ಲಾಕ್‌ ಸೇರಿ ವಿವಿಧ ಅಡ್ಡ ರಸ್ತೆಗಳು ಜಲಾವೃತ
ವಾಗಿವೆ. 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ವಸ್ತುಗಳು ನೀರು ಪಾಲಾಗಿವೆ. ಭತ್ತ ಕೊಯ್ಲಿಗೆ ಬಂದಿದ್ದು, ಮಳೆಗೆ ಕೊಚ್ಚಿಹೋಗುವ ಭೀತಿ ಎದುರಾಗಿದೆ.

ಚಿತ್ರದುರ್ಗಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸುವರ್ಣಾವತಿ ನದಿ ಮೈದುಂಬಿ ಹರಿಯುತ್ತಿದೆ. ವೇದಾವತಿ ನದಿ ಜೀವಕಳೆ ಪಡೆದಿದ್ದು, ಬ್ಯಾರೇಜ್‌ ಹಾಗೂ ಚೆಕ್‌ಡ್ಯಾಂಗಳು ಭರ್ತಿಯಾಗಿವೆ.ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಬಹುತೇಕ ಜಲಮೂಲಗಳಿಗೆ ನೀರು ಹರಿದುಬಂದಿದೆ. ನಗರದ ಹೊಂಡಗಳಲ್ಲಿ ಕೆಲವು ಭರ್ತಿಯಾಗಿವೆ. ಹಳ್ಳ–ಕೊಳ್ಳಗಳಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು, ರೈತರು ಸಂತಸಗೊಂಡಿದ್ದಾರೆ.

ಚಿತ್ರದುರ್ಗ ನಗರದಲ್ಲಿ 9 ಸೆಂ.ಮೀ ಮಳೆಯಾಗಿದೆ. ಗುರುವಾರ ಜಿಲ್ಲೆಯಲ್ಲಿ ದಾಖಲಾದ ಅತಿಹೆಚ್ಚು ಮಳೆ
ಇದಾಗಿದೆ. ಪಿಳ್ಳೆಕೆರನಳ್ಳಿಯ ಸರ್ಕಾರಿ ಶಾಲೆ ಜಲಾವೃತವಾಗಿದ್ದು, 2 ದಿನ ಶಾಲೆಗೆ ರಜೆ ಘೋಷಣೆ ಮಾಡಲಾ
ಗಿದೆ. 21 ಹೆಕ್ಟೇರ್‌ ಬೆಳೆ ನಾಶವಾಗಿದ್ದು, 53 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ

ದಾವಣಗೆರೆಜಿಲ್ಲೆಯಲ್ಲಿ ಸರಾಸರಿ 4.8 ಸೆಂ.ಮೀ ಮಳೆಯಾಗಿದೆ. ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಅಂದಾಜು ₹ 1.83 ಕೋಟಿ ನಷ್ಟ ಸಂಭವಿಸಿದೆ. 44 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 1,850 ಎಕರೆ ಭತ್ತದ ಬೆಳೆ ನಾಶವಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಉಡುಪಿ: ‘ರೆಡ್‌ ಅಲರ್ಟ್‌’

ಉಡುಪಿ ಜಿಲ್ಲೆಯಲ್ಲಿಮೇ 20ರಂದು 215 ಮಿ.ಮೀಗಿಂತ ಹೆಚ್ಚು ಮಳೆ ಸುರಿಯುವ ಸಾಧ್ಯತೆಗಳಿದ್ದು, ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT