ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಹಲವೆಡೆ ಭಾರಿ ಮಳೆ: ಮಳೆ ಅವಾಂತರದಿಂದ ರೈತ, ಬಾಲಕರಿಬ್ಬರು ಸೇರಿ ಐವರ ಸಾವು

Last Updated 11 ಅಕ್ಟೋಬರ್ 2020, 20:16 IST
ಅಕ್ಷರ ಗಾತ್ರ
ADVERTISEMENT
""
""
""

ಬೆಂಗಳೂರು: ರಾಜ್ಯದ ಬಹುತೇಕ ಕಡೆಗಳಲ್ಲಿ ಶನಿವಾರ ರಾತ್ರಿ ಮತ್ತು ಭಾನುವಾರ ಧಾರಾಕಾರ ಮಳೆಯಾಗಿದೆ. ಹಳ್ಳ–ಕೊಳ್ಳಗಳು ತುಂಬಿ ಹರಿದಿವೆ. ಬಾಲಕರಿಬ್ಬರು ಸೇರಿ ಐವರು ಸಾವನ್ನಪ್ಪಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಹಳ್ಳದಲ್ಲಿ ಯುವಕ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ರೈತರೊಬ್ಬರು ಮಲಪ್ರಭಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಗೋವನಕೊಪ್ಪ ಬಳಿ ಮಲಪ್ರಭಾ ನದಿಯಲ್ಲಿ ಕೊಣ್ಣೂರು ಗ್ರಾಮದ ರೈತ ವೆಂಕನಗೌಡ ರಾಮನಗೌಡ ಸಾಲಿಗೌಡರ (38) ಕೊಚ್ಚಿಕೊಂಡು ಹೋಗಿದ್ದಾರೆ. ಹೊಲದಿಂದ ಮನೆಗೆ ತೆರಳಲು ಸೇತುವೆ ದಾಟುವಾಗ ಅವಘಡ ನಡೆದಿದೆ.

ಕೊಪ್ಪಳ ತಾಲ್ಲೂಕಿನ ಕೋಳೂರು ಬಳಿ ಹಿರೇಹಳ್ಳಕ್ಕೆ ನಿರ್ಮಿಸಿದ ಬಾಂದಾರ ಶನಿವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಹಾನಿಯಾಗಿದೆ. ಬಾಂದಾರ ಗೇಟ್ ತೆರೆಯದ ಕಾರಣ ಜಮೀನುಗಳಿಗೆ ನುಗ್ಗಿ ಸೇತುವೆ ಒಂದು ಭಾಗ ಕುಸಿದಿದೆ ಪ್ರಜಾವಾಣಿ ಚಿತ್ರ: ಭರತ್ ಕಂದಕೂರ

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಸಮೀಪದ ಹಳ್ಳದಲ್ಲಿ ಚನ್ನಬಸವ (35) ಕೊಚ್ಚಿ ಹೋಗಿದ್ದಾರೆ. ಇಬ್ಬರು ರಕ್ಷಣಾ ಸಿಬ್ಬಂದಿ ಸೇರಿ ಮೂವರನ್ನು ಕ್ರೇನ್ ಮೂಲಕ ಕಾರ್ಯಾಚರಣೆ ನಡೆಸಿ ರಕ್ಷಿಸಲಾಯಿತು.

ನಸುಕಿನಲ್ಲಿ ಬಹಿರ್ದೆಸೆಗೆಂದು ಚನ್ನಬಸವ ಮತ್ತು ಜಲೀಲ್ ಹಳ್ಳದ ಪೊದೆಗಳ ಬಳಿ ಹೋಗಿದ್ದರು. ಮಸ್ಕಿ ಜಲಾಶಯದಿಂದ ಬಿಡಲಾದ ನೀರು ಸುತ್ತಲೂ ಆವರಿಸಿದ್ದು ಕಂಡು ಆತಂಕಗೊಂಡ ಅವರಿಬ್ಬರೂ ಪ್ರತ್ಯೇಕವಾಗಿ ಬಂಡೆ ಮೇಲೆ ನಿಂತು ನೆರವಿಗಾಗಿ ಕೂಗಿಕೊಂಡರು.

ಅವರಿಬ್ಬರ ರಕ್ಷಣೆಗೆ ಸ್ಥಳೀಯ ವ್ಯಕ್ತಿಯ ಜೊತೆಗೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಗೃಹರಕ್ಷಕ ಸಿಬ್ಬಂದಿ ನೀರಿಗಿಳಿದಾಗ, ಹಗ್ಗ ತುಂಡಾಯಿತು. ಆಗ ಚನ್ನಬಸವ ಕೊಚ್ಚಿ ಹೋದರೆ, ಪೊದೆಗಳ ಮಧ್ಯೆ ಸಿಲುಕಿದ ಉಳಿದವರನ್ನು ಕ್ರೇನ್‌ ನೆರವಿನಿಂದ ರಕ್ಷಿಸಲಾಯಿತು.

ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ಕುಕನೂರು ತಾಲ್ಲೂಕಿನ ಬಹುತೇಕ ಜಮೀನುಗಳಿಗೆ ನೀರು ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿ 13ರಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತಡೆ ಉಂಟಾಯಿತು. ಬೇವಿನಹಳ್ಳಿ, ಲಿಂಗದಹಳ್ಳಿ ಮತ್ತು ಶಹಾಪುರ ಗ್ರಾಮದ ಒಳರಸ್ತೆಗಳು ಬಂದ್‌ ಆಗಿವೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಭಾರಿ ಮಳೆಯಿಂದಾಗಿ ಮನೆ, ಹೊಲಗದ್ದೆಗಳಿಗೆ ನೀರು ನುಗ್ಗಿದೆ. ಶಹಾಪುರ ತಾಲ್ಲೂಕಿನ ಬೀರನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತ್ಯಧಿಕ 118 ಮಿ.ಮೀ. ಮಳೆ ದಾಖಲಾಗಿದೆ. ಸುರಪುರ ತಾಲ್ಲೂಕಿನ ವಣಕಿಹಾಳ ಸೀಮಾಂತರದ ಹೊಲದ ಬಳಿ ಸಿಡಿಲು ಬಡಿದು 25 ಕುರಿಗಳು ಸಾವನ್ನಪ್ಪಿವೆ.

ನೀರಿನಲ್ಲಿ ಮುಳುಗಿ ಸಾವು: ಕಲಬುರ್ಗಿ ಜಿಲ್ಲೆಯ ಹಳೆಯ ಶಹಾಬಾದ್‌ನ ವಿಶ್ವಾರಾಧ್ಯ ದೇವಸ್ಥಾನದ ಬಳಿ ಹಳ್ಳದಲ್ಲಿ ಮುಳುಗಿ ಬಾಲಕರಾದ ವಿಶ್ವನಾಥ ರಾಜು (15) ಮತ್ತು ತೇಜಸ್ವಿ ಪೂರ್ಣಚಂದ್ರ (14) ಮೃತಪಟ್ಟಿದ್ದಾರೆ. ಮಳೆಯಿಂದ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಇಬ್ಬರೂ ಈಜಲು ತೆರಳಿದ್ದರು.

ಕಲಬುರ್ಗಿ, ಯಾದಗಿರಿ, ಬೀದರ್, ರಾಯಚೂರು ಮತ್ತು ಕೊಪ್ಪಳದಲ್ಲಿ ಉತ್ತಮ ಮಳೆಯಾಗಿದೆ.

ಬಾಗಲಕೋಟೆ, ಗದಗ, ಬಳ್ಳಾರಿ, ವಿಜಯಪುರ, ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ರಭಸದ ಮಳೆಯಾಗಿದೆ. ಹಲವು ಕಡೆ ಅಪಾರ ಬೆಳೆ ನಾಶವಾಗಿದೆ. ಕೆಲವೆಡೆ ಮನೆಗಳಿಗೆ ಹಾನಿಯುಂಟಾಗಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪ ತುಂಬಿ ಹರಿಯುತ್ತಿದ್ದ ಅಕ್ಕಿಗುಂದ ಹಳ್ಳವನ್ನು ಬೈಕ್ ಮೇಲೆ ದಾಟಲು ಯತ್ನಿಸಿ ಬಿದ್ದ ಅಕ್ಕಿಗುಂದ ಗ್ರಾಮದ ನಿವಾಸಿ ವೀರೇಶ ಹುಬ್ಬಳ್ಳಿ ಎಂಬುವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ 350 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೆಳೆ ನಾಶವಾಗಿದೆ. ನಾರಿಹಳ್ಳ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಹರಿಸಿದ್ದರಿಂದ ನೆರೆ ಬಂದಿದೆ. ದರೋಜಿ ಕೆರೆ ಎರಡನೇ ಸಲ ತುಂಬಿ ಕೋಡಿ ಬಿದ್ದಿದೆ.

ಹಿರೇಹಳ್ಳ ಉಕ್ಕಿ ಹರಿಯುತ್ತಿರುವುದರಿಂದ ಕೊಪ್ಪಳ ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ನಡುಮಟ್ಟದ ನೀರಿನಲ್ಲಿ ಅಗತ್ಯ ವಸ್ತುಗಳೊಂದಿಗೆ ಸುರಕಿತ ಸ್ಥಳಗಳ ಕಡೆಗೆ ಹೊರಟ ಗ್ರಾಮಸ್ಥರು ಪ್ರಜಾವಾಣಿ ಚಿತ್ರ: ಭರತ್ ಕಂದಕೂರ

ಹಂಪಿಯ ಪುರಂದರ ಮಂಟಪ ಸಂಪೂರ್ಣ ಮುಳುಗಿದೆ. ಚಕ್ರತೀರ್ಥ, ರಾಮಲಕ್ಷ್ಮಣ ದೇವಸ್ಥಾನದ ಆವರಣದಲ್ಲಿ ನೀರು ನುಗ್ಗಿದೆ. ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದಿಂದ ನದಿಗೆ 51 ಸಾವಿರ ಕ್ಯುಸೆಕ್‌ ಹಾಗೂ ಕಾಲುವೆಗೆ 10 ಸಾವಿರ ಕ್ಯುಸೆಕ್‌ ನೀರು ಕಾಲುವೆಗೆ ಬಿಡಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಯಮಕನಮರಡಿ ಹಾಗೂ ವಿವಿಧ ಗ್ರಾಮಗಳಲ್ಲಿ ಗುಡುಗು ಸಿಡಿಲು ಸಹಿತ ಬಿರುಸಿನ ಮಳೆ ಸುರಿದಿದೆ.

6 ಕುರಿ ಸಾವು: ದಾವಣಗೆರೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಹರಿಹರ ತಾಲ್ಲೂಕಿನ ಚಿಕ್ಕಬಿದರೆ ಗ್ರಾಮದಲ್ಲಿ ಸಿಡಿಲು ಬಡಿದು 6 ಕುರಿಗಳು ಮೃತಪಟ್ಟಿವೆ.

ಹರಪನಹಳ್ಳಿ ತಾಲ್ಲೂಕಿನ ಹಗರಿ ಹಳ್ಳದಲ್ಲಿ ಎತ್ತಿನ ಬಂಡಿಗೆ ಸಿಲುಕಿ ಒಂದು ಎತ್ತು ಸಾವನ್ನಪ್ಪಿದೆ.

ಉತ್ತಮ ಮಳೆ: ಕೊಡಗು ಜಿಲ್ಲೆಯ ಮಡಿಕೇರಿ, ನಾಪೋಕ್ಲು, ತಲಕಾವೇರಿ ಭಾಗದಲ್ಲಿ ಹಾಗೂ ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ ರಸ್ತೆಗಳಿಗೆ ಹಾನಿಯಾಗಿದ್ದು, ಗುಡ್ಡ ಕುಸಿದಿದೆ.

ಸುಬ್ರಹ್ಮಣ್ಯ–ಪುತ್ತೂರು ರಸ್ತೆಯ ಕರಿಕಳದ ಬಳಿ ಗುಡ್ಡ ಕುಸಿದಿದೆ. ದುಗ್ಗಲಡ್ಕ ಬಳಿಯ ಕೊಯಿಕುಳಿಯಲ್ಲೂ ಗುಡ್ಡ ಜರಿದು, ಮರಗಳು ಬೀಳುವ ಅಪಾಯದಲ್ಲಿವೆ. ಶನಿವಾರ ತಡರಾತ್ರಿ ಸುರಿದ ಮಳೆಯಿಂದಾಗಿ ಬೆಳ್ತಂಗಡಿ ತಾಲ್ಲೂಕಿನ ಪೆರುವಾಜೆ ಜಲದುರ್ಗಾ ದೇವಿ ದೇವಸ್ಥಾನಕ್ಕೆ ನೀರು ನುಗ್ಗಿತ್ತು.

ಗ್ಯಾರೇಜ್‌ ಕುಸಿದು ವ್ಯಕ್ತಿ ಸಾವು

ಹುಕ್ಕೇರಿ(ಬೆಳಗಾವಿ): ಪಟ್ಟಣದಲ್ಲಿ ಭಾನುವಾರ ಭಾರಿ ಮಳೆಗೆ ಗ್ಯಾರೇಜ್‌ ಕುಸಿದು ಅಸ್ಲಾಂ ಮೀರಾಸಾಬ್‌ ಅಲ್ಲಾಖಾನ್‌(52) ಎಂಬುವರು ಮೃತಪಟ್ಟಿದ್ದಾರೆ. ಮನೆಗಳಿಗೆ ನೀರು ನುಗ್ಗಿತು. ರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳು ನೀರಿನಲ್ಲಿ ತೇಲಿ ಹೋದವು. ವಿದ್ಯುತ್‌ ಸಂಪರ್ಕ ಸಂಪೂರ್ಣ ಸ್ಥಗಿತವಾಗಿದೆ. ನೀರಿನ ಸೆಳೆತಕ್ಕೆ ಸಿಲುಕಿದ್ದ ವೃದ್ಧರೊಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT