ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರ ಕೂಗನ್ನು ಅಡಗಿಸುವುದು ಕಾಂಗ್ರೆಸ್‌ಗೆ ದೊಡ್ಡ ಕೆಲಸವೇನಲ್ಲ: ಬಿಜೆಪಿ

Last Updated 28 ಜೂನ್ 2021, 9:52 IST
ಅಕ್ಷರ ಗಾತ್ರ

ಬೆಂಗಳೂರು: ದಲಿತ ನಾಯಕರಿಗೆ ಒಲಿದು ಬಂದಿದ್ದ ಮುಖ್ಯಮಂತ್ರಿ ಸ್ಥಾನವನ್ನು ಕುತಂತ್ರದಿಂದ ಕಾಂಗ್ರೆಸ್‌ ತಪ್ಪಿಸಿತ್ತು. ಈ ನಡುವೆ ಮುಸ್ಲಿಮರಿಗೂ ಅವಕಾಶ ನೀಡಿ ಎಂದು ಸಿ.ಎಂ. ಇಬ್ರಾಹಿಂ ಹೇಳುತ್ತಿದ್ದಾರೆ. ದಲಿತ ಸಿಎಂ ಕೂಗನ್ನು ದಮನಿಸಿರುವ ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ ಕೂಗನ್ನು ಅಡಗಿಸುವುದು ದೊಡ್ಡ ಕೆಲಸವೇನಲ್ಲ ಎಂದು ರಾಜ್ಯ ಬಿಜೆಪಿ ದೂರಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಬಣವಿಲ್ಲ ಎಂದು ಪಂಚತಂತ್ರ ಕತೆ ಹೆಣೆಯುತ್ತಿದ್ದ ಸಿದ್ದರಾಮಯ್ಯ ಅವರೇ, ಮಾಜಿ ಸಚಿವ ಮುನಿಯಪ್ಪ‌‌‌ ಅವರ ನಿವಾಸದಲ್ಲಿ ಪರಮೇಶ್ವರ್, ಹರಿಪ್ರಸಾದ್ ಸಭೆ ನಡೆಸಿದ್ದು ಏಕೆ? ಕಾಂಗ್ರೆಸ್ ದೇಶದ ವಿರುದ್ಧ ಟೂಲ್‌ಕಿಟ್‌ ಮಾಡುವ ಬದಲು ತನ್ನಲ್ಲಿರುವ ಬಣಗಳ ಟೂಲ್‌ಕಿಟ್‌ ತಯಾರಿಸಲಿ ಎಂದಿದೆ.

ಕಾಂಗ್ರೆಸ್ ಪಕ್ಷದೊಳಗಿನ ಒಳ‌ಜಗಳ ಈಗ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ಮೂಲ‌ ಕಾಂಗ್ರೆಸ್ಸಿಗರು ಒಟ್ಟಾಗುತ್ತಿದ್ದಾರೆ. ಮುನಿಯಪ್ಪ ಅವರ ಮನೆಯಲ್ಲಿ ನಡೆದ ಗೌಪ್ಯ ಸಭೆಯೇ ಅದಕ್ಕೆ ಸಾಕ್ಷಿಯಾಗಿದೆ. ಉಸ್ತುವಾರಿ ಸುರ್ಜೆವಾಲ ಮಾತಿಗೆ ಕವಡೆ ಕಾಸಿನ‌ ಕಿಮ್ಮತ್ತು ಇಲ್ಲದಂತಾಗಿದೆ ಎಂದು ಹೇಳಿದೆ.

ದುರ್ಬಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಈಗ ಸಿದ್ದರಾಮಯ್ಯ ಬೆಂಬಲಿಗರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ಮೂಲ ಕಾಂಗ್ರೆಸ್‌ ನಾಯಕರು ಕೂಡಾ ತಮ್ಮ ದಾಳ ಉರುಳಿಸುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ಈಗ ದಿನಕ್ಕೊಬ್ಬರಂತೆ ಮುಖ್ಯಮಂತ್ರಿ ಆಕಾಂಕ್ಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದೆ.

ಕಾಂಗ್ರೆಸ್ ಪಕ್ಷದಲ್ಲಿ ಅರಾಜಕತೆ ಎಷ್ಟಿದೆ ಎಂದರೆ, ಇರೋದು 68 ಶಾಸಕರು, ಆದರೆ ಮುಖ್ಯಮಂತ್ರಿ ಪದವಿಯ ಆಕಾಂಕ್ಷಿಗಳು ಮಾತ್ರ ನೂರಕ್ಕೂ ಅಧಿಕ! ಕಾಂಗ್ರೆಸ್ ಪಕ್ಷದ ಅಧಿಕೃತ ಮೂಲದಿಂದಲೇ ನೂರಕ್ಕೂ ಹೆಚ್ಚು ಜನ ಸಿಎಂ ಕುರ್ಚಿಯ ಆಕಾಂಕ್ಷಿಗಳು ನಮ್ಮಲ್ಲಿದ್ದಾರೆ ಎಂದು ಹೇಳಲಾಗಿತ್ತು. ಅದೀಗ ನಿಜವಾಗುತ್ತಿದೆ! ಎಂದು ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT