ಸೋಮವಾರ, ಸೆಪ್ಟೆಂಬರ್ 20, 2021
26 °C
ಸಾರ್ವಜನಿಕ ಹಿತಾಸಕ್ತಿ ಅರ್ಜಿ: ಶುಲ್ಕ ಪಾವತಿ ವಿಳಂಬ

ಶುಲ್ಕ ಪಾವತಿ ವಿಳಂಬ: ಹೈಕೋರ್ಟ್‌ ಕ್ಷಮೆ ಯಾಚಿಸಿದ ಹಿರೇಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2013–14 ರಲ್ಲಿ ನಡೆದ 197 ಮಂದಿ ಸಹಾಯಕ ಸರ್ಕಾರಿ ಅಭಿಯೋಜಕರ (ಎಪಿಪಿ) ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ನ್ಯಾಯಾಲಯ ಶುಲ್ಕ ಪಾವತಿಸದೇ ಇರುವುದು ಮತ್ತು ವಿಚಾರಣೆಗೆ ಸಹಕಾರ ನೀಡದೇ ಇರುವ ಕುರಿತು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್‌.ಆರ್‌. ಹಿರೇಮಠ ಹೈಕೋರ್ಟ್‌ನ ಕ್ಷಮೆ ಯಾಚಿಸಿದ್ದಾರೆ.

ಹಿರೇಮಠ ಹಾಗೂ ವಕೀಲೆ ಸುಧಾ ಕಾಟ್ವಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠದಲ್ಲಿ ಮಂಗಳವಾರ ನಡೆಯಿತು. ಆಗ ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾದ ಹಿರೇಮಠ ಅವರು, ನ್ಯಾಯಾಲಯದ ಕ್ಷಮೆ ಯಾಚಿಸಿದರು.

ಅರ್ಜಿದಾರರಾದ ಹಿರೇಮಠ ಮತ್ತು ಸುಧಾ ಕಾಟ್ವಾ ಅವರು ವಿಚಾರಣೆಗೆ ಸಹಕಾರ ನೀಡುತ್ತಿಲ್ಲ ಹಾಗೂ ಶುಲ್ಕ ಪಾವತಿಗೂ ಹಣ ನೀಡಿಲ್ಲ ಎಂದು ಅವರ ಪರ ವಕೀಲ ಎಸ್‌. ಉಮಾಪತಿ ಹಿಂದಿನ ವಿಚಾರಣೆ ವೇಳೆ ದೂರಿದ್ದರು. ವಿಚಾರಣೆಗೆ ಸಹಕರಿಸದಿದ್ದರೆ ಅರ್ಜಿದಾರರಿಗೆ ದಂಡ ವಿಧಿಸಿ, ಪಿಐಎಲ್‌ ಸಲ್ಲಿಸದಂತೆ ನಿರ್ಬಂಧ ಹೇರುವುದಾಗಿ ವಿಭಾಗೀಯ ಪೀಠ ಎಚ್ಚರಿಕೆ ನೀಡಿತ್ತು.

‘ನ್ಯಾಯಾಲಯದ ಅಭಿಪ್ರಾಯ ಆಗಸ್ಟ್‌ 1ರಂದು ಪತ್ರಿಕೆಗಳನ್ನು ನೋಡಿದಾಗಷ್ಟೆ ನನಗೆ ತಿಳಿಯಿತು. ಈ ಹಿಂದೆ ನಾವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದಾಗ ಯಾವತ್ತೂ ₹ 5,000 ದಿಂದ ₹ 10,000 ಮೀರಿರಲಿಲ್ಲ. ಇದೇ ಮೊದಲ ಬಾರಿಗೆ ಲಕ್ಷಾಂತರ ರೂಪಾಯಿ ಶುಲ್ಕ ಪಾವತಿಸಬೇಕಿದೆ. ಅಷ್ಟೊಂದು ಮೊತ್ತ ನಮ್ಮ ಸಂಸ್ಥೆಯ ಬಳಿ ಇಲ್ಲ. ದೇಣಿಗೆ ಸಂಗ್ರಹಿಸಿ ಶುಲ್ಕ ಪಾವತಿಸಲು ಅವಕಾಶ ನೀಡಬೇಕು’ ಎಂದು ಹಿರೇಮಠ ಮನವಿ ಮಾಡಿದರು.

ತಮ್ಮ ಪರ ವಾದ ಮಂಡನೆಗೆ ಬೇರೆ ವಕೀಲರನ್ನು ನಿಯೋಜಿಸುವುದಾಗಿ ಹಿರೇಮಠ ತಿಳಿಸಿದರು. ಪ್ರಕರಣದಿಂದ ಹಿಂದೆ ಸರಿಯಲು ಅನುಮತಿ ನೀಡುವಂತೆ ವಕೀಲ ಉಮಾಪತಿ ಮನವಿ ಸಲ್ಲಿಸಿ
ದರು. ಆದರೆ, ಬೇರೊಬ್ಬರನ್ನು ನಿಯೋಜಿಸುವವರೆಗೂ ವಕೀಲರು ಹಿಂದೆ ಸರಿಯಲು ಅನುಮತಿ ನೀಡುವುದಿಲ್ಲ ಎಂದು ನ್ಯಾಯಪೀಠ ಹೇಳಿತು.

ನ್ಯಾಯಾಲಯ ಶುಲ್ಕ ಪಾವತಿಗೆ ಒಂದು ತಿಂಗಳ ಕಾಲಾವಕಾಶ ನೀಡಿರುವ ಹೈಕೋರ್ಟ್‌, ಹಿರೇಮಠ ಅವರು ಸಲ್ಲಿಸಿದ್ದ ಪ್ರಮಾಣಪತ್ರವನ್ನು ದಾಖಲು ಮಾಡಿಕೊಂಡಿತು. ಸೆಪ್ಟೆಂಬರ್‌ 13ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು