ಸೋಮವಾರ, ನವೆಂಬರ್ 30, 2020
26 °C
ವಿಶ್ವವಿದ್ಯಾಲಯಗಳಿಗೆ ಹೈಕೋರ್ಟ್‌ ನಿರ್ದೇಶನ

ತಾತ್ಕಾಲಿಕ ಪದವಿ ಪ್ರಮಾಣಪತ್ರ ವಿತರಿಸಲು ವಿವಿಗಳಿಗೆ ಹೈಕೋರ್ಟ್‌ ನಿರ್ದೇಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಕಾರಣದಿಂದ ಘಟಿಕೋತ್ಸವಗಳನ್ನು ಮುಂದೂಡಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುವುದನ್ನು ತಪ್ಪಿಸಲು ಎಲ್ಲ ವಿಶ್ವವಿದ್ಯಾಲಯಗಳು ತಾತ್ಕಾಲಿಕ ಪದವಿ ಪ್ರಮಾಣಪತ್ರಗಳನ್ನು ವಿತರಿಸಬೇಕು. ಅವುಗಳನ್ನು ಪದವಿ ಪ್ರಮಾಣಪತ್ರಕ್ಕೆ ಸಮನಾಗಿ ಪರಿಗಣಿಸಬೇಕು ಎಂದು ಹೈಕೋರ್ಟ್‌ ನಿರ್ದೇಶನ ನೀಡಿದೆ.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ(ಆರ್‌ಜಿಯುಎಚ್‌ಎಸ್‌)ದ ವ್ಯಾಪ್ತಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕುರುಂಜಿ ವೆಂಕಟರಮಣಗೌಡ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ನಿರ್ದೇಶನ ನೀಡಿದೆ.

ಘಟಿಕೋತ್ಸವ ತಡ ಆಗುತ್ತಿರುವುದರಿಂದ ವಿಶ್ವವಿದ್ಯಾಲಯವು ಅದಕ್ಕೆ ಪರ್ಯಾಯವಾಗಿ ಪ್ರಮಾಣಪತ್ರ ವಿತರಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ‘ಸಾಮಾನ್ಯವಾಗಿ ಘಟಿಕೋತ್ಸವದಲ್ಲೇ ಪದವಿ ಪ್ರದಾನ ಮಾಡಲಾಗುತ್ತದೆ. ಆದರೆ, ತಾತ್ಕಾಲಿಕ ಪದವಿ ಪ್ರಮಾಣಪತ್ರಗಳ ವಿತರಣೆಗೂ ನಿಯಮಗಳಲ್ಲಿ ಅವಕಾಶವಿದೆ’ ಎಂದು ಆರ್‌ಜಿಯುಎಚ್‌ಎಸ್‌ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.

‘ಘಟಿಕೋತ್ಸವ ವಿದ್ಯಾರ್ಥಿ ಜೀವನದ ಒಂದು ಪ್ರಮುಖ ಘಟ್ಟವೂ ಹೌದು. ಆದರೆ, ಸದ್ಯದ ಸ್ಥಿತಿಯಲ್ಲಿ ಘಟಿಕೋತ್ಸವ ನಡೆಸಲಾಗದ ವಾತಾವರಣ ಇದೆ. ಪದವಿ ಪ್ರಮಾಣಪತ್ರವು ವಿದ್ಯಾರ್ಥಿಗೆ ದೇಶ ಅಥವಾ ವಿದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವುದು ಮತ್ತು ಉದ್ಯೋಗಕ್ಕೆ ಸೇರಲು ಅನಿವಾರ್ಯ. ಇಂತಹ ಪ್ರಮಾಣಪತ್ರಗಳು ವಿಶ್ವವಿದ್ಯಾಲಯಗಳ ಕಪಾಟಿನಲ್ಲಿ ಇರುವುದಕ್ಕಿಂತಲೂ ವಿದ್ಯಾರ್ಥಿಯ ಕೈಯಲ್ಲಿದ್ದರೆ ಪ್ರಯೋಜನಕ್ಕೆ ಬರುತ್ತವೆ’ ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಹೇಳಿದ್ದಾರೆ.

ಘಟಿಕೋತ್ಸವ ಆಯೋಜಿಸುವುದು ವಿಳಂಬ ಆಗುವ ಸಂದರ್ಭಗಳಲ್ಲಿ ಪರ್ಯಾಯ ರೂಪದಲ್ಲಿ ಪ್ರಮಾಣಪತ್ರ ವಿತರಿಸುವ ವ್ಯವಸ್ಥೆಯನ್ನು ವಿಶ್ವವಿದ್ಯಾಲಯಗಳು ರೂಪಿಸಿಕೊಳ್ಳಬೇಕು. ಇಂತಹ ಪ್ರಮಾಣಪತ್ರಗಳನ್ನು ಪದವಿ ಪ್ರಮಾಣಪತ್ರಗಳಿಗೆ ಸಮನಾಗಿ ಪರಿಗಣಿಸಬೇಕು ಎಂಬುದನ್ನು ಅವುಗಳ ಮೇಲೆ ನಮೂದಿಸಬೇಕು ಎಂದು ನ್ಯಾಯಪೀಠ ಹೇಳಿದೆ.

ಅರ್ಜಿದಾರ ವಿದ್ಯಾರ್ಥಿಗೆ ಎರಡು ವಾರಗಳೊಳಗೆ ತಾತ್ಕಾಲಿಕ ಪ್ರಮಾಣಪತ್ರ ವಿತರಿಸುವಂತೆ ನ್ಯಾಯಾಲಯ ಆದೇಶಿಸಿದೆ. ವಿಳಂಬ ಮಾಡಿದಲ್ಲಿ ಪ್ರತಿ ವಾರಕ್ಕೆ ₹ 5,000 ದಂತೆ ದಂಡ ಪಾವತಿಸಬೇಕು ಎಂದು ಸೂಚಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು