ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ: ರಾಜ್ಯದ ಪಾಲು ಹೆಚ್ಚಿಸಿ

ಕೇಂದ್ರಕ್ಕೆ ಹೈಕೋರ್ಟ್‌ ವಿಭಾಗೀಯ ಪೀಠ ಸೂಚನೆ
Last Updated 4 ಮೇ 2021, 20:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕಕ್ಕೆ ಪೂರೈಕೆಯಾಗುವ ಆಮ್ಲಜನಕದ ಪಾಲನ್ನು (ಕೋಟಾ) ತಾತ್ಕಾಲಿಕವಾಗಿ ಹೆಚ್ಚಿಸಲು ಸಾಧ್ಯವೆ ಎಂದು ಕೇಂದ್ರವನ್ನು ಪ್ರಶ್ನಿಸಿರುವ ಹೈಕೋರ್ಟ್‌, ಈ ಕುರಿತು ಬುಧವಾರವೇ ಪ್ರತಿಕ್ರಿಯೆ ಸಲ್ಲಿಸುವಂತೆ ತಾಕೀತು ಮಾಡಿದೆ.

ರಾಜ್ಯದಲ್ಲಿ ಆಮ್ಲಜನಕದ ತೀವ್ರ ಕೊರತೆಯಿಂದ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ತೊಡಕಾಗಿರುವ ಕುರಿತು ಮಾಧ್ಯಮಗಳಲ್ಲಿ ವರದಿಗಳನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರಿದ್ದ ವಿಭಾಗೀಯ ಪೀಠ, ಕೋವಿಡ್‌ಗೆ ಸಂಬಂಧಿಸಿದ 19 ಅರ್ಜಿಗಳನ್ನು ಸ್ವಯಂಪ್ರೇರಿತವಾಗಿ ಮುಂಚಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿತು.

‘ರಾಜ್ಯಕ್ಕೆ ಪೂರೈಕೆಯಾಗಬೇಕಾದ ಆಮ್ಲಜನಕದ ಪಾಲನ್ನು ಪ್ರತಿದಿನಕ್ಕೆ 802 ಟನ್‌ನಿಂದ 865 ಟನ್‌ಗೆ ಹೆಚ್ಚಿಸಲಾಗಿದೆ. ಆದರೆ, ಬುಧವಾರದ (ಮೇ 5) ವೇಳೆಗೆ ರಾಜ್ಯಕ್ಕೆ ನಿತ್ಯ 1,792 ಟನ್‌ಗಳಷ್ಟು ಆಮ್ಲಜನಕದ ಅಗತ್ಯವಿದೆ’ ಎಂಬ ಮಾಹಿತಿಯನ್ನು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿತು.

ರಾಜ್ಯ ಸರ್ಕಾರದ ಮಾಹಿತಿಯನ್ನು ಪರಿಶೀಲಿಸಿದ ನ್ಯಾಯಪೀಠ, ಆಮ್ಲಜನಕ ಹಂಚಿಕೆಯ ಪ್ರಮಾಣವನ್ನು ತುರ್ತಾಗಿ ಹೆಚ್ಚಿಸಲು ಸಾಧ್ಯವೆ? ಎಂದು ಕೇಳಿತು. ಸಾಮಾನ್ಯ ಸಂದರ್ಭಗಳಲ್ಲಿ ಅನುಸರಿಸುವ ಎಲ್ಲ ಪ್ರಕ್ರಿಯೆಗಳನ್ನು ಬದಿಗಿಟ್ಟು ತೀರ್ಮಾನ ಕೈಗೊಳ್ಳುವ ಕುರಿತು ತನ್ನ ನಿಲುವನ್ನು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

ರಾಜ್ಯದಲ್ಲಿನ ಪರಿಸ್ಥಿತಿಯ ಕುರಿತು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ. ನಾವಡಗಿ, ‘ಸಕ್ರಿಯ ಸೋಂಕು ಪ್ರಕರಣಗಳ ಪೈಕಿ ಶೇಕಡ 17ರಷ್ಟು ಮಂದಿಗೆ ಆಮ್ಲಜನಕ ಪೂರೈಕೆಯ ಹಾಸಿಗೆ ಮತ್ತು ಶೇ 3ರಷ್ಟು ಜನರಿಗೆ ತೀವ್ರ ನಿಗಾ ಘಟಕ (ಐಸಿಯು) ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಮೇ 5ರ ವೇಳೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 3.95 ಲಕ್ಷ ತಲುಪುವ ಸಾಧ್ಯತೆ ಇದೆ’ ಎಂದರು.

ಬುಧವಾರದ ವೇಳೆಗೆ ನಿತ್ಯವೂ 1,792 ಟನ್‌ ಆಮ್ಲಜನಕದ ಅಗತ್ಯವಿದೆ ಎಂದು ಅಂದಾಜು ಮಾಡಲಾಗಿದೆ. ರಾಜ್ಯಕ್ಕೆ ನಿತ್ಯವೂ 1,162 ಟನ್‌ ಆಮ್ಲಜನಕ ಅಗತ್ಯವಿದೆ ಎಂಬ ಬೇಡಿಕೆಯುಳ್ಳ ಪತ್ರವನ್ನು ಏಪ್ರಿಲ್‌ 30ರಂದೇ ಕೇಂದ್ರ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿಗೆ ಬರೆಯಲಾಗಿತ್ತು ಎಂದು ವಿವರಿಸಿದರು.

ಪ್ರಕ್ರಿಯೆಗಳನ್ನು ಬದಿಗಿಟ್ಟು ಯೋಚಿಸಿ: ಈ ವಿಷಯದಲ್ಲಿ ಒಂದಕ್ಕಿಂತ ಹೆಚ್ಚು ಸಚಿವಾಲಯಗಳಿಗೆ ಸಂಬಂಧಿಸಿದೆ. ಆದ್ದರಿಂದ, ನಿಗದಿತ ಪ್ರಕ್ರಿಯೆಯನ್ನು ಅನುಸರಿಸಿದ ಬಳಿಕವೇ ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರದ ಪರ ವಕೀಲರು ಹೇಳಿದರು.

‘ಜನರು ಸಾಯುತ್ತಿದ್ದಾರೆ. ನಿಮ್ಮ ಎಲ್ಲ ಪ್ರಕ್ರಿಯೆಗಳನ್ನೂ ಬದಿಗಿಡಿ. ಆಮ್ಲಜನಕದ ಹಂಚಿಕೆಯ ಪಾಲನ್ನು ಯಾವಾಗಿ
ನಿಂದ ಹೆಚ್ಚಿಸಲು ಸಾಧ್ಯ’ ಎಂದು ನ್ಯಾಯಪೀಠ ಪ್ರಶ್ನಿಸಿತು.

‘ಕರ್ನಾಟಕಕ್ಕೆ ಆಮ್ಲಜನಕದ ಹಂಚಿಕೆಯ ಪಾಲನ್ನು ಹೆಚ್ಚಿಸುವಂತೆ ನಿರ್ದೇಶನ ನೀಡಲು ಕೋರಿ ಸಲ್ಲಿಸಿರುವ ಮನವಿಯನ್ನು ನಾವು ಕೇಂದ್ರ ಸರ್ಕಾರದ ಮುಂದಿಡುತ್ತಿದ್ದೇವೆ. ಈ ಕುರಿತು ಬುಧವಾರ ಬೆಳಿಗ್ಗೆ 10.30ಕ್ಕೆ ವಿಚಾರಣೆ ನಡೆಸಲಾಗುವುದು’ ಎಂದು ವಿಭಾಗೀಯ ಪೀಠ ಹೇಳಿತು.

‘ಕರ್ನಾಟಕಕ್ಕಿಂತ ಕಡಿಮೆ ಸಂಖ್ಯೆಯ ಕೋವಿಡ್‌ ಪ್ರಕರಣಗಳಿರುವ ಕೆಲವು ರಾಜ್ಯಗಳಿಗೆ ಇಲ್ಲಿಗಿಂತಲೂ ಹೆಚ್ಚು ಪ್ರಮಾಣದ ಆಮ್ಲಜನಕ ಹಂಚಿಕೆ ಮಾಡಲಾಗಿದೆ’ ಎಂದು ಹಲವು ವಕೀಲರು ದೂರಿದರು.

‘ಕಡಿಮೆ ಕೋವಿಡ್‌ ಪ್ರಕರಣಗಳಿರುವ ರಾಜ್ಯಗಳಿಗೆ ಹೆಚ್ಚಿನ ಆಮ್ಲಜನಕ ಹಂಚಿಕೆ ಮಾಡಿರುವುದಕ್ಕೆ ಸಮರ್ಥನೆಗಳಿವೆಯೇ’ ಎಂದು ಕೇಂದ್ರವನ್ನು ನ್ಯಾಯಾಲಯ ಪ್ರಶ್ನಿಸಿತು.

ನಿತ್ಯ 927 ಟನ್‌ ಕೊರತೆ

‘ರಾಜ್ಯಕ್ಕೆ ನಿತ್ಯ 865 ಟನ್‌ ಆಮ್ಲಜನಕ ಹಂಚಿಕೆ ಮಾಡಲಾಗಿದೆ. ಆದರೆ, ರಾಜ್ಯದ ಬೇಡಿಕೆ ನಿತ್ಯ 1,792 ಟನ್‌ಗೆ ಏರಿಕೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಈ ಪ್ರಕಾರ, ರಾಜ್ಯಕ್ಕೆ ನಿತ್ಯ 927 ಟನ್‌ಗಳಷ್ಟು ಕೊರತೆ ಉಂಟಾಗಲಿದೆ’ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೇಂದ್ರ ಸರ್ಕಾರಕ್ಕೆ ಬರೆದಿದ್ದ ಪತ್ರದಲ್ಲಿ ತಿಳಿಸಿದ್ದರು.

ರಾಜ್ಯಗಳಿಗೆ ಆಮ್ಲಜನಕದ ಹಂಚಿಕೆಯಾಗುತ್ತಿರುವ ಮಾದರಿಯಲ್ಲಿ ಜಿಲ್ಲಾವಾರು ಹಂಚಿಕೆಗೆ ಯಾವುದೇ ವ್ಯವಸ್ಥೆ ಇಲ್ಲ.

ಐದು ಲಕ್ಷ ಡೋಸ್‌ ರೆಮ್‌ಡಿಸಿವಿರ್‌ಗೆ ಬೇಡಿಕೆ

‘ಮೇ 10ರ ವೇಳೆಗೆ ರಾಜ್ಯದಲ್ಲಿ ನಿತ್ಯವೂ 4.47 ಲಕ್ಷದಷ್ಟು ಕೋವಿಡ್‌ ಪ್ರಕರಣಗಳು ಪತ್ತೆಯಾಗಬಹುದು ಎಂದು ಅಂದಾಜಿಸಲಾಗಿದೆ. ಈ ಅವಧಿಯಲ್ಲಿ ಶ್ವಾಸಕೋಶದ ಅತಿಯಾದ ಸೋಂಕಿನಿಂದ ಬಳಲುವ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ದಿನವೊಂದಕ್ಕೆ 44,500 ವಯಲ್ಸ್‌ ರೆಮ್‌ಡಿಸಿವಿರ್‌ ಚುಚ್ಚುಮದ್ದು ಅಗತ್ಯವಿದೆ. ಮೇ 1ರಿಂದ 15ರವರೆಗಿನ ಅವಧಿಯಲ್ಲಿ 4 ಲಕ್ಷದಿಂದ 5 ಲಕ್ಷದಷ್ಟು ವಯಲ್ಸ್‌ ರೆಮ್‌ಡಿಸಿವಿರ್‌ ಚುಚ್ಚುಮದ್ದು ಹಂಚಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿತು.

ಏಪ್ರಿಲ್‌ 1ರಿಂದ ಮೇ 9ರವರೆಗಿನ ಅವಧಿಗೆ 3,01,300 ವಯಲ್ಸ್‌ ರೆಮ್‌ಡಿಸಿವಿರ್ ಚುಚ್ಚುಮದ್ದನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ ಎಂಬ ಮಾಹಿತಿಯನ್ನೂ ಒದಗಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT