ಮಂಗಳವಾರ, ಮೇ 24, 2022
30 °C
ಸಂಪುಟದ ಕಾರ್ಯವೈಖರಿಗೆ ತಪರಾಕಿ

ಇದೆಂಥಾ ಆಡಳಿತ: ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಕೆಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಈ ಸರ್ಕಾರ ತಾನಾಗಿಯೇ ಏನೂ ಕೆಲಸ ಮಾಡುತ್ತಿಲ್ಲ, ಹೈಕೋರ್ಟ್ ಹೇಳಿದರೂ ಮಾಡುತ್ತಿಲ್ಲ. ಇವರ ವ್ಯವಹಾರಗಳು ಹೇಗೆ ನಡೆಯುತ್ತಿವೆ ಎಂಬುದೇ ಗೊತ್ತಾಗುತ್ತಿಲ್ಲ. ಇದೆಂಥಾ ಆಡಳಿತ ವೈಖರಿ’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರದ ವಿರುದ್ಧ ಕೆಂಡ ಕಾರಿದೆ.

ಅತ್ಯಾಧುನಿಕ ಆಂಬುಲೆನ್ಸ್ ಟೆಂಡರ್ ವಿಚಾರಕ್ಕೆ ಸಂಬಂಧಿಸಿದಂತೆ, ‘ಭಾರತ್‌ ಪುನರುತ್ಥಾನ ಟ್ರಸ್ಟ್‌’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವೆಂಕಟೇಶ ಪಿ. ದಳವಾಯಿ, ‘ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆಂಬುಲೆನ್ಸ್ ನಿರ್ವಹಣಾ ವ್ಯವಸ್ಥೆ ಜಾರಿಗೆ ಈ ಮೊದಲು ಕರೆದಿದ್ದ ₹ 1,800 ಕೋಟಿ ಮೊತ್ತದ ಟೆಂಡರ್ ಅನ್ನು ಸರ್ಕಾರ ರದ್ದುಪಡಿಸಿತ್ತು. ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ ನಂತರ ಆ ಆದೇಶ ಹಿಂಪಡೆದು ಹೊಸ ಟೆಂಡರ್ ಕರೆಯುವುದಾಗಿ ಹೇಳಿತ್ತು. ಆದರೆ, ಈವರೆಗೂ ಕರೆದಿಲ್ಲ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಈ ಮಾತಿಗೆ ಕೆರಳಿದ ಮುಖ್ಯ ನ್ಯಾಯಮೂರ್ತಿಗಳು, ‘ಇಂತಹ ವಿಚಾರಗಳನ್ನು ಸರ್ಕಾರ ಆದ್ಯತೆಯ ಮೇರೆಗೆ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಬೇಕು. ಆದರೆ, ಈ ಪ್ರಕರಣದಲ್ಲಿ 2021ರ ಆಗಸ್ಟ್ 31ರಂದು ಯಾವ ಪರಿಸ್ಥಿತಿ ಇತ್ತೋ, ಅದೇ ಸ್ಥಿತಿ ಇಂದೂ ಇದೆ. ಸರ್ಕಾರದ ನಿರ್ಲಕ್ಷ್ಯದ ಪರಿಣಾಮವಾಗಿ ಹೈಕೋರ್ಟ್‌ಗೆ ಇಷ್ಟೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಹರಿದು ಬರುತ್ತಿವೆ. ಈ ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಿಕ್ಕೇ ಆಗುತ್ತಿಲ್ಲ’ ಎಂದು ಕಿಡಿ ಕಾರಿದರು.

‘ಎಲ್ಲಾ ಪ್ರಕರಣಗಳಲ್ಲೂ ಸರ್ಕಾರ ಇದೇ ರೀತಿ ಸಬೂಬು ಹೇಳುತ್ತಿದೆ. ನಾವು ನಿತ್ಯವೂ ಅಧಿಕಾರಿಗಳನ್ನು ಕೋರ್ಟ್‌ಗೆ ಕರೆಯಿಸಿ ಸೂಚನೆ ನೀಡಬೇಕೇ, ಸರ್ಕಾರದ ಈ ಧೋರಣೆ ನಿಜಕ್ಕೂ ಸರಿಯಲ್ಲ. ಇಂತಹ ಪರಿಸ್ಥಿತಿ ಏಕೆ ಸೃಷ್ಟಿಯಾಗಿದೆ ಎನ್ನುವುದನ್ನು ನ್ಯಾಯಾಲಯ ತಿಳಿಯಬೇಕಿದೆ’ ಎಂದು ಅಸಮಾಧಾನ ಹೊರಹಾಕಿದರು. ವಿಚಾರಣೆಯನ್ನು ಡಿಸೆಂಬರ್ 12ಕ್ಕೆ ಮುಂದೂಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು