ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿದ ಅರ್ಜಿ: ಕಾಯ್ದಿರಿಸಿದ ಆದೇಶ

ಮಠಗಳು ಶಾಸನಾತೀತವೇ: ಹೈಕೋರ್ಟ್‌ ಪ್ರಶ್ನೆ
Last Updated 16 ಡಿಸೆಂಬರ್ 2022, 15:43 IST
ಅಕ್ಷರ ಗಾತ್ರ

ಬೆಂಗಳೂರು: ‘ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು, ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪದಡಿ ಪೊಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಜೈಲಿನಿಂದಲೇ ತಮ್ಮ ಆಣತಿಯ ಅನುಸಾರ ಮಠ ಮತ್ತು ವಿದ್ಯಾಸಂಸ್ಥೆಗಳ ಆಡಳಿತ ನಡೆಸುವುದಾದರೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಗೆ ಭಾರಿ ಹಾನಿಯುಂಟಾಗುತ್ತದೆ’ ಎಂದು ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದರು.

ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್‌.ವಸ್ತ್ರದ ಅವರನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಡಿ.ಎಸ್‌.ಮಲ್ಲಿಕಾರ್ಜುನ ಸೇರಿದಂತೆ ಮೂವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಸುದೀರ್ಘ ವಿಚಾರಣೆ ಆಲಿಸಿ ಆದೇಶ ಕಾಯ್ದಿರಿಸಿತು.

‘ಶರಣರು ಮಠ ಮತ್ತು ವಿದ್ಯಾಪೀಠಕ್ಕೆ ಏಕೈಕ (ಸೋಲ್‌) ಟ್ರಸ್ಟೀ ಮತ್ತು ಅಧ್ಯಕ್ಷರಾಗಿತಕ್ಕದ್ದು ಎಂದು 2010ರ ನವೆಂಬರ್‌ 26ರಂದು ಟ್ರಸ್ಟ್‌ ಡೀಡ್‌ ನಿಗದಿಪಡಿಸಲಾಗಿದೆ. ಇದರ ಅನುಸಾರ ಶರಣರು ಮಠ ಮತ್ತು ವಿದ್ಯಾಪೀಠಗಳ ಆಡಳಿತದ ಸಂಪೂರ್ಣ ಅಧಿಕಾರ ಹೊಂದಿದ್ದಾರೆ. ವಿದ್ಯಾಪೀಠದ ಅಡಿಯಲ್ಲಿ ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ 106 ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಸಾವಿರಾರು ನೌಕರರು ದುಡಿಯುತ್ತಿದ್ದಾರೆ. ಈ ಟ್ರಸ್ಟ್‌ ಸಾರ್ವಜನಿಕ ಟ್ರಸ್ಟ್‌. ಹೀಗಾಗಿ ಶರಣರು ಜೈಲು ಸೇರಿರುವ ಕಾರಣ ಈ ಸಾರ್ವಜನಿಕ ಟ್ರಸ್ಟ್‌ ಅನ್ನು ಸರ್ಕಾರ ರಕ್ಷಣೆ ಮಾಡಬೇಕಿದ್ದು ಅದಕ್ಕಾಗಿಯೇ ಆಡಳಿತಾಧಿಕಾರಿ ನೇಮಕ ಮಾಡಿದೆ’ ಎಂದು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ವಿವರಿಸಿದರು.

‘ಮಾಜಿ ಸಚಿವ ಎಚ್‌.ಏಕಾಂತಯ್ಯ, ನವೀನ್‌ ಹಾಗೂ ಇತರರು ಸರ್ಕಾರಕ್ಕೆ ಸಲ್ಲಿಸಿದ ಮನವಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರ ಚಿತ್ರದುರ್ಗ ಜಿಲ್ಲಾಧಿಕಾರಿಗಳಿಂದ ಮೂರು ಭಿನ್ನಭಿನ್ನ ವರದಿಗಳನ್ನು ತರಿಸಿಕೊಂಡು ನಂತರವೇ ಈ ಕ್ರಮಕ್ಕೆ ಮುಂದಾಗಿದೆ. ಮಠದ ದೈನಂದಿನ ಪೂಜಾ ಕೈಂಕರ್ಯ, ದಾಸೋಹ ಹಾಗೂ ಇತರೆ ಚಟುವಟಿಕೆಗಳಿಗೆ ಆಡಳಿತಾಧಿಕಾರಿಯಿಂದ ಯಾವುದೇ ಅಡ್ಡಿಯುಂಟಾಗುವುದಿಲ್ಲ. ನಾವು ಮಠವನ್ನು ತಡುವುವ ಗೋಜಿಗೇ ಹೋಗುವುದಿಲ್ಲ. ಒಂದು ವೇಳೆ ಈಗಿರುವ ಸ್ಥಿತಿಯೇ ಮುಂದುವರಿದರೆ ಸಾವಿರಾರು ಕೋಟಿ ರೂಪಾಯಿಯ ಆಸ್ತಿ ದುರುಪಯೋಗವಾಗುವ ಸಾಧ್ಯತೆ ಇರುತ್ತದೆ‘ ಎಂದು ಕಳವಳ ವ್ಯಕ್ತಪಡಿಸಿದರು.

ಅರ್ಜಿದಾರರ ಪರ ವಕೀಲ ಜಯಕುಮಾರ್‌ ಎಸ್‌.ಪಾಟೀಲ್, ‘ಸರ್ಕಾರ ಸಂವಿಧಾನದ 162ನೇ ವಿಧಿಯಡಿ ಆಡಳಿತಾಧಿಕಾರಿ ನೇಮಕ ಮಾಡಿರುವುದು ಕಾನೂನು ಬಾಹಿರ. ಮಠಗಳ ಮೇಲೆ ನಿಯಂತ್ರಣ ಹೊಂದಲು ಕಾನೂನಿನಲ್ಲಿ ಅವಕಾಶವಿಲ್ಲ. ಸಿವಿಲ್‌ ಪ್ರೊಸೀಜರ್‌ ಕೋಡ್‌ ಅನುಸಾರ ಕಲಂ 92ರ ಅಡಿಯಲ್ಲಿ ನಿಯಂತ್ರಣ ಹೊಂದಬಹುದು. ಆದ್ದರಿಂದ, ಈ ಪ್ರಕರಣದಲ್ಲಿ ಸರ್ಕಾರ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೋರಿದರು.

‘ಪ್ರತಿಯೊಂದು ಧಾರ್ಮಿಕ ಪಂಗಡಗಳಿಗೆ (ರಿಲಿಜಿಯಸ್ ಡಿನಾಮಿನೇಷನ್–ಮಠ) ಸಂವಿಧಾನದತ್ತವಾದ ಕೆಲವೊಂದು ಮೂಲಭೂತ ಹಕ್ಕುಗಳನ್ನು ಅನುಭವಿಸಲು ಅವಕಾಶವಿರುತ್ತದೆ. ಇದನ್ನು ಸುಪ್ರೀಂ ಕೋರ್ಟ್‌ ಶಿರೂರು ಮಠ ಪ್ರಕರಣದಲ್ಲಿ ಈ ಹಿಂದೆಯೇ ಸ್ಪಷ್ಟಪಡಿಸಿದೆ. ಹೀಗಾಗಿ, ಮುರುಘಾಮಠ ಬಸವತತ್ವ ಅನುಸರಿಸುವ ಧಾರ್ಮಿಕವಾಗಿ ಅಲ್ಪಸಂಖ್ಯಾತರನ್ನು ಹೊಂದಿದ ಅವೈದಿಕ ಪರಂಪರೆಯ ಲಿಂಗಾಯತ ಮಠವಾಗಿದ್ದು, ಆಡಳಿತಾಧಿಕಾರಿ ನೇಮಕ ಸಂವಿಧಾನಬಾಹಿರ ಕ್ರಮ’ ಎಂದು ಪ್ರತಿಪಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಪೀಠ, ‘ನಿಮ್ಮ ಅರ್ಜಿಯಲ್ಲಿ ಕೇವಲ ಲಿಂಗಾಯತ ಮಠ ಎಂದಷ್ಟೇ ಕಾಣಿಸಿದ್ದೀರಿ, ರಿಲಿಜಿಯಸ್ ಡಿನಾಮಿನೇಷನ್ ಅನ್ನು ಪುಷ್ಟೀಕರಿಸುವ ಯಾವುದೇ ಅಂಶಗಳಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿ, ‘ಕೇವಲ, ನಾನು ಇಂಗ್ಲೆಂಡಿನ ರಾಜ ಎಂದರೆ ಆಗುವುದಿಲ್ಲ. ಅದನ್ನು ಸಾಬೀತುಪಡಿಸುವ ದಾಖಲೆ, ಪುರಾವೆಗಳನ್ನು ನ್ಯಾಯಪೀಠಕ್ಕೆ ಒದಗಿಸಬೇಕಲ್ಲವೇ’ ಎಂದು ಪಾಟೀಲರನ್ನು ಪ್ರಶ್ನಿಸಿತು.

‘ಈ ಮಠಕ್ಕೆ ರಾಜ್ಯದ ಮಠಗಳ ಇತಿಹಾಸದಲ್ಲೇ ಅತ್ಯಂತ ಮಹತ್ವದ ಸ್ಥಾನ, ಗೌರವ ಮತ್ತು ಘನತೆಯಿದೆ. ಇದು ಅಲ್ಲಮಪ್ರಭುಗಳು ಸ್ಥಾಪಿಸಿದ ಮಠ. ಈಗ ಮಠದ ಪೀಠಾಧಿಪತಿ ಯಾರಿದ್ದಾರೆ ಎಂಬುದು ಮುಖ್ಯವಲ್ಲ. ಈ ಮಠಕ್ಕೆ 1,600 ಕೋಟಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಇದೆ ಎಂದು ನೀವೇ ಹೇಳುತ್ತಿದ್ದೀರಿ, ಮೇಲಾಗಿ ವಿರಕ್ತ ಮಠ ಎನ್ನುತ್ತಿದ್ದೀರಿ, ಆದರೆ ಸ್ವಾಮಿಗಳ ಅವಿರಕ್ತ ನಡೆ ಸರಿಯೇ’ ಎಂದು ನ್ಯಾಯಪೀಠ ಕೆಣಕಿತು.

‘ಒಂದು ವೇಳೆ ಶರಣರು ಜಾಮೀನು ಪಡೆದು ಹೊರಬಂದರೆ ಆಗ ಆಡಳಿತವನ್ನು ಬಿಟ್ಟುಕೊಡುತ್ತೀರಾ’ ಎಂದು ಅಡ್ವೊಕೇಟ್‌ ಜನರಲ್‌ ಅವರನ್ನು ನ್ಯಾಯಪೀಠ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ನಾವದಗಿ ಅವರು, ‘ರಾಜ್ಯದ ಮಠಗಳ ಇತಿಹಾಸದಲ್ಲೇ ಪೀಠಾಧಿಪತಿಯೊಬ್ಬರು ಇಂತಹ ಗಂಭೀರ ಕ್ರಿಮಿನಲ್‌ ಪ್ರಕರಣದಲ್ಲಿ ಜೈಲು ಪಾಲಾದ ಉದಾಹರಣೆಗಳಿಲ್ಲ. ಒಂದು ವೇಳೆ ಶರಣರಿಗೆ ಜಾಮೀನು ದೊರೆತದ್ದೇ ಆದರೆ, ಆಗ ಸರ್ಕಾರ ಈ ಅಂಶವನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಲಿದೆ’ ಎಂದರು.

ಮಧ್ಯಾಹ್ನ 2.4ರಿಂದ 6.10 ನಿಮಿಷದ ವರೆಗೆ ನಡೆದ ಸುದೀರ್ಘ ವಿಚಾರಣೆಯಲ್ಲಿ ನ್ಯಾಯಪೀಠವು ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ್‌ ಹಾಗೂ ಪ್ರಭುಲಿಂಗ ಕೆ.ನಾವದಗಿ ಅವರು ಮಂಡಿಸಿದ ಪ್ರಮುಖ ಅಂಶಗಳನ್ನು ವಿಡಿಯೊ ದಾಖಲೆ ಮಾಡಿಕೊಂಡಿತು.

ಅರ್ಜಿದಾರರಿಗೆ ನ್ಯಾಯಪೀಠದ ಪ್ರಶ್ನೆಗಳು

* ದೇವಸ್ಥಾನಗಳು ಮತ್ತು ಮಠಗಳ ನಡುವಿನ ವ್ಯತ್ಯಾಸವೇನು? ಮಠಗಳು ಶಾಸನಾತೀತವೇ ?

* ಮಠವು ವಾರ್ಷಿಕವಾಗಿ ಕೇಂದ್ರ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ದಾಖಲೆಗಳನ್ನು ಒದಗಿಸಿ. ಒಂದು ವೇಳೆ ಪೀಠಾಧಿಪತಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದರೆ ಆಗ ನೀವು ಮಠದ ಆಡಳಿತಕ್ಕೆ ರೂಪಿಸಿಕೊಳ್ಳಬಹುದಾದ ಪರ್ಯಾಯ ಮಾರ್ಗವೇನು?

* ಆದಾಯ ಮಿತಿಯಿಂದ ವಿನಾಯ್ತಿ ಹೊಂದಿದ ಮಠಕ್ಕೆ ಬರುವ ಆದಾಯ ಮತ್ತು ನೌಕರರ ಸಂಬಳ ಸಾರಿಗೆ ಖರ್ಚು ಎಷ್ಟು?

* ಮುರುಘಾ ಮಠ ವಿರಕ್ತ ಮಠ ಎನ್ನುತ್ತಿದ್ದೀರಿ. ಅರ್ಜಿಯಲ್ಲಿ ಈ ಕುರಿತಂತೆ ಎಲ್ಲಾದರೂ ವಿವರಿಸಿದ್ದೀರಾ?

* ಎಂ.ಎಂ.ಕಲ್ಬುರ್ಗಿ ಅವರನ್ನು ಆಧರಿಸಿ ಕೇಳುವುದಾದರೆ ಇದು ವಿರಕ್ತ ಮಠವೇನೊ ಸರಿ. ಆದರೆ, ಸ್ವಾಮಿಗಳು ಅವಿರಕ್ತ ಚುಟುವಟಿಕೆಯಲ್ಲಿ ತೊಡಗಿದ್ದರೇ?

* ರಾಜಾ ಪ್ರತ್ಯಕ್ಷ ದೇವತಾಃ ಎಂಬ ಮಾತಿದೆ. ಅಂತೆಯೇ; ಸಿದ್ಧ, ಆರೂಢ, ಸಂನ್ಯಾಸದ ಪರಂಪರೆಗಳನ್ನು ಗಮನಿಸಿದಾಗ ಲಿಂಗಾಯತ ವಿರಕ್ತ ಮಠಗಳು ಸಂಘಜೀವನದ ಭಾಗವೇ ಆಗಿವೆ. ಪೀಠಾಧಿಪತಿಗಳು ತಮ್ಮ ಪಾಲಿಗೆ ಅತ್ಯಂತ ಕಡಿಮೆ ಅನುಕೂಲಗಳನ್ನು ಹೊಂದಿರುತ್ತಾರಲ್ಲವೇ?

* ಮಠದ ಉತ್ತರಾಧಿಕಾರಿಯನ್ನು ನೇಮಕ ಮಾಡುವುದು ಹೇಗೆ? ಇಂತಹ ಸಂಕಟದ ಸಂದರ್ಭಗಳು ಎದುರಾದಾಗ ಟ್ರಸ್ಟ್‌ ಚಟುವಟಿಕೆಗಳು ಹೇಗೆ ನಡೆಯಬೇಕೆಂಬ ಬಗ್ಗೆ ನಿಮ್ಮ ಬೈ–ಲಾದಲ್ಲಿ ವಿವರಣೆ ಎಲ್ಲಿದೆ?

* ಒಬ್ಬ ಟ್ರಸ್ಟೀಯನ್ನು ತೆಗೆದುಹಾಕುವ ಬಗೆ ಮತ್ತು ಅದಕ್ಕಿರುವ ಬೈ–ಲಾ ಕ್ರಮಗಳೇನು?

* ಈಗಿರುವ ಉಸ್ತುವಾರಿ ಸ್ವಾಮೀಜಿಗೆ ಜಿಪಿಎ (ಸಾಮಾನ್ಯ ಅಧಿಕಾರ ಪತ್ರ) ನೀಡಿರುವುದಕ್ಕೆ ಕಾನೂನು ಮಾನ್ಯತೆ ಎಲ್ಲಿದೆ?

* ತಮ್ಮ ಅನುಪಸ್ಥಿತಿ ಅಥವಾ ಮಠದಿಂದ ಹೊರಗೆ ಇರಬೇಕಾದ ಸಂದರ್ಭ ಬಂದಲ್ಲಿ ಪೀಠಾಧಿಪತಿಯು ‘ಏಜೆಂಟ್‌‘ ಅನ್ನು ನೇಮಕ ಮಾಡುವ ಬಗ್ಗೆ ನೀವು ಯಾವ ರೀತಿಯ ಕ್ರಮ ಅನುಸರಿಸುತ್ತಿದ್ದೀರಿ?

ರಾಜ್ಯ ಸರ್ಕಾರಕ್ಕೆ ಕೇಳಿದ ಪ್ರಶ್ನೆಗಳು

* ಒಂದು ವೇಳೆ ಅರ್ಜಿದಾರರು ಒಪ್ಪಿಕೊಂಡರೆ ಅವರು ಸೂಚಿಸುವ ಸಲಹೆಗಾರರನ್ನು ಉಳಿಸಿಕೊಂಡು ಆಡಳಿತಾಧಿಕಾರಿ ತಮ್ಮ ಕಾರ್ಯ ನಿರ್ವಹಿಸಲು ಸಾಧ್ಯವೇ?

* ಮಠಗಳ ಮೇಲೆ ನಿಯಂತ್ರಣ ಹೊಂದುವ ಕುರಿತಂತೆ ಯಾವುದೇ ಶಾಸನಗಳಿಲ್ಲವೇ?

* ಈ ರೀತಿಯ ಸಾಮ್ಯತೆ ಹೊಂದಿದ ಪ್ರಕರಣ ದೇಶದ ಇನ್ನಾವುದೇ ಭಾಗದಲ್ಲಿ ನಡೆದಿದ್ದು, ಅದಕ್ಕೆ ಯಾವುದಾದರೂ ಹೈಕೋರ್ಟ್‌ ನೀಡಿರುವ ತೀರ್ಪುಗಳಿದ್ದರೆ ನ್ಯಾಯಪೀಠಕ್ಕೆ ವಿವರಿಸಿಬಲ್ಲಿರಾ?

* ಪಿ.ಎಸ್.ವಸ್ತ್ರದ ಅವರು ಎಂದು ಅಧಿಕಾರ ವಹಿಸಿಕೊಂಡರು? ಅವರು ಅಧಿಕಾರ ವಹಿಸಿಕೊಂಡ ವೇಳೆ ಯಾರು ಹಾಜರಿದ್ದರು? ಆ ಪ್ರಕ್ರಿಯೆಯನ್ನು ವಿಡಿಯೊ ದಾಖಲೆ ಮಾಡಿದ್ದೀರಾ? ಸ್ಥಳದಲ್ಲಿ ಹಾಜರಿದ್ದು ಮಹಜರಿಗೆ ಸಹಿ ಹಾಕಿದವರ ಹೆಸರು ವಿವರಗಳೇನು?

* ಇಂತಹ ಸಂದರ್ಭದಲ್ಲಿ ವಿಶ್ವಾಸಾರ್ಹ ವ್ಯಕ್ತಿಗಳು ಹಾಜರಿದ್ದು ಮಹಜರಿಗೆ ಸಹಿ ಹಾಕಬೇಕಾದ್ದು ಅವಶ್ಯವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT