ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ. ಪ್ರಕರಣ: ರಾಜ್ಯ ಸರ್ಕಾರ, ಎಸ್‌ಐಟಿಗೆ ಹೈಕೋರ್ಟ್ ನೋಟಿಸ್

Last Updated 5 ಏಪ್ರಿಲ್ 2021, 20:25 IST
ಅಕ್ಷರ ಗಾತ್ರ

ಬೆಂಗಳೂರು: ಸಿ.ಡಿ ಪ್ರಕರಣದ ತನಿಖೆ ಸಂಬಂಧ ರಾಜ್ಯ ಸರ್ಕಾರ ಮತ್ತು ವಿಶೇಷ ತನಿಖಾ ತಂಡಕ್ಕೆ(ಎಸ್‌ಐಟಿ) ನೋಟಿಸ್ ನೀಡಲು ಹೈಕೋರ್ಟ್‌ ಆದೇಶಿಸಿದೆ.

ತನಿಖೆಯ ಪ್ರಗತಿ ಕುರಿತ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಎಸ್‌ಐಟಿಗೆ ನಿರ್ದೇಶನ ನೀಡಿದೆ. ಸ್ವತಂತ್ರವಾಗಿ ತನಿಖೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ಇಬ್ಬರು ವಕೀಲರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮುರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಸಿಬಿಐ ತನಿಖೆ ಅಥವಾ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಕೇಂದ್ರ ತನಿಖಾ ತಂಡದಿಂದ ತನಿಖೆ ನಡೆಸಬೇಕು ಎಂದು ಎಸ್. ಉಮೇಶ್ ಕೋರಿದ್ದಾರೆ. ‘ಸೂಕ್ಷ್ಮ ವಿಷಯಗಳಲ್ಲಿ ಮಾಧ್ಯಮಗಳಲ್ಲಿ ಪ್ರಸಾರಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ರೂಪಿಸಿರುವ ಮಾರ್ಗಸೂಚಿಗಳು ಈ ಸಿ.ಡಿ ಪ್ರಕರಣಕ್ಕೆ ಅನ್ವಯವಾಗುತ್ತವೆ’ ಎಂದು ಅವರು ತಿಳಿಸಿದ್ದಾರೆ.

ಈ ಪ್ರಕರಣದ ತನಿಖೆ ನಡೆಸಲು ಎಸ್‌ಐಟಿ ರಚಿಸಿ ನಗರ ಪೊಲೀಸ್ ಆಯುಕ್ತರು ಹೊರಡಿಸಿರುವ ಆದೇಶ ರದ್ದುಗೊಳಿಸುವಂತೆ ವಕೀಲರಾದ ಗೀತಾ ಮಿಶ್ರಾ ಕೋರಿದ್ದಾರೆ. ‘ರಮೇಶ ಜಾರಕಿಹೊಳಿ ಅವರ ಪತ್ರ ಆಧರಿಸಿ ಎಸ್‌ಐಟಿ ರಚನೆ ಮಾಡಲಾಗಿದೆ. ಎಫ್ಐಆರ್, ಸರ್ಕಾರ ಅಧಿಸೂಚನೆ ಮತ್ತು ಎಸ್‌ಐಟಿ ರಚನೆ ಮಾಡಲು ಇರುವ ಕಾನೂನು ಯಾವುದು ಎಂಬುದನ್ನು ಉಲ್ಲೇಖಿಸದೆ ಆದೇಶ ಹೊರಡಿಸಲಾಗಿದೆ. ಮಾಧ್ಯಮ ಪ್ರತಿನಿಧಿಗಳಿಗೆ ತನಿಖೆಯ ಕುರಿತು ಮಾಹಿತಿ ನೀಡುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು. ತನಿಖೆಯ ಮಾಹಿತಿ ಬಹಿರಂಗಪಡಿಸುವುದು ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾದ ನಡೆ’ ಎಂದು ಅವರು ದೂರಿದ್ದಾರೆ.

‘ಎಫ್‌ಐಆರ್ ದಾಖಲಾಗದೆ ಎಸ್‌ಐಟಿ ಹೇಗೆ ರಚಿಸಲಾಯಿತು’ ಎಂದು ಮೌಖಿಕವಾಗಿ ಪ್ರಶ್ನಿಸಿದ ಪೀಠ, ತನಿಖೆಯ ಪ್ರಗತಿ ವರದಿಯನ್ನು ಏ.17ರೊಳಗೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿತು.

ರಮೇಶ ಜಾರಕಿಹೊಳಿಗೆ ಕೋವಿಡ್‌
ಬೆಂಗಳೂರು:
ಎಸ್‌ಐಟಿ ಅಧಿಕಾರಿಗಳ ಎದುರು ಸೋಮವಾರ ಬೆಳಿಗ್ಗೆ ಹಾಜರಾಗಬೇಕಿದ್ದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ, ‘ನನಗೆ ಕೊರೊನಾ ಸೋಂಕು ತಗುಲಿದೆ’ ಎಂಬ ಕಾರಣ ನೀಡಿ ವಿಚಾರಣೆಗೆ ಗೈರಾದರು.

ಎಸ್‌ಐಟಿ ಅಧಿಕಾರಿಗಳಿಗೆ ಪತ್ರ ಕಳುಹಿಸಿರುವ ರಮೇಶ, ‘ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಕಾರು ಚಾಲಕನಿಗೂ ಕೋವಿಡ್ ತಗುಲಿದೆ’ ಎಂದಿದ್ದಾರೆ.

‘ಆರೋಗ್ಯದಲ್ಲಿ ಚೇತರಿಸಿಕೊಂಡ ಬಳಿಕ, ವಿಚಾರಣೆಗಾಗಿ ನಿಮ್ಮ (ತನಿಖಾಧಿಕಾರಿ) ಎದುರು ಹಾಜರಾಗುತ್ತೇನೆ’ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಪ್ರಕರಣದಲ್ಲಿ ಮೂರು ಬಾರಿ ರಮೇಶ ಜಾರಕಿಹೊಳಿ ವಿಚಾರಣೆ ಎದುರಿಸಿದ್ದರು. ಸಂತ್ರಸ್ತೆ ನ್ಯಾಯಾಲಯದಲ್ಲಿ ಹೇಳಿಕೆ ನೀಡುತ್ತಿದ್ದಂತೆ, ಮೇ 2ರಂದು ಬೆಳಿಗ್ಗೆ ವಿಚಾರಣೆಗೆ ಬರುವಂತೆ ಎಸ್ಐಟಿ ಅಧಿಕಾರಿಗಳು ನಾಲ್ಕನೇ ನೋಟಿಸ್ ನೀಡಿದ್ದರು. ಆದರೆ, ಜ್ವರದ ಕಾರಣ ನೀಡಿದ್ದ ರಮೇಶ ವಿಚಾರಣೆಗೆ ಗೈರಾಗಿದ್ದರು.

ಸಂತ್ರಸ್ತೆ ತಂದೆ ಅರ್ಜಿ: ನೋಟಿಸ್
ಇದೇ ವೇಳೆ ಸಂತ್ರಸ್ತೆಯ ತಂದೆ ಸಲ್ಲಿಸಿರುವ ಅರ್ಜಿ ಆಧರಿಸಿ ಎಸ್‌ಐಟಿ ಮತ್ತು ಗೃಹ ಇಲಾಖೆಗೆ ಹೈಕೋರ್ಟ್‌ ಏಕ ಸದಸ್ಯ ಪೀಠ ನೋಟಿಸ್ ನೀಡಿದೆ.

‘ನ್ಯಾಯಾಧೀಶರ ಮುಂದೆ ಮಾ.30ರಂದು ಮಗಳು ಹೇಳಿಕೆ ನೀಡುವಾಗ ಕಾಂಗ್ರೆಸ್‌ ಕಾನೂನು ಕೋಶ ಪ್ರಧಾನ ಕಾರ್ಯದರ್ಶಿ ಸೂರ್ಯಮುಕುಂದ್ ರಾಜ್ ಎಂಬ ವಕೀಲರು ಹಾಜರಿದ್ದರು. ಹೀಗಾಗಿ, ಈ ಹೇಳಿಕೆ ಕಾನೂನು ಬಾಹಿರವಾಗಿದೆ’ ಎಂದು ಹೇಳಿದ್ದಾರೆ.

‘ಸಂತ್ರಸ್ತೆ ಹೇಳಿಕೆಯ ಪ್ರತಿ ಸಲ್ಲಿಸಿಲ್ಲ’ ಎಂಬ ಹೈಕೋರ್ಟ್‌ ರಿಜಿಸ್ಟ್ರಾರ್ ಕಚೇರಿ ಎತ್ತಿದ್ದ ಆಕ್ಷೇಪವನ್ನು ಪೀಠ ತಾತ್ಕಾಲಿಕವಾಗಿ ತೆಗೆದು ಹಾಕಿತು. ‘ಸಂತ್ರಸ್ತೆ ಹೇಳಿಕೆಯ ಪ್ರತಿ ನ್ಯಾಯಾಲಯದಲ್ಲಿದ್ದು, ಅಂತಿಮ ವರದಿ ಸಲ್ಲಿಕೆ ವೇಳೆಯಲ್ಲಿ ಅದು ಲಭ್ಯವಾಗಲಿದೆ’ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT