ಭಾನುವಾರ, ಅಕ್ಟೋಬರ್ 2, 2022
18 °C

ಮೂರು ಪ್ರತ್ಯೇಕ ವಿದ್ಯುತ್‌ ಅವಘಡ | ಕೆಪಿಟಿಸಿಎಲ್‌ಗೆ ₹ 1.28 ಕೋಟಿ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹಾಸನ ಮತ್ತು ಬೆಂಗಳೂರು ನಗರಗಳಲ್ಲಿ 2017–18ರ ಅವಧಿಯಲ್ಲಿ ನಡೆದ ಮೂರು ಪ್ರತ್ಯೇಕ ವಿದ್ಯುತ್ ಅವಘಡಗಳಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಪತ್ನಿ ಸೇರಿದಂತೆ ಗಾಯಾಳು ಸಂತ್ರಸ್ತರಿಗೆ ಒಟ್ಟು ₹ 1.28 ಕೋಟಿ ಮೊತ್ತದ ಪರಿಹಾರ ಪಾವತಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಮತ್ತು ಬೆಂಗಳೂರು ವಿದ್ಯುತ್ ಪೂರೈಕೆ ಕಂಪನಿಗೆ (ಬೆಸ್ಕಾಂ) ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಸಲ್ಲಿಸಲಾಗಿದ್ದ ಮೂರು ಪ್ರತ್ಯೇಕ ರಿಟ್‌ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನಿಲ್ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಎರಡು ತಿಂಗಳಲ್ಲಿ ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕು ಮತ್ತು ಓವರ್ ಹೆಡ್ ವಿದ್ಯುತ್ ಲೇನ್‌ಗಳಿಂದ ಅವಘಡ ಸಂಭವಿಸಿದ ಸಂದರ್ಭದಲ್ಲಿ ವಿದ್ಯುತ್ ಪೂರೈಕೆ ಕಂಪನಿಗಳು ಮುಖ್ಯ ಕಚೇರಿಯಿಂದ ವರದಿಗೆ ಕಾಯಬಾರದು’ ಎಂದು ಆದೇಶಿಸಿದೆ.

ಎನ್‌.ಸುಬ್ರಹ್ಮಣ್ಯ: ಹಾಸನ ಜಿಲ್ಲೆಯ ಸಕಲೇಶಪುರದ ಕಾಫಿ ಎಸ್ಟೇಟ್‌ನಲ್ಲಿ ಕಾಳು ಮೆಣಸು ಒಕ್ಕಣೆ ಮಾಡುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಕೃಷಿ ಕಾರ್ಮಿಕ ಎನ್‌. ಸುಬ್ರಹ್ಮಣ್ಯ (36) ಸಾವನ್ನಪ್ಪಿದ್ದ ಪ್ರಕರಣದಲ್ಲಿ ಕೆಪಿಟಿಸಿಎಲ್‌ ₹ 5 ಲಕ್ಷ ಪರಿಹಾರ ನೀಡಿ 2017ರ ನವೆಂಬರ್ 9ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮೃತರ ಪತ್ನಿ ರೇಖಾ, ‘₹ 68.74 ಲಕ್ಷ ಪರಿಹಾರ ನೀಡಲು ಆದೇಶಿಸಬೇಕು‘ ಎಂದು ಕೋರಿದ್ದರು. ಈ ಪ್ರಕರಣದಲ್ಲಿ ₹ 25.52 ಲಕ್ಷ ಪರಿಹಾರ ನೀಡಲು ನ್ಯಾಯಪೀಠ ಆದೇಶಿಸಿದೆ.

ಕೆ.ಚಂದನಾ: ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಬಾಲಕಿ ಕೆ.ಚಂದನಾ 2018ರ ಅಕ್ಟೋಬರ್ 1ರಂದು ತಲೆಯ ಮೇಲೆ ಕಬ್ಬಿಣದ ಕಂಬಿಗಳನ್ನು ಹೊತ್ತು ಮನೆಯ ಮೆಟ್ಟಿಲು ಹತ್ತುತ್ತಿದ್ದಳು. ಈ ವೇಳೆ ಪಕ್ಕದಲ್ಲೇ ಹಾದು ಹೋಗಿದ್ದ 11 ಕೆ.ವಿ.ಸಾಮರ್ಥ್ಯದ ವಿದ್ಯುತ್ ತಂತಿಗಳು ಕಂಬಿಗಳಿಗೆ ಸ್ಪರ್ಶಿಸಿದ್ದವು. ವಿದ್ಯುತ್ ಪ್ರವಹಿಸಿ ಚಂದನಾ ಶೇ 79ರಷ್ಟು ಅಂಗವೈಕಲ್ಯಕ್ಕೆ ತುತ್ತಾಗಿದ್ದಳು. ಆಕೆಗೆ ಬೆಸ್ಕಾಂ ₹ 2.5 ಲಕ್ಷ ಪರಿಹಾರ ನೀಡಿತ್ತು. ಇದನ್ನು ಪ್ರಶ್ನಿಸಿ ₹ 90 ಲಕ್ಷ ಪರಿಹಾರ ಕೋರಿದ್ದ ಈ ಪ್ರಕರಣದಲ್ಲಿ ₹ 51.76 ಲಕ್ಷ ಪರಿಹಾರ ನೀಡಲು ಆದೇಶಿಸಲಾಗಿದೆ.

ಮುಯೀಜ್ ಅಹ್ಮದ್ ಶರೀಫ್‌: ಗುರಪ್ಪನಪಾಳ್ಯದಲ್ಲಿ ಆರು ವರ್ಷದ ಬಾಲಕ ಮುಯೀಜ್ ಅಹ್ಮದ್ ಶರೀಫ್ ಮನೆ ಪಕ್ಕದಲ್ಲಿ ಬಿದ್ದಿದ್ದ ಕ್ರಿಕೆಟ್ ಬಾಲ್ ತೆಗೆದುಕೊಳ್ಳಲು ಹೋದಾಗ ಸಮೀಪದಲ್ಲೇ 66 ಕೆ.ವಿ. ಸಾಮರ್ಥ್ಯದ ಹೈ ಟೆನ್ಷನ್ ತಂತಿಯ ಇಂಡಕ್ಷನ್ ಝೋನ್ ಇತ್ತು. ಇದರಿಂದ ಪ್ರವಹಿಸುತ್ತಿದ್ದ ವಿದ್ಯುತ್ ತಗುಲಿ ಆತನಿಗೆ ಶೇ 80ರಷ್ಟು ಸುಟ್ಟ ಗಾಯಗಳಾಗಿದ್ದವು. 2017ರ ಸೆಪ್ಟೆಂಬರ್ 16ರಂದು ನಡೆದಿದ್ದ ಈ ಘಟನೆಯಲ್ಲಿ ಬೆಸ್ಕಾಂ ₹ 5 ಲಕ್ಷ ಪರಿಹಾರ ಪಾವತಿಸಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು ₹ 90 ಲಕ್ಷ ಪರಿಹಾರವನ್ನು ಬಡ್ಡಿ ಸಮೇತ ನೀಡುವಂತೆ ಕೋರಿದ್ದರು. ನ್ಯಾಯಪೀಠ, ₹ 50.82 ಲಕ್ಷ ಪರಿಹಾರ ಪಾವತಿಸುವಂತೆ ಬೆಸ್ಕಾಂಗೆ ಆದೇಶಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು