ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಗಳ ಮೇಲೆ ನಿಯಂತ್ರಣ ಸಾಧಿಸಲು ನಿರ್ದೇಶಿಸಬೇಕೆಂಬ ಮನವಿ ನಿರಾಕರಿಸಿದ ಹೈಕೋರ್ಟ್‌

Last Updated 29 ಸೆಪ್ಟೆಂಬರ್ 2022, 19:38 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿನ ಮಠಗಳ ಮೇಲೆ ನಿಯಂತ್ರಣ ಸಾಧಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂಬ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿರುವ ಹೈಕೋರ್ಟ್‌ ‘ಒಂದು ವೇಳೆ ಯಾರಾದರೂ ಬಾಧಿತರಿದ್ದರೆ ಅಂಥವರು ಸಿವಿಲ್‌ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಪರಿಹಾರ ಪಡೆಯಲು ಪರ್ಯಾಯ ಮಾರ್ಗವಿದೆ’ ಎಂದು ಮಹತ್ವದ ತೀರ್ಪು ಪ್ರಕಟಿಸಿದೆ.

‘ರಾಮಚಂದ್ರಾಪುರ ಮಠದ ಆಡ ಳಿತವನ್ನು ಸರ್ಕಾರ ತನ್ನ ನಿಯಂತ್ರಣಕ್ಕೆ ಪಡೆಯುವಂತೆ ರಾಜ್ಯ ಮುಜರಾಯಿ ಇಲಾಖೆಗೆ ನಿರ್ದೇಶಿಸಬೇಕು ಮತ್ತು ರಾಜ್ಯದ ಎಲ್ಲಾ ಮಠಗಳ ಮೇಲೆ ನಿಯಂತ್ರಣ ಹೊಂದುವ ದಿಸೆಯಲ್ಲಿ ಶಾಸನವೊಂದನ್ನು ರೂಪಿಸಲು ರಾಜ್ಯ ವಿಧಾನಮಂಡಲಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವ ಜನಿಕ ಹಿತಾಸಕ್ತಿ ಅರ್ಜಿಯನ್ನು ವಿಲೇ ವಾರಿ ಮಾಡಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ಮತ್ತು ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಕಾಯ್ದಿರಿಸಿದ್ದ ತೀರ್ಪನ್ನು ಗುರುವಾರ ಪ್ರಕಟಿಸಿದೆ.

‘ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಆದ್ದರಿಂದ, ಅವರನ್ನು ಪೀಠಾಧಿಪತಿ ಸ್ಥಾನದಿಂದ ಕೆಳಗಿಳಿಯಲು ನಿರ್ದೇಶಿಸಬೇಕು ಮತ್ತು ಅವರನ್ನು ಕಾನೂನು ವಿಚಾರಣೆಗೆ ಒಳಪಡಿಸಲು ನಿರ್ದೇಶಿಸಬೇಕು’ ಎಂದು ಕೋರಿ ಎದುರ್ಕುಳ ಈಶ್ವರ ಭಟ್‌, ಎ.ಕೆ.ಜಯಕೃಷ್ಣ, ಮಯೂರಿ ಗಜಾ ನನ ಉಪಾಧ್ಯಾಯ, ಕಬ್ಸೆ ಅಶೋಕ ಮೂರ್ತಿ, ಜಿ.ಶಂಕರ ಭಟ್‌ ಮತ್ತು ಕೆ.ಟಿ.ಮಹಾಬಲಗಿರಿ ಹೆಗಡೆ 2016ರಲ್ಲಿ ಈ ಅರ್ಜಿ ಸಲ್ಲಿಸಿದ್ದರು.

ಸುದೀರ್ಘ ಕಾನೂನು ಹೋರಾಟದ ಬಳಿಕ ಮೂಲ ಅರ್ಜಿಯನ್ನು ವಿಲೇವಾರಿ ಮಾಡಿರುವ ನ್ಯಾಯಪೀಠ, ‘ಅರ್ಜಿದಾರರ ಮನವಿಯನ್ನು ಪುರಸ್ಕರಿಸಲು ಸಾಂವಿಧಾನಿಕವಾಗಿ ನಮಗೆ ಯಾವುದೇ ವಿಶೇಷ ಅಧಿಕಾರಗಳಿಲ್ಲ. ಹಾಗಾಗಿ, ಈ ಅರ್ಜಿ ವಿಚಾರಣೆಯ ನಿರ್ವಹಣೆಗೆ ಯೋಗ್ಯವಾಗಿಲ್ಲ. ಒಂದು ವೇಳೆ ಅರ್ಜಿದಾರರು ಬಾಧಿತರಾಗಿದ್ದರೆ ಸಿವಿಲ್ ಪ್ರೊಸೀಜರ್ ಕೋಡ್‌ನ ಕಲಂ 92ರ ಅನುಸಾರ ಸಿವಿಲ್‌ ದಾವೆ ಹೂಡಿ ಪರಿಹಾರ ಪಡೆಯಲು ಸ್ವತಂತ್ರರಿದ್ದಾರೆ’ ಎಂದು ಅಭಿಪ್ರಾಯಪಟ್ಟಿದೆ.

‘ಮಠಗಳು ಟ್ರಸ್ಟ್‌ ಅಲ್ಲ’

‘ಧಾರ್ಮಿಕ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಸಾಧ್ಯವಿಲ್ಲ ಎಂಬ ಈ ತೀರ್ಪು ಆಘಾತಕಾರಿ’ ಎಂದು ಪ್ರತಿಕ್ರಿಯಿಸಿರುವ ಹೆಸರು ಹೇಳಲು ಇಚ್ಛಿಸದ ಹೈಕೋರ್ಟ್‌ನ ಹಿರಿಯ ವಕೀಲರು, ‘ಸರ್ಕಾರ ತನಗೆ ಬೇಕೆಂದಾಗಲೆಲ್ಲ ಅನೇಕ ಮಠಗಳ ಮೇಲೆ ಅಧಿಕಾರ ಚಲಾಯಿಸಿದೆ. ಆದರೆ, ರಾಮಚಂದ್ರಾಪುರ ಮಠದ ಮೇಲೆ ಅಧಿಕಾರ ಚಲಾಯಿಸಬೇಕೆಂಬ ವಿಷಯದಲ್ಲಿ ಮಾತ್ರ ಸದ್ಭಕ್ತರ ಅಳಲಿಗೆ ಕಿವಿಯಾಗದೆ ಅನ್ಯಾಯ ಉಂಟು ಮಾಡಿದೆ’ ಎಂದಿದ್ದಾರೆ.

‘ಸರ್ಕಾರ ತನ್ನ ವಿವೇಚನಾಧಿಕಾರ ಬಳಸಿ ಮಠಗಳ ವ್ಯಾಪ್ತಿಯನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯ್ದೆ ವ್ಯಾಪ್ತಿಗೆ ತರಬಹುದು. ಸಂವಿಧಾನದ 162ನೇ ವಿಧಿಯನ್ನು ಬಳಕೆ ಮಾಡುವ ಮೂಲಕ ಮಠಗಳಿಗೆ ಆಡಳಿತಾಧಿಕಾರಿ ನೇಮಕ ಮಾಡಲು ಸೂಕ್ತ ಕ್ರಮ ಕೈಗೊಳ್ಳಬಹುದು. ಇಂತಹ ಕ್ರಮವನ್ನು ಈ ಹಿಂದೆ ಸೋಸಲೆ ವ್ಯಾಸರಾಜ ಮಠ, ತಲಕಾಡು ಬಾಲಕೃಷ್ಣಾನಂದ ಮಠಗಳ ಮೇಲೆ ಚಲಾಯಿಸಿರುವ ಉದಾಹರಣೆಗಳಿವೆ’ ಎಂದಿದ್ದಾರೆ. ‘ವಾಸ್ತವದಲ್ಲಿ ಮಠ ಒಂದು ಧಾರ್ಮಿಕ ಸಂಸ್ಥೆ. ಇದು ಟ್ರಸ್ಟ್‌ ಕಾಯ್ದೆಗೆ ಒಳಪಡುವುದಿಲ್ಲ. ಮಠಗಳಲ್ಲಿ ಪೀಠಾಧಿಪತಿಗಳಿಂದ ಆರ್ಥಿಕ ಅವ್ಯವಹಾರ, ಅತ್ಯಾಚಾರ, ಅಕ್ರಮಗಳು ನಡೆದಾಗ ಸರ್ಕಾರ ನಿಯಂತ್ರಿಸಬೇಕು. ಇಲ್ಲವಾದಲ್ಲಿ ಯಾರೊ ಕೆಲವರು ಅಲ್ಲಿನ ಆಸ್ತಿಪಾಸ್ತಿಯನ್ನು ತಿಂದು ತೇಗುತ್ತಾರೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT